Hasanamba Jatra 2025: ಹಾಸನಾಂಬ ಉತ್ಸವ ಹಿನ್ನೆಲೆ ಭಾರೀ ಭದ್ರತೆ
Hasanamba Jatra 2025: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಇದೇ ಅಕ್ಟೋಬರ್ 9ರಿಂದ ಆರಂಭವಾಗಲಿದೆ. ಈ ಉತ್ಸವ ಅಕ್ಟೋಬರ್ 23ರ ವರೆಗೆ ಉತ್ಸವ ನಡೆಯಲಿದ್ದು, ಹಾಗಾದ್ರೆ ಈ ಬಾರಿ ಭದ್ರತಾ ವ್ಯವಸ್ಥೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತಿಹಾಸ ಪ್ರಸಿದ್ಧ ಹಾಸನಾಂಬ ಉತ್ಸವ ಅಕ್ಟೋಬರ್ 9ರಿಂದ ಆರಂಭವಾಗಲಿದೆ. ದೇವಿ ದರ್ಶನ ಪಡೆಯಲು ಬರೀ ಜಿಲ್ಲೆಯಷ್ಟೇ ಅಲ್ಲದೆ, ಹೊರ ಜಿಲ್ಲೆಗಳು, ಬೇರೆ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಲಿದ್ದಾರೆ. ಆದ್ದರಿಂದ ಈ ವೇಳೆ ಜನ ಸಂದಣಿ ನಿಯತ್ರಿಸುವ ಉದ್ದೇಶದಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ಹಾಸನಾಂಬ ಉತ್ಸವಕ್ಕೆ ಆಗಮಿಸುವ ಜನರನ್ನು ನಿಯಂತ್ರಣ ಮಾಡಲು 2,000 ಪೊಲೀಸರನ್ನು ನೇಮಕ ಮಾಡಲಾಗಿದೆ. 280ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಡ್ರೋನ್ ಕ್ಯಾಮೆರಾ ಸಹ ಬಳಕೆಯಲ್ಲಿದೆ. ಈ ಎಲ್ಲವುಗಳಿಗೂ ಎಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಸ್ಥಳದಲ್ಲೇ ಕಂಟ್ರೋಲ್ ರೂಂ ನಿರ್ಮಣ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇತಿಹಾಸ ಪ್ರಸಿದ್ಧ ಹಾಸನಾಂಭ ಉತ್ಸವದಲ್ಲಿ ಪ್ರಸ್ತುತ ವರ್ಷದಿಂದ ವಿಐಪಿ ಸಂಪ್ರದಾಯಕ್ಕೆ ಬ್ರೇಕ್ ನೀಡಿ ಜನಸ್ನೇಹಿ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅಕ್ಟೋಬರ್ 6ರಂದು ವಿಕಾಸಸೌಧದಲ್ಲಿ ಹಾಸನ ಜಿಲ್ಲೆಯ ಶಾಸಕರು ಸಂಸದರು ಹಾಗೂ ಅಧಿಕಾರಿಗಳು ಜೊತೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಾಸನಾಂಭ ಉತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿದ್ದಾರೆ. ಆದ್ದರಿಂದ, ಈ ವರ್ಷದಿಂದ ಈ ಸಂಸ್ಕೃತಿಕ ತಿಲಾಂಜಲಿ ಹಾಡಲಾಗುವುದು. ಅಲ್ಲದೆ, ಜನಸ್ನೇಹಿ ಹಾಸನಾಂಭ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಕಳೆದ ವರ್ಷ ಹಾಸನದಲ್ಲಿ ವಿಐಪಿಗಳ ಎಸ್ಕಾರ್ಟ್‌ಗಳದ್ದೇ ಸದ್ದು ಹೆಚ್ಚಾಗಿತ್ತು. ಆದರೆ, ಈ ವರ್ಷ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗುವುದು, ಎಂದು ತಿಳಿಸಿದರು.
ಶಾಸಕರು, ಸಚಿವರು ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ-ಮೇಲ್ ಅಥವಾ ಫೋನ್ ಕರೆಗಳ ಮೂಲಕ ಮೊದಲೇ ತಿಳಿಸಬೇಕು. ಮಾಹಿತಿ ನೀಡುವ ಗಣ್ಯವ್ಯಕ್ತಿಗಳನ್ನು ಜಿಲ್ಲಾಡಳಿತ ಏರ್ಪಡಿಸಿರುವ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಗಣ್ಯ ವ್ಯಕ್ತಿಗಳಿಗೆ ತಮ್ಮ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ಆಗಮಿಸಲು ಅವಕಾಶವಿಲ್ಲ, ಎಂದು ತಿಳಿಸಿದರು.
ಅಷ್ಟೇ ಅಲ್ಲದೆ, 1,000 ರೂಪಾಯಿ ಹಾಗೂ 300 ರೂಪಾಯಿ ಬೆಲೆಯ ಪಾಸ್‌ಗಳನ್ನೂ ವಿತರಣೆ ಮಾಡಲಾಗುವುದು. ಪಾಸ್ ಪಡೆದವರಿಗೆ ದೇವರ ದರ್ಶನದ ಜೊತೆಗೆ ಪ್ರಸಾದವನ್ನೂ ನೀಡಲಾಗುವುದು. ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಎಸ್ಕಾರ್ಟ್‌ನಲ್ಲಿ ಆಗಮಿಸುವವರಿಗೆ ಬೆಳಗ್ಗೆ 10:30ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಅವಕಾಶ ಇರಲಿದೆ. ಎಂದು ಹೇಳಿದರು.
ಪಾಸ್ ಪಡೆದವರಿಗೆ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ಪ್ರವೇಶ ನೀಡಲಾಗುವುದು. ಒಂದು ದಿನಕ್ಕೆ 1,000 ಪಾಸ್‌ಗಳನ್ನು ಮಾತ್ರ ವಿತರಿಸಲಿದ್ದು, ಸಮಯ ಮೀರಿ ಬಂದವರಿಗೆ ಅವಕಾಶ ಇರುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು, ಎಂದು ಮನವಿ ಮಾಡಿದರು.
ಹಾಸನಾಂಭ ದೇವಾಲಯಕ್ಕೆ ಕಳೆದ ವರ್ಷ 20,00,000 ಜನ ಭೇಟಿ ನೀಡಿದ್ದಾರೆ. ಈ ವರ್ಷ 25,00,000 ಜನ ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಎಲ್ಲಾ ಇಲಾಖೆಯನ್ನೂ ಒಳಗೊಂಡು ಸುಗಮ ತಯಾರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ ಎಂದು ಮಾಹಿತಿ ತಿಳಿಸಿದರು.












Click it and Unblock the Notifications