ಮನೆಯಲ್ಲಿ ನವಿಲು ಗರಿ ಇಡುವುದಕ್ಕೂ ಇದೆ ನಿಯಮ: ಈ ಜಾಗದಲ್ಲಿ ತಪ್ಪಿಯೂ ಇಡಲೇಬಾರದು
ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿ ಅತ್ಯಂತ ಮಂಗಳಕರ ವಸ್ತುವಾಗಿದೆ. ಮನೆಯಲ್ಲಿ ಪಾಸಿಟಿವ್ ಎನರ್ಜಿ ಪಸರಿಸಿಕೊಳ್ಳಲಿ ಎನ್ನುವ ಉದ್ದೇಶದಿಂದಲೇ ಅನೇಕರು ಮನೆಯಲ್ಲಿ ನವಿಲುಗರಿಯನ್ನು ಇಡುತ್ತಾರೆ. ಯಾವ ಮನೆಯಲ್ಲಿ ನವಿಲು ಗರಿ ಇರುತ್ತದೆಯೋ ಆ ಮನೆ ನಕಾರಾತ್ಮಕತೆಯಿಂದ ಅಥವಾ ನೆಗೆಟಿವ್ ಎನರ್ಜಿಯಿಂದ ಮುಕ್ತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ನವಿಲುಗರಿಯನ್ನು ವಾಸ್ತು ನಿಯಮಕ್ಕೆ ವಿರುದ್ಧವಾಗಿ ಇರಿಸಿದರೆ, ಅವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ, ನವಿಲು ಗರಿಗಳನ್ನು ಮನೆಯಲ್ಲಿ ಇಡುವ ಮೊದಲು ಅದಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು.
ಮನೆಯಲ್ಲಿ ನವಿಲು ಗರಿಗಳನ್ನು ಎಲ್ಲಿ ಇಡಬಾರದು:
ಸ್ನಾನಗೃಹದಲ್ಲಿ ನವಿಲು ಗರಿಗಳನ್ನು ಇಡಬಾರದು:
ವಾಸ್ತು ಶಾಸ್ತ್ರದ ಪ್ರಕಾರ, ನವಿಲು ಗರಿಗಳನ್ನು ಸ್ನಾನಗೃಹ ಅಥವಾ ಅತಿಯಾದ ಗಲೀಜು ಇರುವ ಸ್ಥಳದಲ್ಲಿ ಇಡಲೇಬಾರದು. ಈ ಸ್ಥಳದಲ್ಲಿ ನವಿಲು ಗರಿಯನ್ನು ಇರಿಸಿದರೆ ಅದರ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಈ ಮೂಲಕ ಅದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಮಾತ್ರವಲ್ಲ ಈ ಸ್ಥಳದಲ್ಲಿ ನವಿಲುಗರಿಯನ್ನು ಇರಿಸಿದರೆ ಅದು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುವ ಬದಲು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆ. ಆದ್ದರಿಂದ, ನವಿಲು ಗರಿಗಳನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು.

ನವಿಲು ಗರಿಗಳನ್ನು ನೆಲದ ಮೇಲೆ ಇಡಬಾರದು:
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ನವಿಲು ಗರಿಯನ್ನು ಯಾವತ್ತೂ ನೆಲದ ಮೇಲೆ ಇಡಬಾರದು. ಅದು ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದು ಯಾರಾದರೂ ಅದನ್ನು ತುಳಿದರೆ ಮತ್ತೆ ಆ ನವಿಲು ಗರಿಯನ್ನು ಮನೆಯ ಒಳಗೆ ಇಡಬಾರದು. ಯಾಕೆಂದರೆ ನೆಲದ ಮೇಲೆ ಬಿದ್ದ ಅಥವಾ ಯಾರಿಂದಲಾದರೂ ತುಳಿಯಲ್ಪಟ್ಟ ನವಿಲು ಗರಿ ಅಶುಭ ಎನ್ನುತ್ತದೆ ವಾಸ್ತು. ನವಿಲು ಗರಿಗಳನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ಇಡಬೇಕು.
ಅಡುಗೆಮನೆಯಲ್ಲಿ ನವಿಲು ಗರಿಗಳನ್ನು ಇಡಬಾರದು:
ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ನವಿಲು ಗರಿಗಳನ್ನು ಇಡಬಾರದು. ವಾಸ್ತು ನಿಯಮದ ಪ್ರಕಾರ ಗ್ಯಾಸ್ ಸ್ಟೌವ್ ಅಥವಾ ಒಲೆಗೆ ತುಂಬಾ ಹತ್ತಿರದಲ್ಲಿ ನವಿಲು ಗರಿಗಳನ್ನು ಇಡುವುದು ಸೂಕ್ತವಲ್ಲ.ಅವುಗಳನ್ನು ಅಡುಗೆಮನೆಯಿಂದ ದೂರ ಇಡುವುದೇ ಸೂಕ್ತ. ಅಡುಗೆಮನೆಯು ಸಕಾರಾತ್ಮಕ ಶಕ್ತಿ ಅಂದರೆ ಪಾಸಿಟಿವ್ ಎನರ್ಜಿಯಿಂದಲೇ ತುಂಬಿರುತ್ತದೆ ಎನ್ನುವುದು ಸಾಮಾನ್ಯವಾಗಿ ಇರುವ ನಂಬಿಕೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿಯೂ ನಿಜವಲ್ಲ. ನವಿಲು ಗರಿಗಳ ಶಕ್ತಿಯು ಅಡುಗೆಮನೆಯನ್ನು ಸಂಪೂರ್ಣವಾಗಿ ಆವರಿಸುತ್ತದೆ. ಹೀಗಾದಾಗ ಅದು ತನ್ನ ಉದ್ದೇಶಿತ ಪರಿಣಾಮವನ್ನು ಬೀರಲು ಸಾಧ್ಯವಾಗುವುದಿಲ್ಲ.
ಈ ಜಾಗದಲ್ಲಿಯೂ ಇಡಬಾರದು ನವಿಲು ಗರಿ:
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮುರಿದ ಗೋಡೆಗಳು ಅಥವಾ ಹಾನಿಗೊಳಗಾದ ವಸ್ತುಗಳು ಇರುವ ಪ್ರದೇಶಗಳಲ್ಲಿ ನವಿಲು ಗರಿಗಳನ್ನು ಇಡಬಾರದು. ಕೊಳಕು ಪ್ರದೇಶಗಳು ಮತ್ತು ಮುರಿದ ವಸ್ತುಗಳ ಬಳಿ ನವಿಲು ಗರಿಗಳನ್ನು ಇಡುವುದರಿಂದ ಮನೆಯ ವಾಸ್ತುವಿಗೆ ಹಾನಿಯಾಗುತ್ತದೆ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಹಾಸಿಗೆಯ ಕೆಳಗೆ ನವಿಲು ಗರಿಗಳನ್ನು ಇಡಬಾರದು:
ನವಿಲು ಗರಿಗಳನ್ನು ಎಂದಿಗೂ ಹಾಸಿಗೆಯ ಕೆಳಗೆ ಇಡಬಾರದು. ಮಾತ್ರವಲ್ಲ ಯಾರಿಗೂ ಕಾಣದ ಜಾಗದಲ್ಲಿ ನವಿಲು ಗರಿಗಳನ್ನು ಇಡಲೂ ಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಅವುಗಳನ್ನು ಯಾವಾಗಲೂ ತೆರೆದ ಮತ್ತು ಸ್ವಚ್ಛವಾದ ಪ್ರದೇಶದಲ್ಲಿ ಇಡಬೇಕು.
ಅಲ್ಲದೆ, ಮನೆಯಲ್ಲಿ ಇಟ್ಟ ನವಿಲು ಗರಿ ಮುರಿದಿರಬಾರದು. ಹಾಗಾಗಿ ಮನೆಯಲ್ಲಿ ನವಿಲುಗರಿ ಇಡುವಾಗ ಅದು ಮುರಿಯದಂತೆ ಎಚ್ಚರವಹಿಸಿ. ಮುರಿದ ನವಿಲು ಗರಿಯು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications