ಆಗಸ್ಟ್ನಿಂದ ರೈಲು ಟಿಕೆಟ್ ಬುಕ್ಕಿಂಗ್ನಲ್ಲಿ ದೊಡ್ಡ ಬದಲಾವಣೆ: ಹೊಸ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಭಾರತೀಯ ರೈಲ್ವೆ ಇಲಾಖೆ ತನ್ನ 40 ವರ್ಷ ಹಳೆಯ ಪ್ರಯಾಣಿಕರ ಕಾಯ್ದಿರಿಸುವ ವ್ಯವಸ್ಥೆ (Passenger Reservation System - PRS) ಅನ್ನು ಈ ಆಗಸ್ಟ್ನಿಂದ ಸಂಪೂರ್ಣವಾಗಿ ನವೀಕರಿಸಲು ಸಜ್ಜಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಈ ಹೊಸ ವ್ಯವಸ್ಥೆಯ ಮೂಲಕ ಪ್ರಯಾಣಿಕರಿಗೆ ಇನ್ನು ಮುಂದೆ ವೇಗವಾದ ಮತ್ತು ಸುಗಮ ಟಿಕೆಟ್ ಬುಕ್ಕಿಂಗ್ ಸೇವೆ ಒದಗಿಸುವುದು ರೈಲ್ವೆ ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ಗುರುವಾರ ರೈಲು ಭವನದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ಬದಲಾವಣೆ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಮತ್ತು ರವ್ನೀತ್ ಸಿಂಗ್ ಬಿಟ್ಟು ಕೂಡ ಭಾಗಿಯಾಗಿದ್ದರು.

ಭಾರತೀಯ ರೈಲ್ವೆ ಮೊದಲ ಬಾರಿಗೆ 1986ರಲ್ಲಿ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ನ್ನು ಪರಿಚಯಿಸಿತ್ತು. ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಹಲವು ಬಾರಿ ತಾಂತ್ರಿಕ ಸುಧಾರಣೆಗಳನ್ನು ಮಾಡಲಾಗಿದೆ. 2002ರಲ್ಲಿ ಆನ್ಲೈನ್ ರೈಲು ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು, ಈಗ ಸುಮಾರು 88 ಶೇಕಡಾ ಟಿಕೆಟ್ಗಳು ಆನ್ಲೈನ್ ಮೂಲಕವೇ ಬುಕ್ ಆಗುತ್ತಿವೆ.
ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ರೈಲ್ವೆ ಇಲಾಖೆ ಇದೀಗ ಹೊಸ ತಂತ್ರಜ್ಞಾನ ಬಳಸಿಕೊಂಡು ಕಾಯ್ದಿರಿಸುವ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. 2025ರಲ್ಲಿ ಪರಿಚಯಿಸಲಾದ ರೈಲ್ಒನ್ ಸೂಪರ್ ಆ್ಯಪ್ ಈ ಬದಲಾವಣೆಯ ಪ್ರಮುಖ ಭಾಗವಾಗಿದೆ.
ಈ ಆ್ಯಪ್ನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗಿದ್ದು, ವೇಟಿಂಗ್ ಲಿಸ್ಟ್ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆಯನ್ನು ಮುಂಚಿತವಾಗಿ ಊಹಿಸುವ ಸೌಲಭ್ಯ ನೀಡಲಾಗಿದೆ. ರೈಲ್ವೆ ಇಲಾಖೆಯ ಪ್ರಕಾರ, ಈ ಪೂರ್ವಾನುಮಾನಗಳ ನಿಖರತೆ ಹಿಂದಿನ 53 ಶೇಕಡೆಯಿಂದ ಈಗ 94 ಶೇಕಡೆಗೆ ಏರಿಕೆಯಾಗಿದೆ.
ರೈಲ್ಒನ್ ಆ್ಯಪ್ನಲ್ಲಿ ಟಿಕೆಟ್ ಬುಕ್ಕಿಂಗ್ ಮತ್ತು ರದ್ದುಪಡಿಸುವುದು, ರಿಫಂಡ್ ಅರ್ಜಿ ಸಲ್ಲಿಸುವುದು, ಪ್ಲಾಟ್ಫಾರ್ಮ್ ಟಿಕೆಟ್ ಮತ್ತು ಅನರಿಸರ್ವ್ಡ್ ಟಿಕೆಟ್ ಖರೀದಿ, ಲೈವ್ ಟ್ರೈನ್ ಸ್ಟೇಟಸ್, ಪ್ಲಾಟ್ಫಾರ್ಮ್ ಸಂಖ್ಯೆ, ಕೋಚ್ ಮಾಹಿತಿ ಮತ್ತು ರೈಲು ವೇಳಾಪಟ್ಟಿ ಸೇರಿದಂತೆ ಹಲವು ಸೇವೆಗಳು ಒಂದೇ ಜಾಗದಲ್ಲಿ ಲಭ್ಯವಿವೆ. ಜೊತೆಗೆ ಪ್ರಯಾಣಿಕರ ದೂರು ಹಾಗೂ ಸಹಾಯಕ್ಕಾಗಿ ರೈಲ್ ಮದದ್ (RailMadad) ಸೇವೆಯನ್ನೂ ಸೇರಿಸಲಾಗಿದೆ.
ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ದೇಶಾದ್ಯಂತ ಪ್ರತಿದಿನ ಸುಮಾರು 9.29 ಲಕ್ಷ ಟಿಕೆಟ್ಗಳು ರೈಲ್ಒನ್ ಆ್ಯಪ್ ಮೂಲಕ ಬುಕ್ ಆಗುತ್ತಿವೆ. ಇದರಲ್ಲಿ 7.2 ಲಕ್ಷ ಅನರಿಸರ್ವ್ಡ್ ಟಿಕೆಟ್ಗಳು ಮತ್ತು 2.09 ಲಕ್ಷ ರಿಸರ್ವ್ಡ್ ಟಿಕೆಟ್ಗಳು ಸೇರಿವೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಅನ್ನು 3.16 ಕೋಟಿ ಬಾರಿ ಹಾಗೂ ಆಪಲ್ ಸಾಧನಗಳಲ್ಲಿ 33.17 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ.














Click it and Unblock the Notifications