ಕೋಲ್ಕತ್ತಾ, ಏಪ್ರಿಲ್ 15: ಮಮತಾ ಬ್ಯಾನರ್ಜಿ ಬಂಗಾಳದ ರಾಜಕೀಯದಿಂದ ಹೊರಹೋಗಲು ಗಂಟೆ ಬಾರಿಸಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚುನಾವಣಾ ಸಮಾವೇಶದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದಾರೆ.
"ಬಿಜೆಪಿ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಬಳಸಿರುವ ಪದ ಬಂಗಾಳದ ಸಂಸ್ಕೃತಿಗೆ ಅವಮಾನ ಮಾಡಿದಂತಿದೆ. ಬಂಗಾಳದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವುದು ಹಾಗೂ ಸಂರಕ್ಷಿಸುತ್ತಿರುವುದು ಬಿಜೆಪಿ" ಎಂದು ಹೇಳಿರುವ ಅವರು, ರಾಜ್ಯದ ವಿದ್ವಾಂಸರ, ವೇದಾಂತಿಗಳ ಸಂದೇಶವನ್ನು ಇಡೀ ದೇಶದ ಜನರಿಗೆ ತಲುಪಿಸಲು ಕೇಸರಿ ಪಕ್ಷ ಶ್ರಮಿಸಿದೆ ಎಂದರು.
ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ್ ಠಾಗೂರ್ ಹಾಗೂ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರಂಥ ಮಹಾತ್ಮರ ಸಂದೇಶಗಳನ್ನು ಇಡೀ ದೇಶಕ್ಕೆ ಸಾರಿದ್ದು ಬಿಜೆಪಿ ಎಂದು ಹೇಳಿಕೊಂಡ ಅವರು, "ದೇಶದ ಪ್ರಧಾನಿ ಮೋದಿ ಅವರಿಗೆ, ಅಮಿತ್ ಶಾ ಅವರಿಗೆ ತಮ್ಮ ಪ್ರಚಾರ ವೇಳೆ ಮಮತಾ ಬ್ಯಾನರ್ಜಿ ಅವರು ಬಳಸಿದ ಪದಗಳು ಸರಿಯೇ? ಇದು ಬಂಗಾಳದ ಸಂಸ್ಕೃತಿಯೇ" ಎಂದು ಪ್ರಶ್ನಿಸಿದ್ದಾರೆ.