ದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವಾಗಬಹುದು? ಲೋಕಸಭೆಯಲ್ಲಿ ಬಹುಮತದ ಸರಕಾರವೋ ಅಥವಾ ಅತಂತ್ರ ಸರಕಾರ ಬರಬಹುದೋ? ಹೀಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಬಳಿ ಫೋನ್ ನಲ್ಲಿ ಮಾತನಾಡುತ್ತಾ ಸಹಜ ಕುತೂಹಲದಿಂದ ಕೇಳುತ್ತಾ ಹೋದರೆ, ಉತ್ತರ ಹೇಳುವ ಆಸಕ್ತಿ- ಉತ್ಸಾಹ ಎರಡನ್ನೂ ತೋರಿಸಲಿಲ್ಲ.
ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಸಾಮಾನ್ಯವಾಗಿ ಎರಡನೇ ಪ್ರಶ್ನೆ ಕೇಳುವಷ್ಟರಲ್ಲಿ ಹತ್ತನೇ ಪ್ರಶ್ನೆಯನ್ನೂ ಊಹಿಸಿ, ಉತ್ತರ ಹೇಳುತ್ತಾರೆ. ಆದರೆ ಈ ಬಾರಿ ಲೋಕಸಭೆ ಚುನಾವಣೆಯು ಘೋಷಣೆ ಆಗಿರುವ ಸಮಯದ ಗ್ರಹಸ್ಥಿತಿಯನ್ನು 1945-46ರಂತೆ ಇದೆ ಎಂದ ಅವರು, ಆಗ ಏನೇನಾಗಿತ್ತೋ ಹುಡುಕಿಕೊಳ್ಳಿ ಎಂದರು.
ಕಾಲಜ್ಞಾನ ಬ್ರಹ್ಮ ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ
ಹಿರೋಶಿಮಾದ ಮೇಲೆ ಆದ ಅಣು ಬಾಂಬ್ ದಾಳಿ, ಬಂಗಾಲದಲ್ಲಿನ ನೌಖಾಲಿ ನರಮೇಧ (ಈಗಿನ ಬಾಂಗ್ಲಾದೇಶದ) ಸಂಭವಿಸಿದ್ದು ಕೂಡ ಅದೇ ವರ್ಷದಲ್ಲಿ. ಅಂದಿನ ಕಾಲದಲ್ಲಿ ಈ ಪರಿಯಾಗಿ ಮಾಧ್ಯಮಗಳ ಪ್ರಭಾವ ಇರಲಿಲ್ಲ. ಆದ್ದರಿಂದ ಬಹಳ ದೊಡ್ದ ಸಂಖ್ಯೆಯ ಜನರಿಗೆ ಆಗಿನ ಘಟನೆ ಬಗ್ಗೆ ಮತ್ತು ಅದರ ಭೀಕರತೆ ಬಗ್ಗೆ ಗೊತ್ತಾಗಲಿಲ್ಲ. ಆದರೆ ಅಂಥದ್ದೇ ಗ್ರಹ ಸ್ಥಿತಿ ಈಗ ಮತ್ತೆ ಬಂದಿದೆ ಎಂದು ಕ್ಷಣ ಕಾಲ ಮೌನವಾದರು ಅಮ್ಮಣ್ಣಾಯ.

ಹಿಟ್ಲರ್ ನ ಕ್ರೌರ್ಯದ ಉಚ್ಛ್ರಾಯ ಕಾಲ ಘಟ್ಟ
ಆಗಿನ ಅಣ್ವಸ್ತ್ರ ದಾಳಿ, ಬಾಂಗ್ಲಾದೇಶದ ನರಮೇಧ ನಡೆದದ್ದು ಜನಾಂಗೀಯ ದ್ವೇಷದ ಫಲವೇ. ಇನ್ನು ಹಿಟ್ಲರ್ ನಡೆಸಿದ ನರಮೇಧದ ಉಚ್ಛ್ರಾಯ ಕಾಲಘಟ್ಟ ಕೂಡ ಯಾವುದು ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಎರಡು ಜನಾಂಗದ ಮಧ್ಯೆ ದೊಡ್ಡ ಮಟ್ಟದ ಕಾದಾಟ ಹಾಗೂ ಹೋರಾಟವನ್ನು ಸೂಚಿಸುವ ಗ್ರಹ ಸ್ಥಿತಿಯ ಕಾಲಕ್ಕೆ ಮತ್ತೊಮ್ಮೆ ಮುಖಾಮುಖಿ ಆಗಿದ್ದೇವೆ. ಈ ಹಿಂದೆ ಹಿಂಸಾಚಾರ ನಡೆದಾಗ ಮಿಥುನ ರಾಶಿಯಲ್ಲಿ ಶನಿ ಇದ್ದು, ಅಗ್ನಿ ತತ್ವ ರಾಶಿಯಾದ ಸಿಂಹ ಹಾಗೂ ಧನು ರಾಶಿಯ ವೀಕ್ಷಣೆ ಮಾಡುತ್ತಿದ್ದ. ಕೇತು ಗ್ರಹವನ್ನು ಕುಜ ಹಾಗೂ ಶನಿ ವೀಕ್ಷಣೆ ಮಾಡುತ್ತಾರೆ. ಶನಿಯು ವಾಯು ತತ್ವವಾದ ಮಿಥುನ ರಾಶಿಯಲ್ಲಿದ್ದು, ಅಗ್ನಿ ತತ್ವ ವೀಕ್ಷಣೆ ಮಾಡುವುದರಿಂದ ಈ ದುರಂತವನ್ನು ಸೂಚಿಸಿದೆ ಹಾಗೂ ಸಂಭವಿಸಿದೆ ಎಂದರು.

ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು
ಸದ್ಯಕ್ಕೆ ಅಗ್ನಿ ತತ್ವವಾದ ಧನು ರಾಶಿಯಲ್ಲಿ ಶನಿ ಇದ್ದು, ವಾಯು ತತ್ವವಾದ ಕುಂಭ ರಾಶಿಯನ್ನು (ಮಾರಕ ದೃಷ್ಟಿ) ನೋಡುತ್ತಾನೆ. ಶನಿ ಹಾಗೂ ಕೇತು ಗ್ರಹ ಧನುಸ್ಸು ರಾಶಿಯಲ್ಲಿದ್ದು, ಕುಜ ಗ್ರಹದ ನೇರ ದೃಷ್ಟಿ ಇರುತ್ತದೆ. ಮತ್ತೊಮ್ಮೆ ಜನಾಂಗೀಯ ಕಲಹ ಸೃಷ್ಟಿ ಆಗಬಹುದು. ಆಗ ಅಂದರೆ ಎಪ್ಪತ್ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಈಗ ಕೂಡ ಅಂಥದ್ದೇ ಸನ್ನಿವೇಶ ಸೃಷ್ಟಿ ಆಗಬಹುದು ಎಂಬುದನ್ನು ಗ್ರಹ ಸ್ಥಿತಿಗಳು ಸೂಚಿಸುತ್ತಿವೆ. ಪಾಕಿಸ್ತಾನವು ತನ್ನ ಬಳಿ ಇರುವ ಅಣ್ವಸ್ತ್ರವನ್ನು ಬಳಸಲು ಮುಂದಾಗಿ, ತಾನಾಗಿಯೇ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬಹುದು. ಅಥವಾ ಅಣು ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.

1871ರಲ್ಲಿ ಕೂಡ ದೊಡ್ಡ ಅನಾಹುತ ಸಂಭವಿಸಿತ್ತು
1871ರಲ್ಲಿ ಕೂಡ ಧನುಸ್ಸು ರಾಶಿಯಲ್ಲಿ ಶನಿ ಹಾಗೂ ಕೇತು ಯುತಿ ಸಂಭವಿಸಿತ್ತು. ಆಗಲೂ ಜಗತ್ತಿನಲ್ಲಿ ಆತಂಕಕಾರಿ ಸನ್ನಿವೇಶ ಸೃಷ್ಟಿ ಆಗಿತ್ತು ಎಂದು ಇತಿಹಾಸಗಳು ಹೇಳುತ್ತವೆ. ವಿಚಿತ್ರ ಕಾಯಿಲೆ ಕಾಣಿಸಿಕೊಂಡು, ಜನರು ಸಾವನ್ನಪ್ಪಿದ್ದರು ಎಂದು ತಿಳಿದುಬರುತ್ತದೆ. ಆಗಿನ ವಾತಾವರಣ ಸೃಷ್ಟಿ ಆಗಲು ಕಾರಣವಾದ ಗ್ರಹ ಸ್ಥಿತಿಯೇ ಇಂದಿಗೆ ಮತ್ತೆ ಎದುರಾಗಿದೆ. ಯಾವುದೇ ದೊಡ್ಡ ಕದನವೊಂದರ ಮುನ್ಸೂಚನೆಯಾಗಿ ಸಣ್ಣದು ಎನಿಸುವ ಅಥವಾ ಮುನ್ಸೂಚನೆಯಂಥ ಘಟನೆಗಳು ಸಂಭವಿಸುತ್ತವೆ. ಸಣ್ಣ ಕಿಡಿಯನ್ನು ಹೊತ್ತಿಕೊಳ್ಳಲು ಬಿಟ್ಟರೆ ಅಥವಾ ನಿರ್ಲಕ್ಷ್ಯ ಮಾಡಿದರೆ ಹೇಗೆ ಮುಂದೆ ದೊಡ್ಡ ಬೆಂಕಿಯಂತಾಗಿ, ಆಸ್ತಿ-ಪ್ರಾಣ ಹಾನಿ ಮಾಡುತ್ತದೋ, ಅದೇ ರೀತಿ ಈಗಲೂ ಸನ್ನಿವೇಶ ಇದೆ ಎಂದರು.

ನಿಗದಿಯಂತೆ, ಸುಸೂತ್ರವಾಗಿ ಚುನಾವಣೆ ನಡೆಯಲಿ
ಭಾರತದ ಲೋಕಸಭೆ ಚುನಾವಣೆ ಏನಾಗಬಹುದು ಅಂತ ಕೇಳಿದರೆ ಎಪ್ಪತ್ತೆರಡು ವರ್ಷದ ಹಿಂದಿನ, ನೂರಾ ನಲವತ್ತು ವರ್ಷ ಹಳೆಯ ಘಟನೆಗಳನ್ನು ಹೇಳುತ್ತಿದ್ದೀರಲ್ಲಾ ಎಂಬ ಪ್ರಶ್ನೆ ಕೇಳಿದರೆ, ಚುನಾವಣೆ ಫಲಿತಾಂಶ ಏನಾಗುತ್ತದೆ ಎಂಬ ಕುತೂಹಲ ನಿಮ್ಮದು. ಆಗೆಲ್ಲ ಅಷ್ಟು ದೊಡ್ಡ ಪ್ರಮಾಣದ ಜನಾಂಗೀಯ ಹತ್ಯೆ ಹಾಗೂ ಅನಾಹುತ ಸಂಭವಿಸಿತ್ತಲ್ಲಾ, ಈ ಸಲ ಏನಾಗಬಹುದೋ ಎಂಬ ಆತಂಕ ನನ್ನದು. ಈ ಬಾರಿಯ ಲೋಕಸಭೆ ಚುನಾವಣೆ ನಿಗದಿಯಂತೆ, ಸುಸೂತ್ರವಾಗಿ ನಡೆಯಲಿ ಎಂದು ಆ ದೇವರನ್ನು ಪ್ರಾರ್ಥನೆ ಮಾಡುತ್ತೇನೆ. ಜತೆಗೆ ಸ್ಥಿರ ಸರಕಾರ ಬರುವಂತಾಗಲಿ, ದೇಶದ ಮುನ್ನಡೆಗೆ ಪೂರಕವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಮಾತು ಮುಗಿಸಿದರು.