BMTC: ಬಿಎಂಟಿಸಿ ಬಸ್‌ನಲ್ಲಿ ಬೈರತಿ ಸುರೇಶ್‌ಗೆ ಆ ಬಿಸಿ ತಟ್ಟುತ್ತಿದ್ದಂತೆ ಹೊಸ ಮಾರ್ಗಸೂಚಿಗಳ ಜಾರಿ


BMTC: ರಾಜ್ಯ ರಾಜಧಾನಿ ಬೆಂಗಳೂರು ನಗರದ ಪ್ರಮುಖ ಜೀನವಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಒಂದಾಗಿದೆ. ರಿಯಾಲಿಟಿ ಚೆಕ್‌ಗಾಗಿ ಇದೇ ಸಂಸ್ಥೆಯ ಬಸ್‌ವೊಂದರಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಪ್ರಯಾಣಿಸುವಾಗ ಚಿಲ್ಲರೆ ಇಲ್ಲದ ಕಾರಣ ಕಂಡಕ್ಟರ್‌ ಅವರನ್ನ ಕೆಳಗಿಳಿಸಿದರು. ಇದನ್ನ ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಪ್ರಯಾಣಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಸೇವೆ ಒದಗಿರುವ ಉದ್ದೇಶದಿಂದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

Advertisement

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಸಾಮಾನ್ಯರಂತೆ ಬಿಎಂಟಿಸಿ ಬಸ್‌ ಹತ್ತಿದರು. ಈ ವೇಳೆ ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಕಂಡಕ್ಟರ್ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಈ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Advertisement

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಕ್ರಮ

ಸಾರಿಗೆ ಸಚಿವರು ನೀಡಿದ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಸಂಸ್ಥೆಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಬಿಎಂಟಿಸಿಯಿಂದ ಹೊಸ ಮಾರ್ಗಸೂಚಿಗಳು

* ನಿಗದಿತ ಬಸ್ ನಿಲ್ದಾಣಗಳಲ್ಲಿ ಕಡ್ಡಾಯ ನಿಲುಗಡೆ: ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲಾ ಚಾಲಕರು ಕಡ್ಡಾಯವಾಗಿ ಬಸ್‌ಗಳನ್ನು ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ.

* ಸೌಜನ್ಯಯುತ ವರ್ತನೆಗೆ ಆದ್ಯತೆ: ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಗೌರವಯುತವಾಗಿ, ಸೌಜನ್ಯದಿಂದ ವರ್ತಿಸಬೇಕು.

Advertisement

* ಯುಪಿಐ ಪಾವತಿ ವ್ಯವಸ್ಥೆಯ ಕಡ್ಡಾಯ ಬಳಕೆ: ಚಿಲ್ಲರೆ ಹಣದ ಸಮಸ್ಯೆಯಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುವುದನ್ನು ತಪ್ಪಿಸಲು ಎಲ್ಲಾ ಬಸ್‌ಗಳ ಇಟಿಎಂ ಯಂತ್ರಗಳಲ್ಲಿರುವ ಡೈನಾಮಿಕ್ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್ ಮೂಲಕ ಯುಪಿಐ ಪಾವತಿ ಸೌಲಭ್ಯವನ್ನು ಬಳಸುವಂತೆ ಪ್ರಯಾಣಿಕರಿಗೆ ಪ್ರೇರೇಪಿಸಬೇಕು. ಚಿಲ್ಲರೆ ಕಾರಣ ನೀಡಿ ಯಾವುದೇ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸುವುದು ಅಥವಾ ಪ್ರಯಾಣ ನಿರಾಕರಿಸುವುದನ್ನು ಸಂಸ್ಥೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಇಟಿಎಂನಲ್ಲಿ ನಿಗದಿತ ನಿಲ್ದಾಣಗಳ ಸೇರ್ಪಡೆ: ಪ್ರಸ್ತುತ ETM ಯಂತ್ರಗಳಲ್ಲಿ ನಿಲ್ದಾಣಗಳ ಹೆಸರು ದಾಖಲಾಗದೆ ಬಾಕಿ ಉಳಿದಿರುವ ಬಸ್ ಶೆಲ್ಟರ್‌ಗಳನ್ನು ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ತುರ್ತು ಆದ್ಯತೆಯ ಮೇರೆಗೆ ಗುರುತಿಸಿ ವರದಿ ನೀಡಬೇಕು. ಅಂತಹ ನಿಲ್ದಾಣಗಳನ್ನು ತಕ್ಷಣವೇ ಇಟಿಎಂ ವ್ಯವಸ್ಥೆಗೆ ಸೇರ್ಪಡೆ ಮಾಡುವ ಕ್ರಮ ವಹಿಸಲಾಗುವುದು.

Advertisement

* ಸಿಬ್ಬಂದಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ: ಸಾರ್ವಜನಿಕರಿಂದ ಪದೇ ಪದೇ ದೂರುಗಳಿಗೆ ಒಳಗಾಗುತ್ತಿರುವ ಚಾಲಕರು ಹಾಗೂ ನಿರ್ವಾಹಕರನ್ನು ಪ್ರತ್ಯೇಕವಾಗಿ ಗುರುತಿಸಿ, ಅವರಿಗೆ ಸಂಸ್ಥೆಯ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ವಿಶೇಷ ಸಾಫ್ಟ್ ಸ್ಕಿಲ್ಸ್ ತರಬೇತಿ ನೀಡಲು ನಿರ್ಧರಿಸಲಾಗಿದೆ.

* ದೈನಂದಿನ ಅರಿವು ಕಾರ್ಯಕ್ರಮ: ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು ಪ್ರತಿದಿನ ಘಟಕಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಅಲ್ಲಿ ಚಾಲಕ-ನಿರ್ವಾಹಕರಿಗೆ ರಸ್ತೆ ಸುರಕ್ಷತೆ, ಪ್ರಯಾಣಿಕರೊಂದಿಗೆ ಸೌಜನ್ಯದ ವರ್ತನೆ ಮತ್ತು ನಿಗದಿತ ನಿಲ್ದಾಣಗಳಲ್ಲೇ ಬಸ್ ನಿಲ್ಲಿಸುವ ಕುರಿತು ನಿರಂತರವಾಗಿ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸಲಿದ್ದಾರೆ.

* ಉತ್ತಮ ಸೇವೆ ಸಲ್ಲಿಸುವ ಸಿಬ್ಬಂದಿಗೆ ಪ್ರಶಂಸೆ: ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಪ್ರಶಂಸೆ ಪಡೆದ ಮತ್ತು ಅತ್ಯುತ್ತಮ ಸೇವೆ ಸಲ್ಲಿಸುವ ಚಾಲಕರು, ನಿರ್ವಾಹಕರನ್ನು ಪ್ರೋತ್ಸಾಹಿಸಲು ಅವರಿಗೆ ಕೇಂದ್ರ ಕಚೇರಿಯಿಂದ ಅಧಿಕೃತ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು.

Advertisement

'ಪ್ರಯಾಣಿಕರ ಸೇವೆಯೇ ನಮ್ಮ ಆದ್ಯತೆ' ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಿಎಂಟಿಸಿ ಸಾರ್ವಜನಿಕರಿಂದ ಬರುವ ಸಲಹೆಗಳು ಹಾಗೂ ದೂರುಗಳನ್ನು ಸ್ವೀಕರಿಸಿ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಲು ನಿರಂತರ ಕ್ರಮ ಕೈಗೊಳ್ಳಲಿದೆ ಎಂದು ಬಿಎಂಟಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಿನಲ್ಲಿ ಬಿಎಂಟಿಸಿಯ ಈ ಮಹತ್ವದ ನಿರ್ಧಾರಕ್ಕೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ. ಆದರೆ ಇದನ್ನು ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರು ಅಚ್ಚುಕಟ್ಟಾಗಿ ಪಾಲಿಸುತ್ತಾರೆಯಾ ಎಂದು ಕಾದುನೋಡಬೇಕಿದೆ.

English Summary

BMTC has issued fresh passenger service guidelines after Transport Minister Byrathi Suresh faced inconvenience during a surprise bus inspection.