‘ಗಾಂಧಿ ಹತ್ಯೆ ದೃಶ್ಯ ತಪ್ಪಿಸಿಕೊಂಡಿದ್ದು ಮರೆಯಲಾಗದ ನೋವು’

Vishweshwar Bhat ಸುದ್ದೀಶ
[email protected]

ಈ ದೇಶದ ಪ್ರಪ್ರಥಮ ಮಹಿಳಾ ಫೋಟೊಗ್ರಾಫರ್‌ ಹೊಮೈ ವೈರವಲ್ಲಾ ತೆಗೆದ ಸುಮಾರು ನಾನೂರು ಫೋಟೊಗಳನ್ನು ಹರವಿಕೊಂಡು ಕುಳಿತಿದ್ದೇನೆ. ಇತಿಹಾಸವನ್ನು ತಡಕಿದ, ತಟ್ಟಿದ ಅನುಭವ. ಎಲ್ಲ ಸುಮಾರು 50-60 ವರ್ಷಗಳ ಹಿಂದೆ ತೆಗೆದ ಫೋಟೊಗಳು. ಫೋಟೊ ನೋಡಿದಾಗಲೂ ಹತ್ತಾರು ಬಿಂಬಗಳು, ಹತ್ತಾರು ಕತೆಗಳು. ಪ್ರತಿ ಫೋಟೊ ನಮ್ಮನ್ನು ಅಷ್ಟೇ ವರ್ಷ ಹಿಂಗಾಲ ಪುಟಿಕೆಯಲ್ಲಿ ಕರೆದೊಯ್ಯುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ದಿನಗಳಲ್ಲಿ ತನ್ನ ವೃತ್ತಿ ಜೀವನದ ಉನ್ನತದಲ್ಲಿದ್ದ ಹೊಮೈ, ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದಳು. ಆ ದಿನಗಳಲ್ಲಿ ಹೆಣ್ಣುಮಗಳು ಕೆಮರಾ ಹೆಗಲಿಗೇರಿಸಿಕೊಂಡು ಸೈಕಲ್‌ ತುಳಿಯುತ್ತಾ ಸುತ್ತುವುದು, ಕಾರ್ಯಕ್ರಮಗಳಲ್ಲಿ ಫೋಟೊ ತೆಗೆಯುವುದೇ ಚರ್ಚೆಯ ವಸ್ತುವಾಗಿತ್ತು. ಈ ಜಮಾನದಲ್ಲೂ ಮಹಿಳಾ ಫೋಟೊಗ್ರಾಫರ್‌ಗಳನ್ನು ಕಂಡರೆ ಅಚ್ಚರಿಯ ಕಣ್ಣುಗಳಿಂದ ನೋಡುವುದುಂಟು. ಆದರೆ ಹೊಮೈ ಆ ಕಾಲದಲ್ಲೇ ಮಹಿಳೆಯರು ಸಾಮಾನ್ಯವಾಗಿ ಪ್ರವೇಶಿಸದ ರಂಗದಲ್ಲಿ ಬದುಕನ್ನು ಕಂಡುಕೊಂಡು, ಅಸಾಧಾರಣ ಸಾಧನೆ ಮೆರದಳು.

Homai Vyarawallaದಿವಂಗತ ರಾಷ್ಟ್ರಪತಿ ಡಾ.ರಾಧಾಕೃಷ್ಣನ್‌ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿ, ತಮ್ಮ ಆಸನದಲ್ಲಿ ಕುಳಿತ ಬಳಿಕ ಸುತ್ತೆಲ್ಲಾ ಒಮ್ಮೆ ದೃಷ್ಟಿ ಹಾಯಿಸಿ ಹೊಮೈ ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರಂತೆ. ‘ಆ ಫೋಟೋಗ್ರಾಫರ್‌ ಇದ್ದಾಳಲ್ಲ, ಅವಳಿದ್ದಾಗ ಎಚ್ಚರದಿಂದ ಇರಬೇಕು. ಆಕೆ ಸದಾ ನಮ್ಮ ಮೇಲೆಯೇ ದೃಷ್ಟಿ ನೆಟ್ಟಿರುತ್ತಾಳೆ. ವಿಚಿತ್ರ ಭಂಗಿಗಾಗಿ ಎದುರು ನೋಡುತ್ತಿರುತ್ತಾಳೆ’ ಎಂದು ಹೇಳುತ್ತಿದ್ದರಂತೆ. ಎಷ್ಟೇ ಎಚ್ಚರದಿಂದ ಇದ್ದರೂ ಮರುದಿನದ ಪತ್ರಿಕೆಯಲ್ಲಿ ಹೊಸ ಭಂಗಿಯ ವಿಶೇಷ ಫೋಟೋವನ್ನು ಹೊಮೈ ಸೆರೆಹಿಡಿದಿರುತ್ತಿದ್ದಳು.

ಡಾ.ರಾಧಾಕೃಷ್ಣನ್‌ ಅವರಿಗೆ ಹೊಮೈ ಕಂಡರೆ ವಿಶೇಷ ಅಭಿಮಾನ. ಆಕೆ ಯಾರೂ ತೆಗೆಯದಂಥ ಫೋಟೋ ತೆಗೆಯುತ್ತಿದ್ದಳೆಂಬುದೇ ಅದಕ್ಕೆ ಕಾರಣ. ಒಮ್ಮೆ ಹೊಮೈ ಡಾ.ರಾಧಾಕೃಷ್ಣನ್‌ ಭಾಗವಹಿಸಿದ ಕಾರ್ಯಕ್ರಮದ ಚಿತ್ರಗಳನ್ನು ತೆಗೆಯಲು ಹೋಗಿದ್ದಳು. ಹೊಮೈ ತುಟಿಗೆ ಗಾಯವಾಗಿತ್ತು. ಪುಟ್ಟ ಬ್ಯಾಂಡೇಜನ್ನು ಹಾಕಿಕೊಂಡಿದ್ದಳು. ಅದನ್ನು ಗಮನಿಸಿದ ಡಾ.ರಾಧಾಕೃಷ್ಣನ್‌, ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದು ಹೋಗುವಾಗ were you bitten by your husband? ಎಂದು ಕೇಳಿದರು. ಏನು ಹೇಳಬೇಕೆಂಬುದೇ ಹೊಮೈಗೆ ಗೊತ್ತಾಗಲಿಲ್ಲ.

Homai Vyarawallaಹೊಮೈಗೆ ನೆಹರು ಎಂದರೆ ಅಂದ್ರೆ ವಿಶೇಷ ಆಕರ್ಷಣೆ. ಆಕೆ ಅವರ ಚಿತ್ರದಷ್ಟು ಬೇರೆ ಯಾರ ಚಿತ್ರವನ್ನೂ ಕ್ಲಿಕ್ಕಿಸಿರಲಿಲ್ಲ. ಕಾರ್ಯಕ್ರಮಗಳಲ್ಲಿ ಮುಖಾಮುಖಿಯಾದಾಗ ಒಮ್ಮೆ ನೆಹರು ಹೊಮೈಳನ್ನು ಕರೆದು ಹೇಳಿದ್ದರಂತೆ-‘ನೋಡಿ, ಇಂದು ನಿಮಗಾಗಿಯೇ ನಾನು ಹೊಸ ಡ್ರೆಸ್‌ ಧರಿಸಿ ಬಂದಿದ್ದೇನೆ, ನಿಮ್ಮ ಕೆಮರಾದಲ್ಲಿ ನಾನು ಸುಂದರವಾಗಿ ಕಾಣಲೆಂದು.’ ಗಣ್ಯವಕ್ತಿಗಳೊಂದಿಗೆ ಇಂಥ ಸಲುಗೆಯನ್ನು ಹೊಮೈ ಹೊಂದಿದ್ದಳು. ಇದು ಕೇವಲ ಆಕೆ ಮಹಿಳೆಯಾಗಿದ್ದಳೆಂಬ ಕಾರಣಕ್ಕೆ ಸಿಗುತ್ತಿದ್ದ ವಿಶೇಷ ಅವಕಾಶ ಖಂಡಿತವಾಗಿಯೂ ಆಗಿರಲಿಲ್ಲ. ಅವಳೊಬ್ಬ ಅದ್ಭುತ ಫೋಟೋಗ್ರಾಫರ್‌ ಎಂಬ ಕಾರಣವೇ ಪ್ರಧಾನವಾಗಿತ್ತು.

ಅಂದು ಮಹಮ್ಮದ್‌ ಅಲಿ ಜಿನ್ನಾ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅದು ಅವರ ಕೊನೆಯ ಪತ್ರಿಕಾಗೋಷ್ಠಿ. ಪತ್ರಕರ್ತರು ಕಿಕ್ಕಿರಿದು ಸೇರಿದ್ದರೂ ಸೂಜಿ ಬಿದ್ದರೂ ಕೇಳುವ ಮೌನ. ಹೊಮೈ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಲೇ ಇದ್ದಳು. ಅದು ಜಿನ್ನಾ ಅವರ ಕೊನೆಯ ದರ್ಶನ. ನಾಳೆಯಿಂದ ಅವರು ಪಾಕಿಸ್ತಾನಕ್ಕೆ ಹೋದರೆ ಪುನಃ ಬರಲಾರರು. ಇದೇ ಅವಕಾಶ ಎಂದು ಹೊಮೈ ಕ್ಲಿಕ್ಕಿಸತೊಡಗಿದಳು. ಆದರೂ ಸಮಾಧಾನವಿಲ್ಲ. ಸ್ಟೂಲನ್ನೇರಿ ಕ್ಲಿಕ್ಕಿಸುವಾಗ ಆಯತಪ್ಪಿ ಹೊಮೈ ಬಿದ್ದುಬಿಟ್ಟಳು.

ಜಿನ್ನಾ ಗಹನವಾದ ವಿಚಾರ ಹೇಳುತ್ತಿದ್ದರು. ಬೇರೆಯವರಾಗಿದ್ದರೆ ರೇಗಿ ಬಿಡುತ್ತಿದ್ದರೇನೋ? ಬಿದ್ದಾಕೆ ಹೊಮೈ ಎಂದು ತಕ್ಷಣ ಜಿನ್ನಾಗೆ ಗೊತ್ತಾಯಿತು. ಜಿನ್ನಾ ಕಾಳಜಿಯಿಂದ ತಮ್ಮ ಸಹಾಯಕರಿಗೆ ಆಕೆಯ ರಕ್ಷಣೆಗೆ ಮುಂದಾಗುವಂತೆ ಸೂಚಿಸಿದರು. ಹೊಮೈ ಮೊದಲು ತನ್ನ ಕೆಮರಾವನ್ನು ರಕ್ಷಿಸಿಕೊಂಡಳು ತಟ್ಟನೆ ಎದ್ದು ಪುನಃ ಜಿನ್ನಾ ಫೋಟೋವನ್ನು ತೆಗೆಯಲು ಕೆಮರಾ ಕ್ಲಿಕ್ಕಿಸಲಾರಂಭಿಸಿದಳು. ಜಿನ್ನಾ ನಗುತ್ತಿರುವ ಚಿತ್ರ ಕೆಮರಾ ಪೆಟ್ಟಿಗೆ ಸೇರಿತ್ತು. ಒಂದು ವೇಳೆ ಆಕೆ ಬೀಳದಿದ್ದರೆ ಆ ಭಂಗಿ ಸಿಗುತ್ತಿರಲಿಲ್ಲವೇನೋ? ಈ ಪ್ರಸಂಗವನ್ನು 1951ರ ಮೇ 14ರ ‘ದಿ ಸ್ಟೇಟ್ಸ್‌ಮನ್‌’ ಪತ್ರಿಕೆ ವರದಿ ಮಾಡಿತ್ತು.

ಒಮ್ಮೆ ಪತ್ರಕರ್ತರೊಬ್ಬರು ಹೊಮೈಯನ್ನು ಕೇಳಿದರು-‘ ನೀವು ಈ ದೇಶದ ಧೀಮಂತ ನಾಯಕರೆಲ್ಲರನ್ನೂ ತೀರಾ ಹತ್ತಿರದಿಂದ ಕಂಡಿದ್ದೀರಿ. ಅವರ ಅಪರೂಪದ, ವಿಶಿಷ್ಟ ಭಂಗಿಗಳನ್ನು ಕೆಮರಾದಲ್ಲಿ ಹಿಡಿದಿಟ್ಟಿದ್ದೀರಿ. ಆದರೆ ನೀವು ನೆನಪಿಸಿಕೊಳ್ಳುವ ಮಹತ್ತರ ಪ್ರಸಂಗ ಯಾವುದು?’

ಈ ಪ್ರಶ್ನೆ ಕೇಳುತ್ತಿದ್ದಂತೆ ಮೊಮೈ ಮುಖದಲ್ಲಿ ವಿಷಾದಮುದ್ರೆ ಕವಿಯಿತು. ಅವರು ಅಂದಿನ ಪ್ರಸಂಗವನ್ನು ಮೆಲುಕು ಹಾಕಿದರು.

1948ರ ಜನವರಿ 30. ಹೊಮೈ ಬ್ರಿಟಿಷ್‌ ಇನ್‌ಫಾರ್ಮೇಷನ್‌ ಸರ್ವೀಸ್‌ಗೆ ಕೆಲಸ ಮಾಡುತ್ತಿದ್ದಳು. ಮಹಾತ್ಮಗಾಂಧಿಯವರು ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದರು. ಮೊದಲು ಗಾಂಧೀಜಿಯ ಅನೇಕ ಪ್ರಾರ್ಥನಾ ಸಭೆಗಳಲ್ಲಿ ಹೊಮೈ ಭಾಗವಹಿಸಿ ಫೋಟೋ ತೆಗೆದಿದ್ದಳು. ಆದರೆ ಅಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲ್ಲದೇ ಹೊಮೈಗೆ ವಿಶೇಷ ಪಾಸ್‌ ಸಹ ಸಿಕ್ಕಿತ್ತು. ಆಕೆ ಹೊಸ ಕಲರ್‌ ಕೆಮರಾವನ್ನು ಜತೆಯಲ್ಲಿಟ್ಟುಕೊಂಡು ಸಭೆಗೆ ಇನ್ನೇನು ಹೊರಡುವವಳಿದ್ದಳು. ಅಷ್ಟೊತ್ತಿಗೆ ಮನೆಯಿಂದ ಗಂಡ ಮಾಣಿಕ್‌ ಷಾ ವೈರವಲ್ಲಾ ಫೋನ್‌ ಮಾಡಿ, ‘ಬೇಗ ಮನೆಗೆ ಬಂದು ಬಿಡು, ನಾಳೆ ನಾನೂ ಬರುತ್ತೇನೆ. ಇಬ್ಬರೂ ಹೋಗೋಣ. ನಾಳೆಯೂ ಗಾಂಧೀಜಿ ಪ್ರಾರ್ಥನಾ ಸಭೆಯಿದೆಯಲ್ಲಾ’ ಎಂದ. ಹೊಮೈಗೆ ಪತಿಯ ಮಾತನ್ನು ತೆಗೆದುಹಾಕಲು ಆಗಲಿಲ್ಲ. ಅಲ್ಲದೇ ಆಕೆ ಎರಡು ದಿನಗಳ ಹಿಂದಷ್ಟೇ ಗಾಂಧೀಜಿಯ ಕೆಲ ಚಿತ್ರಗಳನ್ನು ತೆಗೆದಿದ್ದಳು. ಪತಿಯ ಮಾತಿಗೆ ಓಗೊಟ್ಟು ಪ್ರಾರ್ಥನಾ ಸಭೆಗೆ ಹೋಗದೇ ಮನೆಗೆ ಹೋಗಲು ನಿರ್ಧರಿಸಿದಳು.

ಅರ್ಧಗಂಟೆ ಆಗಿರಬಹುದು. ಆ ಭಯಂಕರ ವಾರ್ತೆ ಕೇಳಿ ಹೊಮೈ ಬೆಚ್ಚಿಬಿದ್ದಳು. ಮಹಾತ್ಮಗಾಂಧಿಗೆ ಗುಂಡೇಟು! ಮಹಾತ್ಮ ಹತ್ಯೆ!

ಹೊಮೈ ಜೋರಾಗಿ ಕಿರುಚಲಾರಂಭಿಸಿದಳು. ಎಂಥ ಚಿತ್ರ ತಪ್ಪಿಹೋಯಿತಲ್ಲಾ ಎಂದು ಕೈಕೈ ಹಿಸುಕಿಕೊಂಡಳು. ಮಹಾತ್ಮ ಹತ್ಯೆಯ ದುಃಖ ಒಂದೆಡೆಯಾದರೆ, ಘಟನೆಯನ್ನು ಸೆರೆಹಿಡಿಯಲಿಲ್ಲವಲ್ಲ ಎಂಬ ನೋವು ಇನ್ನೊಂದೆಡೆ.

‘ಅಂದೇನಾದರೂ ನನ್ನ ಪತಿ ಕರೆಯದಿದ್ದರೆ ಖಂಡಿತವಾಗಿಯೂ ನಾನು ಮಹಾತ್ಮರ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಅವರೊಂದಿಗೆ ಇರಲು ನನಗೆ ಅನುಮತಿ ಸಹ ದೊರಕಿತ್ತು. ಕೆಮರಾದ ನೆತ್ತಿಯ ಮೇಲೇ ಸದಾ ಬೆರಳನ್ನಿಟ್ಟುಕೊಳ್ಳುವ ನಾನು ಅಂದೇನಾದರೂ ಅವರ ಜತೆಗಿದ್ದರೆ, ಅವರ ಹತ್ಯೆಯ ದೃಶ್ಯವನ್ನು ಸೆರೆಹಿಡಿದಿರುತ್ತಿದ್ದೆ. ಬೇರೆ ಫೋಟೋಗ್ರಾಫರ್‌ಗಳೂ ಇರಲಿಲ್ಲ. ಇಡೀ ಜಗತ್ತೇ ಬೆರಗಾಗುವಂಥ ಚಿತ್ರವನ್ನು ತೆಗೆದಿರುತ್ತಿದ್ದೆ. ನನ್ನ ದೌರ್ಭಾಗ್ಯ ನೋಡಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ನನ್ನ ಗಂಡ ಮನೆಗೆ ಬಾ ಎಂದು ಕರೆಯಬೇಕೆ? ಆ ಘಟನೆ ನೆನಪಿಸಿಕೊಂಡಾಗಲೆಲ್ಲ ಕರುಳನ್ನು ಕತ್ತರಿಸಿದಂತಾಗುತ್ತದೆ, ಕತ್ತು ಹಿಚುಕಿದಷ್ಟು ಸಂಕಟವಾಗುತ್ತದೆ. ನಾನು ಸಾಯುವ ತನಕವೂ ಈ ನೋವು ನನ್ನಿಂದ ಕದಲಲಾರದು. ನನ್ನ ವೃತ್ತಿ ಜೀವನದ ಅತ್ಯಂತ ನೋವಿನ ಪ್ರಸಂಗವಿದು.’

ಗಾಂಧೀಜಿ ಅಂತ್ಯ ಸಂಸ್ಕಾರದ ಕ್ಷಣಗಳನ್ನು ಹೊಮೈ ಸೆರೆಹಿಡಿದಷ್ಟು ಮತ್ತ್ಯಾರೂ ಸೆರೆಹಿಡಿದಿರಲಾರರು. ಆಹಾರ, ನಿದ್ದೆ ಬಿಟ್ಟು ಆ ನೋವಿನ, ಶೋಕತಪ್ತ ವಾತಾವರಣದ ಮೂಡುಗಳನ್ನು ಕ್ಲಿಕ್ಕಿಸಿದಳು. ಆ ಚಿತ್ರಗಳು ಎಂಥವನ ಮನವನ್ನಾದರೂ ಕರಗಿಸುವಂಥವು. ಗಾಂಧೀಜಿಯ ಅಸ್ಥಿಯನ್ನು ವಿಶೇಷ ರೈಲಿನಲ್ಲಿ ಅಲಹಾಬಾದ್‌ಗೆ ಕೊಂಡೊಯ್ಯುವಾಗ ಹೊಮೈಗೆ ರೈಲಿನಲ್ಲಿ ಪಯಣಿಸುವ ಅವಕಾಶ ನೀಡಲಾಗಿತ್ತು. ಅಲಿಘಡದಲ್ಲಿ ರೈಲು ನಿಂತಾಗ, ಜನರನ್ನು ನಿಯಂತ್ರಿಸಲಾಗಲಿಲ್ಲ. ಜನಜಂಗುಳಿಯಲ್ಲಿ ಹೊಮೈ ಅನುಭವಿಸಿದ ಕಷ್ಟ ಒಂದೆರಡಲ್ಲ. ಆದರೂ ಆಕೆ ಸುಮ್ಮನಾಗಲಿಲ್ಲ. ಪ್ರತಿ ದೃಶ್ಯವನ್ನೂ ಕೆಮರಾದಲ್ಲಿ ತುಂಬಿಕೊಳ್ಳುತ್ತಿದ್ದಳು. ಆ ಚಿತ್ರಗಳಿಗೆ ಇಂದು ಬೆಲೆ ಕಟ್ಟಲಾಗುವುದಿಲ್ಲ. ಅಷ್ಟೊಂದು ಅಮೂಲ್ಯ. ಈ ಎಲ್ಲ ಚಿತ್ರಗಳ ನೆಗೆಟಿವ್‌ಗಳನ್ನು ಜೋಪಾನವಾಗಿ ರಕ್ಷಿಸಿಕೊಳ್ಳಲು ಹೊಮೈಗೆ ಸಾಧ್ಯವಾಗಿಲ್ಲ. ಮನೆ ಬದಲಿಸುವಾಗ ಕೆಲ ಫೋಟೋಗಳು ಕಾಣೆಯಾಗಿವೆ. ಇನ್ನು ಕೆಲವು ಪತ್ರಿಕೆ ಕಚೇರಿಗಳಲ್ಲಿ ಸೇರಿ ಹೋಗಿವೆ. ಆದರೂ ಆಕೆ ಕೆಲವನ್ನು ಸಂಗ್ರಹಿಸಿಟ್ಟಿದ್ದಾಳೆ. ಆ ಕಾಲದಲ್ಲೇ ಆಕೆ ಗಾಂಧಿ ಅಂತ್ಯ ಸಂಸ್ಕಾರದ ಸಾವಿರಕ್ಕೂ ಹೆಚ್ಚು ಫೋಟೋ ಕ್ಲಿಕ್ಕಿಸಿದ್ದಳೆಂದರೆ ಅವಳಲ್ಲಿ ಅದೆಂಥ ಸಂಗ್ರಹವಿದ್ದಿರಬಹುದೆಂದು ಊಹಿಸಬಹುದು. ಅದಕ್ಕಿಂತ ಮುಖ್ಯವಾಗಿ ಕಾಣುವುದು ಫೋಟೋ ತೆಗೆಯುವ ಆಕೆಯ ತೀರದ ದಾಹ.

ಆ ದಿನಗಳಲ್ಲಿ ದಿಲ್ಲಿಯಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮಗಳಿರಲಿ, ಹೊಮೈಗೆ ಆಮಂತ್ರಣವಿರುತ್ತಿತ್ತು. ಇಂದಿರಾಗಾಂಧಿಗೆ ಹೊಮೈ ಸಾಮರ್ಥ್ಯದ ಬಗ್ಗೆ ನಂಬಿಕೆ. ಮನೆಯಲ್ಲಿನ ಖಾಸಗಿ ಕಾರ್ಯಕ್ರಮಕ್ಕೂ ಹೊಮೈಗೆ ಬರಹೇಳುತ್ತಿದ್ದರು. ಸಂಜಯಗಾಂಧಿಯ ಹುಟ್ಟುಹಬ್ಬಕ್ಕೂ ಆಕೆಗೆ ಆಮಂತ್ರಣ ಹೋಗುತ್ತಿತ್ತು. ಹೊಮೈ ವಿಶೇಷ ಕೋರಿಕೆ ಇಟ್ಟಾಗಲೆಲ್ಲ ಇಂದಿರಾ ಎಂದೂ ತಳ್ಳಿಹಾಕಲಿಲ್ಲ. ಇಂದಿರಾಗಾಂಧಿಯವರು ತಮ್ಮ ಸ್ನಿಗ್ಧ ಸೌಂದರ್ಯ ಬಿಟ್ಟುಕೊಟ್ಟಿದ್ದರೆ, ಅದು ಹೊಮೈ ಕೆಮರಾಕ್ಕೆ ಮಾತ್ರ ಎಂದು ಮಾತಾಡಿಕೊಳ್ಳುವ ಹಾಗೆ ಅಪರೂಪದ ಚಿತ್ರಗಳನ್ನು ಸೆರೆಹಿಡಿದಳು. ಹೊಮೈ ಇಂದು ತನ್ನ ಬದುಕಿನ ಸಂಜೆಯಲ್ಲಿರಬಹುದು. ಕೆಮರಾ ಹಿಡಿಯದೇ 35 ವರ್ಷಗಳಾಗಿರಬಹುದು. ಆದರೆ ಎಂದೂ ಮಾಸದ ಈ ಚಿತ್ರಗಳಲ್ಲಿ ಹೊಮೈ ಯಾವತ್ತೂ ಅಚ್ಚಳಿಯದಂತಿರುತ್ತಾಳೆ.

ಮುಖಪುಟ / ಅಂಕಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+