AI: ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಿಕೆ ನಿರೀಕ್ಷೆ: ನಗರದಲ್ಲಿ GCC ಸ್ಥಾಪನೆಗೆ SCI ಒಲವು: ಎಂಬಿ ಪಾಟೀಲ
ಲಂಡನ್/ಬೆಂಗಳೂರು, ನವೆಂಬರ್ 25: ಲಂಡನ್ ಪ್ರವಾಸದಲ್ಲಿರುವ ಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಭಾರೀ ಬಂಡವಾಳ ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. ಯುಕೆ ಮೂಲಕ ಎಸ್.ಸಿ.ಐ ಸೆಮಿಕಂಡಕ್ಟರ್ಸ್ ಕಂಪನಿಯು ಕರ್ನಾಟಕದಲ್ಲಿ ತನ್ನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ (ಜಿಸಿಸಿ) ಸ್ಥಾಪಿಸುವ ಆಸಕ್ತಿ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಂಪನಿಯ ಉದ್ದೇಶಿತ ಬಂಡವಾಳ ಹೂಡಿಕೆ ಮತ್ತು ಭವಿಷ್ಯದ ಸಹಭಾಗಿತ್ವ ಎರಡಕ್ಕೂ ಸರಕಾರದ ಸಂಪೂರ್ಣ ಬೆಂಬಲದ ಖಚಿತ ಭರವಸೆಯನ್ನು ಕೊಡಲಾಗಿದೆ. ಇದರಿಂದ ಕಂಪ್ಯೂಟರ್ ಸುರಕ್ಷತೆಗೆ ಅಗತ್ಯವಿರುವ ಅಂತರ್ಗತ ಸುರಕ್ಷೆತೆ ಹೊಂದಿದ ಮೈಕ್ರೋ ಪ್ರೋಸೆಸರುಗಳ ತಯಾರಿಕೆ ಸ್ಥಳೀಯವಾಗಿಯೇ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಮೂರು ದಿನಗಳ ಇಂಗ್ಲೆಂಡ್ ಪ್ರವಾಸದಲ್ಲಿರುವ ಸಚಿವರು ಎರಡನೇ ದಿನ ಮಂಗಳವಾರವು ವಿವಿಧ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇನ್ನೂ ಸೋಮವಾರ ತಡರಾತ್ರಿ ಎಸ್.ಸಿ.ಐ ಸೆಮಿಕಂಡಕ್ಟರ್ ಕಂಪನಿ ಮಾತ್ರವಲ್ಲದೆ, ವಿಯರ್ ಗ್ರೂಪ್, ಲೇಟೋಸ್ ಡೇಟಾ ಸೆಂಟರ್, ಸ್ಯಾಮ್ಕೋ ಹೋಲ್ಡಿಂಗ್ಸ್, ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಕಂಪನಿಗಳ ಮುಖ್ಯಸ್ಥರೊಂದಿಗೆ ಬಂಡವಾಳ ಹೂಡಿಕೆ/ಹೂಡಿಕೆ ವಿಸ್ತರಣೆ ಕುರಿತು ಪ್ರತ್ಯೇಕ ಸಭೆ ಮಾಡಿದರು.

ಎ.ಆರ್.ಎಂ. ಸೆಮಿಕಂಡಕ್ಟರ್ಸ್ ಕಂಪನಿಯ ಎರಡನೇ ಅತ್ಯಂತ ದೊಡ್ಡ ಕಚೇರಿ ಬೆಂಗಳೂರಿನಲ್ಲಿದೆ. ಅದು ಆಸ್ಟಿನ್-ಬೆಂಗಳೂರು-ಕ್ಯಾಲಿಫೋರ್ನಿಯಾ (ಎಬಿಸಿ) ವ್ಯಾಪ್ತಿ ಹೊಂದಿದೆ. ಈಗ ಕಂಪನಿಯು ತನ್ನ ಜಾಗತಿಕ ಕೇಂದ್ರಗಳಲ್ಲಿ ಸಹಭಾಗಿತ್ವವನ್ನು ವಿಸ್ತರಿಸಿಕೊಳ್ಳಲು ಬಯಸಿದೆ. ಬೆಂಗಳೂರಿನಲ್ಲಿ ತನ್ನ ಮತ್ತೊಂದು ಕಚೇರಿಯನ್ನು ಸ್ಥಾಪಿಸಲು ಒಲವು ಹೊಂದಿದೆ. ಈ ಸಂದರ್ಭದಲ್ಲಿ ಕೇಂಬ್ರಿಡ್ಜ್ ಮತ್ತು ಬೆಂಗಳೂರು ನಗರಗಳೆರಡೂ ಸೆಮಿಕಂಡಕ್ಟರ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಹಾಗೂ ಪ್ರತಿಭಾವಂತ ಯುವ ಗುಂಪು ಹೊಂದುವ ಬಗ್ಗೆ ಚರ್ಚಿಸಲಾಯಿತು ಎಂದರು.
AI ಸಂಬಂಧಿ ಕೇಂದ್ರ ತೆರೆಯಲು ಆಸಕ್ತಿ
ಸ್ಯಾಮ್ಕೋ ಹೋಲ್ಡಿಂಗ್ಸ್ ಕಂಪನಿಯು ರಾಜ್ಯದ ಮರುಬಳಕೆ ಇಂಧನ, ಎಥನಾಲ್ ಉತ್ಪಾದನೆ ಮತ್ತು ಬ್ಯಾಟರಿ ತಯಾರಿಕೆ ವಲಯಗಳಲ್ಲಿ ಬಂಡವಾಳ ಹೂಡುವ ಮನಸ್ಸು ಹೊಂದಿದೆ. ಹಾಗೆಯೇ ಲೇಟೋಸ್ ಡೇಟಾ ಸೆಂಟರ್ ಕಂಪನಿಯು ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಕ್ಕೆ ಸಂಬಂಧಿಸಿದ ಇನ್ಕ್ಯುಬೇಷನ್ ಕೇಂದ್ರವನ್ನು ತೆರೆಯಲು ಆಸಕ್ತಿ ತೋರಿಸಿದೆ ಎಂದು ತಿಳಿಸಿದರು.
ನಾವು ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಇದಕ್ಕೆಲ್ಲ ಆದ್ಯತೆ ಕೊಡುತ್ತಿರುವ ಸಂಗತಿಯನ್ನು ಅವರ ಗಮನಕ್ಕೆ ತಂದಿದ್ದೇವೆ. ಜತೆಗೆ ಮರುಬಳಕೆ ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದ ಡೇಟಾ ಸೆಂಟರುಗಳನ್ನು ತೆರೆಯಲು ಕರ್ನಾಟಕದಲ್ಲಿರುವ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಖನಿಜ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ವಿಯರ್ ಗ್ರೂಪ್ ಕಂಪನಿಯು ಬೆಂಗಳೂರಿನ ಸಮೀಪ ಈಗಾಗಲೇ ತನ್ನ ತಯಾರಿಕಾ ಘಟಕ ಹೊಂದಿದೆ. ಅದನ್ನು ಮತ್ತಷ್ಟು ವಿಸ್ತರಿಸಲು ಚಿಂತಿಸುತ್ತಿದೆ. ಇದಕ್ಕೆ ರಾಜ್ಯದ ಹೊಸ ಕೈಗಾರಿಕಾ ನೀತಿಯ ಪ್ರಕಾರ ಎಲ್ಲಾ ಬೆಂಬಲ ಕೊಡುವ ಆಶ್ವಾಸನೆ ಕೊಡಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.












Click it and Unblock the Notifications