ನವರಾತ್ರಿ 3ನೇ ದಿನ: ಶಕ್ತಿ, ಧೈರ್ಯದ ಸಂಕೇತ ಚಂದ್ರಘಂಟಾ ದೇವಿಗೆ ನೇವೈದ್ಯ ಕ್ಷೀರಾನ್ನ ಮಾಡೋದು ಹೇಗೆ?
Navaratri Recipes: ಅಕ್ಟೋಬರ್ 11ರಿಂದ ಈ ವರ್ಷದ ನವರಾತ್ರಿ ಆರಂಭವಾಗಲಿದ್ದು, ದೇಶಾದ್ಯಂತ ವಿವಿಧ ರೀತಿಯಲ್ಲಿ, ವಿವಿಧ ಹೇಸರಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಮೂರನೇ ದಿನ ಶಕ್ತಿ ಹಾಗೂ ಧೈರ್ಯದ ಸಂಕೇತವಾಗಿರುವ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಉಗ್ರ ಶಕ್ತ, ಚೈತನ್ಯ, ಸಾಹಸ, ಬದ್ಧತೆಯನ್ನು ಪ್ರತಿಬಿಂಬಿಸುವ ಕೆಂಪು ದೇವಿಗೆ ಅತ್ಯಾಪ್ತವಾಗಿದ್ದು, ಬಿಳಿ ಕಮಲ ಹಾಗೂ ಮಲ್ಲಿಗೆ ಪ್ರೀತಿಯ ಪುಷ್ಟಗಳು. ಜೊತೆ ಯಾವುದೇ ಕೆಂಪು ಹೂವುಗಳನ್ನೂ ಅರ್ಪಿಸಬಹುದು.

ದೇವಿಯ ಹಣೆ ಮೇಲೆ ಘಂಟೆ ಅಥವಾ ಅರ್ಧಚಂದ್ರಾಕೃತಿ ಧರಿಸಿದ್ದು, ಬಂಗಾರದಂತ ಅದ್ಭುತ ಮೈ ಬಣ್ಣ ಹೊಂದಿದ್ದಾಳೆ. ಹತ್ತು ಕೈ ಜೊತೆ ಶಿವನಂತೆ ತ್ರಿ ನಯನಿ ಇವಳು. ಕೈಯಲ್ಲಿ ತ್ರಿಶೂಲ, ಗದೆ, ಕತ್ತಿ, ಬಿಲ್ಲು-ಬಾಣ ಮತ್ತು ಕಮಲವನ್ನು ಹಿಡಿದು ಯುದ್ಧಕ್ಕೆ ಸನ್ನದ್ಧಳಾದ ಭಂಗಿಯಲ್ಲಿ, ಸಿಂಹ ಅಥವಾ ಹುಲಿಯನ್ನೇ ವಾಹನವನ್ನಾಗಿಸಿಕೊಂಡಿದ್ದಾಳೆ. ಶೌರ್ಯ, ನ್ಯಾಯ (justice) ಹಾಗೂ ಧೈರ್ಯದ ಸಂಕೇತವಾಗಿದ್ದು, ಈಕೆ ಹಣೆಯಲ್ಲಿರುವ ಗಂಟೆಯ ನಾದ ದುಷ್ಟ ಶಕ್ತಿಯನ್ನು ಓಡಿಸುತ್ತದೆ ಎಂಬ ನಂಬಿಕೆ ಇದೆ. ಮಣಿಪುರ ಚಕ್ರವನ್ನು ಆಳುವ ಚಂದ್ರಾಘಟಿ ಭಕ್ತರ ಭಯ ನಿವಾರಿಸಿ, ಆತ್ಮವಿಶ್ವಾಸ ಹೆಚ್ಚಿಸುತ್ತಾಳೆ. ಶಾಂತಿ, ನೆಮ್ಮದಿ ನೀಡುತ್ತಾಳೆ. ಭಕ್ತರ ಪಾಲಿಗೆ ಶಾಂತ ಹಾಗೂ ಕರುಣಾಮಯಿಯಾಗಿರುವ ದೇವಿ, ಉಗ್ರ ನಿವಾರಣೆಗೆ ರೌದ್ರ ರೂಪ ತಾಳುತ್ತಾಳೆ. "ಓಂ ದೇವಿ ಚಂದ್ರಘಂಟಾಯೈ ನಮಃ" ಎಂದು ಹೇಳಿ ಕೊಂಡಿರೆ ಭಕ್ತರಿಗೆ ಒಲಿಯುತ್ತಾಳೆಂಬ ಪ್ರತೀತಿ ಇದೆ.
ನೇವೈದ್ಯಕ್ಕೆ ಕ್ಷೀರಾನ್ನ ಇಷ್ಟ: ರೆಸಿಪಿ ಇಲ್ಲಿದೆ
ಅಕ್ಕಿ ಪಾಯಸ (ಪಾಲನ್ನ/ಕ್ಷೀರಾನ್ನ) ದೇವಿಗೆ ಪ್ರೀತಿಯ ಖಾದ್ಯವಾಗಿದ್ದು, ಇಲ್ಲಿದೆ ಮಾಡೋ ವಿಧಾನ. ಹಾಲು, ಅಕ್ಕಿ, ಕಾಯಿ ತುರಿ, ಬೆಲ್ಲ ಬಳಸಿ ಮಾಡೋ ಈ ಪಾಯಸ ಸಾಂಪ್ರಾದಾಯಿಕ ಖಾದ್ಯಗಳಲ್ಲಿ ಪ್ರಮುವಾದದ್ದು. ಸ್ವಲ್ಪ ಬೇಗ ಬುಡು ಹಿಡಿಯೋ ಸಾಧ್ಯತೆ ಇರೋದ್ರಿಂದ ತುಂಬಾ ಹುಷಾರಾಗಿ ಮಾಡಬೇಕು. ಬಾಸುಮತಿ ಅಕ್ಕಿ ಬಳಸಿದರೆ ರುಚಿ ಹೆಚ್ಚಾಗುತ್ತೆ. ಜೊತೆಗ ಬಾದಾಮಿ, ಗೋಡಂಬಿ ನೆನಸಿಟ್ಟು ಹಾಲಿನ ಜೊತೆ ಸೇರಿಸಿದರೆ ರುಚಿ ಹೆಚ್ಚುತ್ತದೆ.
Navaratri recipes: ಬೇಕಾಗುವ ಪದಾರ್ಥಗಳು:
• ಹಸಿ ಅಕ್ಕಿ (ಸೋನಾ ಮಸೂರಿ ಅಥವಾ ಬಾಸುಮತಿ): 1/2 ಕಪ್
• ಗಟ್ಟಿ ಹಾಲು: 1 ಲೀಟರ್ (ಗಟ್ಟಿ ಹಾಲು ಉತ್ತಮ)
• ಬೆಲ್ಲದ ಪುಡಿ (ಅಥವಾ ಸಕ್ಕರೆ): 1 ಕಪ್ (ಸಿಹಿಗೆ ತಕ್ಕಷ್ಟು)
• ತುಪ್ಪ: 2-3 ದೊಡ್ಡ ಚಮಚ
• ಏಲಕ್ಕಿ ಪುಡಿ: 1/2 ಚಮಚ
• ಗೋಡಂಬಿ ಮತ್ತು ದ್ರಾಕ್ಷಿ: ತಲಾ 10-12
• ನೀರು: 1/2 ಕಪ್
ಕ್ಷೀರಾನ್ನ ಮಾಡುವ ವಿಧಾನ:
ಮೊದಲು ಅಕ್ಕಿಯನ್ನು 2-3 ಬಾರಿ ಚೆನ್ನಾಗಿ ತೊಳೆದು, ಸುಮಾರು 15 ರಿಂದ 20 ನಿಮಿಷ ಕಾಲ ನೀರಿನಲ್ಲಿ ನೆನೆಸಿಡಿ. ಒಂದು ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್‌ನಲ್ಲಿ 1 ಚಮಚ ತುಪ್ಪ ಹಾಕಿ, ತೊಳೆದ ಅಕ್ಕಿ ಹಾಕಿ 1 ನಿಮಿಷ ಲಘುವಾಗಿ ಹುರಿಯಿರಿ. ನಂತರ ಅದಕ್ಕೆ 1 ಲೀಟರ್ ಹಾಲು ಮತ್ತು ಅರ್ಧ ಕಪ್ ನೀರು ಸೇರಿಸಿ. ಮಧ್ಯಮ ಉರಿಯಲ್ಲಿ ಹಾಲು ಉಕ್ಕಿ ಬರುವವರೆಗೆ ಕೈಯಾಡಿಸಿ. ನಂತರ ಉರಿಯನ್ನು ಸಿಮ್‌ಗಿಟ್ಟು, ಅಕ್ಕಿ ಹಾಲಲ್ಲೇ ಚೆನ್ನಾಗಿ ಮೃದುವಾಗಿ ಬೇಯುವವರೆಗೆ (ಸುಮಾರು 15-20 ನಿಮಿಷ) ಕೈಯಾಡಿಸುತ್ತಿರಿ. (ಕುಕ್ಕರ್ ಬಳಸುವುದಾದರೆ, 1 ಕಪ್ ಹಾಲು ಮತ್ತು 1 ಕಪ್ ನೀರು ಹಾಕಿ ಅಕ್ಕಿಯನ್ನು 3 ವಿಸಿಲ್ ಕೂಗಿಸಿ ಮೆತ್ತಗೆ ಬೇಯಿಸಿ, ನಂತರ ಉಳಿದ ಹಾಲನ್ನು ಸೇರಿಸಿಯೂ ಕುದಿಸಬಹುದು).
ಅಕ್ಕಿ ಚನ್ನಾಗಿ ಬೆಂದು ಹಾಲಿನೊಂದಿಗೆ (milk) ಗಟ್ಟಿಯಾದ ತದನಂತರ, ಅದಕ್ಕೆ ಬೆಲ್ಲದ ಪುಡಿ ಅಥವಾ ಸಕ್ಕರೆ ಸೇರಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿ, ಪಾಯಸದೊಂದಿಗೆ ಒಂದಾಗುವವರೆಗೆ ಕಡಿಮೆ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಕುದಿಸಿ. ಬೆಲ್ಲ ಬಳಸುವಾಗ ಹಾಲು ಒಡೆಯುವ ಸಾಧ್ಯತೆ ಇರುತ್ತದೆ. ಅಕ್ಕಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ, ಸ್ವಲ್ಪ ಆರಿದ ನಂತರ ಬೆಲ್ಲ ಸೇರಿಸಿ ಕೈಯಾಡಿಸಿದರೆ ಸೇಫ್. ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇದನ್ನು ಆಗಲೇ ಸಿದ್ಧವಾದ ಪಾಯಸಕ್ಕೆ ಹಾಕಿ. ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಘಮ ಘಮಿಸುವ ಕ್ಷೀರಾನ್ನ ಚಂದ್ರಘಟಿಯ ನೇವೈದ್ಯಕ್ಕೆ ಸಿದ್ಧವಾಗುತ್ತದೆ.


Click it and Unblock the Notifications
