• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ನೆಲದಲ್ಲಿ ಕನ್ನಡದ ಹಣತೆ ಬೆಳಗಿದ ಅಕ್ಕ

By Staff
|
ವಿಶ್ವೇಶ್ವರ ಭಟ್‌
ಮಾತುಕತೆ ಒಂದು : ‘ಕೃಷ್ಣಮೂರ್ತಿ ಅಲ್ವೇನೋ?’

‘ಹೌದು, ನೀನು ರಾಜಶೇಖರ್‌ ಅಲ್ವೇನೋ?’

ಇಬ್ಬರೂ ಗಾಢವಾಗಿ ಆಲಿಂಗಿಸಿಕೊಳ್ಳುತ್ತಾರೆ.

‘ಅಲ್ಲೋ ಕೃಷ್ಣಮೂರ್ತಿ, ಸ್ವಲ್ಪನೂ ಬದಲಾಗಿಲ್ಲ ನೀನು. ಅದ್ಸರಿ, ಇಲ್ಲಿ ಎಲ್ಲಿದ್ದೀಯಾ?’

‘ನಾನು ನ್ಯೂಯಾರ್ಕಿನಲ್ಲಿದ್ದೇನೆ ಕಳೆದ ಹದಿನೈದು ವರ್ಷಗಳಿಂದ. ನೀನು?’

‘ನಾನೂ ನ್ಯೂಯಾರ್ಕಿನಲ್ಲಿದ್ದೇನೆ ಕಣೋ.’

ಮಾತುಕತೆ ಎರಡು : ‘ನನ್ನ ಫ್ರೆಂಡ್ಸ್‌ ಸಿಗುತ್ತಾರೆ ಅಂತ ಬಂದಿದ್ದೆ. ಬಹುತೇಕ ಅನೇಕರು ಸಿಕ್ಕಿದ್ರು. ಎಷ್ಟು ವರ್ಷ ಆಗಿತ್ತು ಗೊತ್ತಾ ಅವರನ್ನೆಲ್ಲ ಭೇಟಿಯಾಗದೇ. ಇನ್ನೆಲ್ಲಿ ಸಿಗುತ್ತಾರೆ ಹೇಳಿ ಕನ್ನಡಿಗರು, ಅದೂ ಒಂದು ವೇದಿಕೆಯಲ್ಲಿ. ನನಗಂತೂ ಬಹಳ ಖುಷಿ ಆಯ್ತು.’

Vishweshwar Bhat at WKCಮಾತುಕತೆ ಮೂರು : ‘ಸಾಹಿತ್ಯದ ಗೋಷ್ಠಿಗಳಲ್ಲಿ ಭಾಗವಹಿಸಬೇಕೆಂದು ಬಂದಿದ್ದೆ. ಒಂದೇ ಕಾಲಕ್ಕೆ ಮೂರ್ನಾಲ್ಕು ಗೋಷ್ಠಿಗಳು ನಡೆಯುತ್ತಿದ್ದವು. ಒಂದರಲ್ಲಿ ಭಾಗವಹಿಸಿದರೆ ಮತ್ತೊಂದು ತಪ್ಪಿಹೋಗುತ್ತಿತ್ತು. ಈ ಬಗ್ಗೆ ಸಂಘಟಕರು ಯೋಚಿಸಬೇಕಿತ್ತು. ಚರ್ಚೆ ಇನ್ನಷ್ಟು ಗಂಭೀರವಾಗಿರಬೇಕಿತ್ತು.’

‘ಅದ್ಸರಿ, ಇನ್ನೂ ಗಂಭೀರ ಆದರೆ ಯಾರು ಕೇಳ್ತಾರೆ? ಬಹುತೇಕ ಎಲ್ಲ ಗೋಷ್ಠಿಗಳೂ ಭಣಗುಡುತ್ತಿದ್ದವು. ಯಾರಿಗೆ ಬೇಕಾಗಿದೆ ಸೀರಿಯಸ್‌ ಚರ್ಚೆ? ನನ್ನ ಕೇಳಿದರೆ ಇಂಥ ಸಮಾವೇಶಗಳಲ್ಲಿ ಈ ಗೋಷ್ಠಿಗಳನ್ನೇ ಇಡಬಾರದು. ಯಾರಿಗೆ ಆಸಕ್ತಿ ಇರುತ್ತೆ ಹೇಳು?’

ಮಾತುಕತೆ ನಾಲ್ಕು : ‘ಸಮಾವೇಶದಲ್ಲಿ ಊಟ ಚೆನ್ನಾಗಿತ್ತು. ನಮ್ಮೂರ ಅಡುಗೆ ಊಟ ಮಾಡಿ ಎಷ್ಟೋ ದಿನಗಳಾಗಿದ್ದವು. ಮೂರು ದಿನ ಬಗೆ ಬಗೆ ಊಟ ಮಾಡಿದ್ದೇ ಲಾಭ. ಆದರೆ ಕಾಫಿ ಮಾತ್ರ ಸಿಗಲಿಲ್ಲ.’ ‘ಊಟ ಮಾಡಲು ಸಮ್ಮೇಳನಕ್ಕೆ ಬರೋ ಬದಲು ದಿನಕ್ಕೊಂದು ಇಂಡಿಯನ್‌ ರೆಸ್ಟೋರೆಂಟ್‌ಗೆ ಹೋಗಬಹುದಿತ್ತಲ್ಲಾ? ಇಲ್ಲಿಗ್ಯಾಕೆ ಬಂದೆ? ಇದೇನು ಊಟದ ಸಮ್ಮೇಳನವಾ?’

ಮಾತುಕತೆ ಐದು : ಮೂರು ದಿನ ಬರೀ ಕನ್ನಡದಲ್ಲಿ ಜೀವಿಸಿದ್ದ ಖುಷಿ ನನ್ನದು. ಒಂದೇ ಜಾಗದಲ್ಲಿ ಇಷ್ಟೊಂದು ಕನ್ನಡಿಗರು ಎಲ್ಲಿ ಸಿಗುತ್ತಾರೆ ಹೇಳಿ. ಇದು ನಿಜಕ್ಕೂ ಅದ್ಭುತ ನನ್ನ ಪಾಲಿಗೆ. ಇದೊಂದು ಸ್ಮರಣೀಯ ಮೇಳ. ಕೇವಲ ಮೂರು ದಿನಗಳಲ್ಲಿ ಮುಗಿದು ಹೋಯ್ತಾ ಅನಿಸಿತು.

ಮಾತುಕತೆ ಆರು : ಗುರುಕಿರಣ್‌ ಸಂಗೀತ ಎಷ್ಟೊಂದು ಮಜಾ ಇತ್ತು. ದೀಪಂ ಸಿಲ್ಕ್ಸ್‌ ಸೀರೆ ಪ್ರದರ್ಶನ ಇದೆ ಅಂತ ಗೊತ್ತಿದ್ರೆ ಇನ್ನೂ ಸ್ವಲ್ಪ ಡಾಲರ್‌ ಹಿಡ್ಕೊಂಡು ಬರ್ತಾ ಇದ್ದೆ. ತಾರಾ, ರಮ್ಯಾ ಜತೆ ನಿಂತುಕೊಂಡು ಫೋಟೋ ತೆಗೆಸಿಕೊಂಡೆ. ಸಕತ್‌ ಮಜಾ ಮಾಡಿದ್ವಿ.

***

Kids holding deepa at WKC 2006ಒಂದು ಸಮಾವೇಶದ ಆಶಯ ಇದೆ ಅಲ್ಲವಾ? ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಡೆದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಕೊನೆಯ ದಿನ ನಿಂತಾಗ ಈ ರೀತಿಯ ತರೇಹವಾರಿ ಮಾತುಕತೆಗಳು ಕೇಳಿ ಬರುತ್ತಿದ್ದವು. ಪ್ರತಿ ಮಾತುಕತೆಯೂ ಸಮ್ಮೇಳನದ ಬಗ್ಗೆ ಬರೆದ ಷರಾದಂತಿತ್ತು. ಪ್ರತಿಯಾಬ್ಬರಿಗೂ ಸಮಾವೇಶ ಒಂದೊಂದು ರೀತಿಯಲ್ಲಿ ಕಂಡಿದ್ದರೆ, ಅಚ್ಚರಿಯೇನಿಲ್ಲ. ಒಂದು ಸಮಾವೇಶ ಪ್ರತಿಯಾಬ್ಬರಿಗೂ ರವಾನಿಸುವ ಸಂದೇಶ ಸಹ ಒಂದೊಂದು ರೀತಿಯಾಗಿಯೇ ಇರುತ್ತದೆ.

ದೂರದ ತಾಯ್ನಾಡನ್ನು ಬಿಟ್ಟು, ತಮ್ಮದಲ್ಲದ ವಿದೇಶಿ ನೆಲದಲ್ಲಿ, ಪರಕೀಯ ಪರಿಸರದಲ್ಲಿ ಭಾಷೆಯಾಂದನ್ನು ನೆಪವಾಗಿಟ್ಟುಕೊಂಡು ಕನ್ನಡಿಗರೆಲ್ಲ ಮೂರು ದಿನಗಳ ಕಾಲ ಒಂದೆಡೆ ಸೇರುವುದಿದೆಯಲ್ಲ ಅದೇ ದೊಡ್ಡ ಸಂಗತಿ. ಅಕ್ಕ ಕನ್ನಡ ಸಮಾವೇಶವನ್ನೂ ಈ ಮಸೂರದಿಂದಲೇ ನೋಡಬೇಕು. ಯಾವುದೇ ಸಮಾವೇಶವಿರಬಹುದು ಅದನ್ನು ಟೀಕಿಸುವುದು, ಸಂಘಟಕರನ್ನು ಬೈಯುವುದು, ಅದು ಸರಿಯಾಗಿರಲಿಲ್ಲ, ಇದು ಚೆನ್ನಾಗಿರಲಿಲ್ಲ ಎಂದು ಹಳಿಯುವುದು ಬಹಳ ಸುಲಭ. ಅದರಲ್ಲೂ ಕನ್ನಡಿಗರಿಗೆ ಈ ಕೆಲಸ ಸಲೀಸು. ಇದನ್ನು ಚೆನ್ನಾಗಿ ಮಾಡಬಲ್ಲರು. ಆದರೆ ಇಂಥ ಸಮಾವೇಶವನ್ನು ಸಂಘಟಿಸುವುದು ಅದೆಷ್ಟು ಕಷ್ಟದ ಕೆಲಸ. ಅದರಲ್ಲೂ ಅಮೆರಿಕದಂಥ ಊರಿನಲ್ಲಿ ಎಷ್ಟು ತಾಪತ್ರಯ ಎಂಬುದನ್ನು ನೋಡಿದರೆ, ಮೊನ್ನೆಯ ಅಕ್ಕ ಸಮಾವೇಶಕ್ಕೆ ಫುಲ್‌ ಮಾರ್ಕ್ಸ್‌ ಕೊಡಲೇಬೇಕು.

ಕಾರ್ಯಕ್ರಮ ಸಂಘಟಕರು ತಮ್ಮ ದೈನಂದಿನ ಕೆಲಸ, ಕಾರ್ಯ, ಒತ್ತಡ, ಜಂಜಡಗಳ ನಡುವೆ, ವಾರದ ಕೊನೆಯ ದಿನಗಳನ್ನು ಬಲಿಗೊಟ್ಟು , ಕುಟುಂಬವನ್ನು ಪಕ್ಕಕ್ಕಿಟ್ಟು ಸಮ್ಮೇಳನವನ್ನು ಅಣಿಗೊಳಿಸುವುದು ಸಣ್ಣ ಮಾತಲ್ಲ. ಅದರಲ್ಲೂ ‘ಅಕ್ಕ’ದಂಥ ಸಮಾವೇಶ ಎರಡು ವರ್ಷಗಳಿಗೊಮ್ಮೆ ನಡೆದರೂ ಅದಕ್ಕಾಗಿ ತಯಾರಿ, ಸಿದ್ಧತೆ ಒಂದು, ಒಂದೂವರೆ ವರ್ಷದಿಂದಲೇ ಆರಂಭವಾಗುತ್ತದೆ. ಈ ಎಲ್ಲ ತಯಾರಿಯನ್ನು ಆರಂಭಿಸಿ ಸಮಾವೇಶದ ದಿನದ ತನಕ ಕೈ ಹಿಡಿದು ಕರೆದುಕೊಂಡು, ಮೂರು ದಿನ ಯೋಗ್ಯವಾಗಿ ಆಯೋಜಿಸಿ, ಬಂದವರನ್ನೆಲ್ಲ ಖುಷಿಪಡಿಸಿ ಕೊನೆಯ ತನಕ ಕಳಿಸಿಕೊಡುವ ತನಕ ಮುತುವರ್ಜಿ ವಹಿಸುವ ಜವಾಬ್ದಾರಿ ಸಂಘಟಕರಿಗಿರುತ್ತದೆ.

ಈ ಹೊಣೆ ನಿಭಾಯಿಸುವಲ್ಲಿ ಸ್ವಲ್ಪ ಏರುಪೇರಾದರೂ ಸಮಾವೇಶದ ಮೇಲೆ ಅದರ ಪರಿಣಾಮ ಬೀರುತ್ತದೆ. ಅದರಲ್ಲೂ ಅಮೆರಿಕದಂಥ ಕರಾರುವಾಕ್ಕಾದ ಊರಿನಲ್ಲಿ ಎಲ್ಲವೂ ಕರಾರುವಾಕ್ಕಾಗಿಯೇ ನಡೆಯಬೇಕು. ಸ್ವಲ್ಪ ಸುಕ್ಕಾದರೂ ಹದ ತಪ್ಪುತ್ತದೆ. ಸಂಘಟಕರ ಕಷ್ಟ ಹಾಗೂ ಅವರಿಂದ ನಾವು ಬಯಸುವ ನಿರೀಕ್ಷೆಯನ್ನು ನಾವು ಈ ಹಿನ್ನೆಲೆಯಲ್ಲೇ ನೋಡಬೇಕು. ಈ ನಿಟ್ಟಿನಲ್ಲಿ ‘ಅಕ್ಕ’ ಸಮ್ಮೇಳನ ಸಂಘಟಕರು ಒಳ್ಳೆಯ ಕೆಲಸ ಮಾಡಿದ್ದಾರೆಂದೇ ಹೇಳಬೇಕು.

ಕನ್ನಡದ ನೆಪದಲ್ಲಿ ಕನ್ನಡಿಗರನ್ನು ಒಂದುಗೂಡಿಸುವುದು ಅದೆಷ್ಟು ಕಷ್ಟದ ಕೆಲಸವೆಂಬುದು ನಮಗೆಲ್ಲ ಗೊತ್ತು. ಬೆಂಗಳೂರಿನಂಥ ಊರಿನಲ್ಲಿ ಕನ್ನಡ ಪುಸ್ತಕ ಬಿಡುಗಡೆಗಾಗಿ ಐವತ್ತು ಮಂದಿಯನ್ನು ಸೇರಿಸುವುದು ಇಂದು ದೊಡ್ಡ ಕೆಲಸವೇ. ಸ್ಟಾರ್‌ ಇಮೇಜ್‌ ಇರುವ ಅತಿಥಿಗಳಿಲ್ಲದಿದ್ದರೆ ಸಭಾಂಗಣ ತುಂಬುವುದು ಕಷ್ಟವೇ. ವಿಚಾರ ಸಂಕಿರಣ, ಗೋಷ್ಠಿಗಳದ್ದೂ ಇದೇ ಪಾಡು. ಕನ್ನಡಕ್ಕೆ ಎಲ್ಲೋ ಒಂದೆಡೆ ಅವಮಾನವಾದರೆ ಐವತ್ತು ಮಂದಿ ಸೇರಿಸುವ ಹೊತ್ತಿಗೆ ಸುಸ್ತು. ಇದರಂಥ ಅವಮಾನ ಕನ್ನಡಕ್ಕೆ ಮತ್ತೊಂದಿಲ್ಲ. ಆದರೂ ಕನ್ನಡಿಗರು ಸೇರುವುದಿಲ್ಲ.

ಬೆಂಗಳೂರಿನಲ್ಲಿ ಕನ್ನಡ ಸಾಯುತ್ತಿದೆ. ಕನ್ನಡಿಗರು ಅಲ್ಪಸಂಖ್ಯಾತರು ಎಂಬ ಸಂಗತಿ ಎಲ್ಲ ಕನ್ನಡಿಗರಿಗೂ ಗೊತ್ತಿದೆ. ಸರ್ಕಾರಕ್ಕೂ ಗೊತ್ತಿದೆ. ಅಷ್ಟಕ್ಕೂ ವಿಧಾನಸೌಧದಲ್ಲಿ ಕುಳಿತಿರುವುದು ತಮಿಳು ಸರ್ಕಾರವೂ ಅಲ್ಲ, ಮರಾಠಿ ಸರ್ಕಾರವೂ ಅಲ್ಲ. ಅದು ಕನ್ನಡ ಸರ್ಕಾರವೇ. ಆದರೂ ಸರ್ಕಾರವು ಏನೂ ಮಾಡುತ್ತಿಲ್ಲ. ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೊಳಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಎಲ್ಲ ಮುಖ್ಯಮಂತ್ರಿಗಳೂ ಹೇಳಿ ಜಾರಿ ಹೋಗುತ್ತಿದ್ದಾರೆ. ಅಪ್ಪ ಹೇಳಿದ್ದೂ ಇದೇ. ಮಗ ಹೇಳುವುದೂ ಅದೇ. ಆದರೆ ಕನ್ನಡ ನೆಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿಸಲು ನೂರಾರು ವಿಘ್ನಗಳು.

ಕರ್ನಾಟಕದ ಎಲ್ಲ ಪಟ್ಟಣಗಳಲ್ಲಿನ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ದಂಡ ಹಾಕುತ್ತಾರೆ. ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಕೀಳರಿಮೆ, ತಾತ್ಸಾರ ನಾವೇ ಬೆಳೆಸುತ್ತಿದ್ದೇವೆ. ಕನ್ನಡ ಮಾಧ್ಯಮಕ್ಕೂ, ಉದ್ಯೋಗಕ್ಕೂ ತಾಳೆ ಹಾಕಿ ಕನ್ನಡವನ್ನು ಹಿತ್ತಲಿಗೆ ಅಟ್ಟಿದವರು ಕನ್ನಡಿಗರೇ. ಈ ವಿಷಯದಲ್ಲಿ ಬೈಯ್ದು ಸುಮ್ಮನಾಗೋಣವೆಂದರೆ, ತಮಿಳರು, ಮರಾಠಿಗರು ನಮ್ಮ ತಂಟೆಗೆ ಬಂದಿಲ್ಲ. ಕನ್ನಡವೇ ಬರದ, ಮಾತನಾಡದವ ಘನ ಸರ್ಕಾರದಲ್ಲಿ ಮಂತ್ರಿಯಾಗುವುದಾದರೆ, ಕನ್ನಡ ಕಲಿಸದ ಶಾಲೆಗಳ ವಿರುದ್ಧ ಕ್ರಮ ಜರುಗಿಸದ ಸಚಿವರಿರುವುದಾದರೆ ಕನ್ನಡದ ನೆಲದಲ್ಲಿ ಕನ್ನಡಕ್ಕೆ ಅವಮಾನಗದೇ ಮತ್ತೇನಾದೀತು? ಇಂದು ಶಾಲೆಗೆ ಹೋಗುತ್ತಿರುವ ಯಾವ ಮಗು ಕನ್ನಡದಲ್ಲಿ ಮಾತಾಡುತ್ತದೆ ಹೇಳಿ. ಕನ್ನಡವೇನಾದರೂ ಉಳಿದಿದ್ದರೆ ಅದು ಮನೆಯಲ್ಲಿ ಮಾತ್ರ. ಅದೂ ಟಿವಿ ಇಲ್ಲದ ರೂಮುಗಳಲ್ಲಿ ಮಾತ್ರ. ಟಿವಿಯಲ್ಲೂ ಬೇರೆ ಭಾಷಾ ಚಾನಲ್ಲೇ. ಕನ್ನಡ ಓದಲು- ಬರೆಯಲು ಬಾರದ, ಕನ್ನಡ ಮಾತಾಡಲು ಬರುವ ಅಥವಾ ಮಾತಾಡಿದರೆ ಅರ್ಥಮಾಡಿಕೊಳ್ಳುವ ಹೊಸ ಕನ್ನಡ ಪೀಳಿಗೆಯನ್ನು ಹುಟ್ಟಿಸುತ್ತಿದ್ದೇವೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮುಂತಾದವುಗಳ ಉದ್ಧಾರಕ್ಕೆ ನಮ್ಮಲ್ಲಿರುವಷ್ಟು ಅಕಾಡೆಮಿಗಳು ಬೇರಾವ ರಾಜ್ಯಗಳಲ್ಲೂ ಇಲ್ಲ. ಕನ್ನಡಕ್ಕೆಂದು ವಿಶ್ವವಿದ್ಯಾಲಯವನ್ನೂ ತೆರೆದಿದ್ದೇವೆ. ಕನ್ನಡದ ಅಭಿವೃದ್ಧಿಗೆಂದು ಪ್ರಾಧಿಕಾರವನ್ನೂ ಹುಟ್ಟು ಹಾಕಿದ್ದೇವೆ. ಅದರ ಅಧ್ಯಕ್ಷರಾಗುವವರಿಗೆ ಕಾರು, ಮನೆ, ಕ್ಯಾಬಿನೆಟ್‌ ಸಚಿವರ ಸ್ಥಾನಮಾನ ಎಲ್ಲವನ್ನೂ ಕೊಟ್ಟು ಕನ್ನಡ ಕೆಲಸಕ್ಕೆ ಹಚ್ಚಿದ್ದೇವೆ. ಕನ್ನಡ ಪುಸ್ತಕಗಳ ಅಭಿವೃದ್ಧಿಗಾಗಿ ಪುಸ್ತಕ ಪ್ರಾಧಿಕಾರ ತೆರೆದಿದ್ದೇವೆ. ಕನ್ನಡಕ್ಕಾಗಿ ಏನೆಲ್ಲ ಮಾಡಬಹುದೋ. ಹಾಗೆ ಮಾಡಿದರೆ ಕನ್ನಡ ಉದ್ಧಾರವಾಗುತ್ತದೆಯೆಂದು ಅನಿಸಿದಾಗಲೆಲ್ಲ ಅವೆಲ್ಲವನ್ನೂ ಮಾಡಿದ್ದೇವೆ. ಕನ್ನಡಕ್ಕಾಗಿ ಸರ್ಕಾರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯೆಂಬುದೊಂದಿದೆ. ಅದಕ್ಕೆ ಆಯುಕ್ತರಾಗಿ ಐಎಎಸ್‌ ದರ್ಜೆಯ ಅಧಿಕಾರಿಯಿದ್ದಾರೆ. ಈ ಇಲಾಖೆ ಸ್ವತಃ ಮುಖ್ಯಮಂತ್ರಿ ಸುಪರ್ದಿನಲ್ಲೇ ಇದೆ. ಆದರೂ ಕನ್ನಡಕ್ಕೆ ಈ ಸ್ಥಿತಿ ಬಂದಿದೆಯೆಂದರೆ ಏನರ್ಥ?

ಕನ್ನಡಕ್ಕೆ ಅವಮಾನವಾಗಲಿ, ಅಪಚಾರವಾಗಲಿ ಅದನ್ನು ಖಂಡಿಸುವ ಹೊಣೆಗಾರಿಕೆಯನ್ನು ಕನ್ನಡಪರ ಸಂಘಟನೆಗಳಿಗೆ ಒಪ್ಪಿಸಿ ಸುಮ್ಮನೆ ಕುಳಿತವರು ನಾವು. ಕನ್ನಡದ ಕೆಲಸಕ್ಕೆ ಕೈ ಎತ್ತಲು, ಕಲ್ಲನ್ನೆಸೆಯಲು ಅವರೇ ಬೇಕು. ಅವರನ್ನು ‘ನವೆಂಬರ್‌ ನಾಯಕರು’ ಎಂದು ಗೇಲಿ ಮಾಡುವವರೂ ನಾವೇ. ಕನ್ನಡಕ್ಕಾಗಿ ಪ್ರತಿಭಟಿಸಿದಾಗ ಅವರನ್ನು ಹಿಡಿದು ಜರೆಯುವವರೂ ನಾವೇ. ಬೆಂಗಳೂರಿನಲ್ಲಿ ಬದುಕಲು, ಉದ್ಯೋಗ ಮಾಡಲು ಇಂದು ಕನ್ನಡ ಬೇಕಿಲ್ಲ. ಕನ್ನಡವೊಂದೇ ಗೊತ್ತಿದ್ದರೆ ಕೆಲಸ ಸಿಗುವುದೂ ಇಲ್ಲ. ಇಂಗ್ಲಿಷ್‌ ಗೊತ್ತಿದ್ದರೆ, ಕನ್ನಡ ಬಲ್ಲವರಿಗಿಂತ ಚೆನ್ನಾಗಿ, ಮರ್ಯಾದೆಯಿಂದ, ಸುಖವಾಗಿ ಬದುಕಬಹುದಾಗಿದೆ. ಕನ್ನಡಕ್ಕೆ ಸಂಕಟ ಬಂದಿರುವುದು ಹೊರಗಿನವರಿಂದ ಅಲ್ಲ. ಖಂಡಿತವಾಗಿಯೂ ನಮ್ಮವರಿಂದಲೇ. ಕನ್ನಡ ನೆಲದಲ್ಲಿ ಕನ್ನಡಕ್ಕೇ ಈ ಸ್ಥಿತಿ ಬಂದರೆ ಕನ್ನಡ ಬೆಳೆಯುವುದಾದರೂ ಹೇಗೆ? ಉಳಿಯುವುದಾದರೂ ಹೇಗೆ?

ಅಮೆರಿಕ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನವನ್ನು ಈ ಹಿನ್ನೆಲೆಯಲ್ಲೂ ಗಮನಿಸಿದಾಗ, ಅಮೆರಿಕ ಕನ್ನಡಿಗರ ಕನ್ನಡ ಅಭಿಮಾನ ಅದೆಷ್ಟು ದೊಡ್ಡದು ಎನಿಸುತ್ತದೆ. ಅಮೆರಿಕ ಕನ್ನಡಿಗರು ತಮ್ಮ ದೈನಂದಿನ ಕೆಲಸ, ಇಂಗ್ಲಿಷಿನ ಅನಿವಾರ್ಯತೆ ನಡುವೆಯೂ ಕನ್ನಡಕ್ಕಾಗಿ ತಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ಜಾಗವಿರಿಸಿಕೊಂಡಿದ್ದಾರೆ. ಅದಕ್ಕಾಗಿ ಸಮಯವನ್ನೂ ಎತ್ತಿಟ್ಟುಕೊಂಡಿದ್ದಾರೆ. ಕನ್ನಡವನ್ನು ತಮ್ಮೂರಿನಲ್ಲಿ ಗಂಟು ಕಟ್ಟಿ ಇಡದೇ, ತಮ್ಮೊಂದಿಗೇ ಕರೆತಂದಿದ್ದಾರೆ. ಕನ್ನಡ ತಮ್ಮೊಂದಿಗೂ ಕೊನೆಯಾಗಬಾರದು. ಅದು ಮುಂದಿನ ಪೀಳಿಗೆಗೂ ಮುಂದುವರಿಯಬೇಕೆಂದು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ವ್ಯವಹರಿಸುತ್ತಾರೆ.

ಯಾರ ಮನೆಗೆ ಹೋದರೂ ಕನ್ನಡದ ವಾತಾವರಣ ಕಾಣುತ್ತದೆ. ಮಾತುಕತೆಯಲ್ಲೂ ಕನ್ನಡವೇ ಆವರಿಸುತ್ತದೆ. ಹೀಗಾಗಿ ಅಮೆರಿಕದಲ್ಲಿದ್ದೂ ಶುದ್ಧ ಕನ್ನಡದಲ್ಲಿ ಬರೆಯುವ, ಸಾಹಿತ್ಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ, ವರ್ಷಕ್ಕೊಂದೆರಡು ಪುಸ್ತಕ, ಕವನ ಸಂಕಲನ, ಕಥಾ ಸಂಕಲನ ಬರೆಯುವ ಶ್ರದ್ಧಾವಂತ ಕನ್ನಡ ಮನಸ್ಸುಗಳು ಸಿಗುತ್ತವೆ. ಕನ್ನಡಿಗರು ಬೇರು ಬಿಟ್ಟಿರುವ ಊರುಗಳಲ್ಲೆಲ್ಲಕನ್ನಡ ಸಂಘಗಳು ಹುಟ್ಟಿಕೊಂಡಿವೆ.

ಅಮೆರಿಕಕ್ಕೆ ಕನ್ನಡಿಗರು ಬಂದರೆ, ಹಾದು ಹೋದರೆ ಅವರನ್ನೆಲ್ಲ ಕರೆದು, ಒಂದು ಉಪನ್ಯಾಸ ಮಾಡಿಸಿ, ಸನ್ಮಾನ ಮಾಡಿಸಿ, ಕಳಿಸಿಕೊಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಇವೇನು ಇಲ್ಲದಿದ್ದರೂ ತಿಂಗಳಿಗೊಮ್ಮೆ ಕನ್ನಡಿಗರೆಲ್ಲ ಸೇರುವ, ಒಂದಷ್ಟು ಹೊತ್ತು ಕನ್ನಡತನ ಮೆರೆಯುವ ಕ್ಷಣಗಳಿಗೆ ಈಡಾಗುತ್ತಾರೆ. ಪರಸ್ಪರ ರಾಗ, ದ್ವೇಷ, ಸಣ್ಣಪುಟ್ಟ ಕೊಂಕು, ಜಾತಿ, ರಾಜಕೀಯದ ನಡುವೆಯೂ ‘ಅಕ್ಕ’ವನ್ನು ಉಳಿಸಿಕೊಂಡಿದ್ದಾರೆ. ‘ಅಕ್ಕ’ದ ನೆಪದಲ್ಲಿ ಸಮಾವೇಶ ಮಾಡುತ್ತಾರೆ. ಆ ಮೂಲಕ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಎಲ್ಲ ಮರೆತು ಮೂರು ದಿನ ಒಂದಾಗುತ್ತಾರೆ. ಮುಂದಿನ ಹಬ್ಬದ ತನಕ ಇದೇ ನೆನಪನ್ನು ಅಗಿಯುತ್ತಾರೆ.

ಇದರ ಒಟ್ಟಾರೆ ಲಾಭ ಕನ್ನಡಕ್ಕೆ. ಇಂಥ ಪ್ರತಿ ಸಮ್ಮೇಳನ ನಡೆದಾಗಲೂ ಕನ್ನಡದ ಬಗ್ಗೆ ಒಂದಷ್ಟು ಚರ್ಚೆ ಹುಟ್ಟಿಕೊಳ್ಳುತ್ತದೆ. ಕನ್ನಡದ ಬಗ್ಗೆ ಕಳವಳ, ಕಾಳಜಿ ವ್ಯಕ್ತವಾಗುತ್ತದೆ. ಅಮೆರಿಕದಲ್ಲಿ ಪುಟ್ಟ ಕರ್ನಾಟಕ ತಲೆಯೆತ್ತುತ್ತದೆ. ಕನ್ನಡ ಎಲ್ಲರನ್ನೂ ಒಂದುಗೂಡಿಸುತ್ತದೆ. ಕನ್ನಡದಲ್ಲಡಗಿದ ಸುಖವೇನೆಂಬುದು ಪದೇ ಪದೆ ಅನುಭವಕ್ಕೆ ಬರುತ್ತದೆ. ನಮ್ಮಲ್ಲಿ ಉಳಿದಿರುವ, ಬಿಟ್ಟುಹೋದ ಕನ್ನಡವೆಷ್ಟು. ಮರಳಿ ಪಡೆಯಲು ಏನು ಮಾಡಬೇಕು ಎಂಬ ಲೆಕ್ಕಾಚಾರವಾದರೂ ಶುರುವಾಗುತ್ತದೆ. ಅಮೆರಿಕದಲ್ಲಿ ಕನ್ನಡ ಸಮ್ಮೇಳನ ನಡೆದರೂ ಮನಸ್ಸು ಕನ್ನಡದ ಬೇರಿನಲ್ಲಿಳಿದು ಮೂಲಸೆಲೆ ಹುಡುಕಲಾರಂಭಿಸುತ್ತದೆ. ಮೊನ್ನೆಯ ಅಕ್ಕ ಸಮ್ಮೇಳನದ ಬೀಜ ಮೊತ್ತ ಇದೇ. ಕನ್ನಡ ತಾಯಿ ಧನ್ಯಳು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more