ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಘಟಪ್ರಭಾ ನದಿಗೆ ಎಸೆದ ದುಷ್ಕರ್ಮಿಗಳು
ಬಾಗಲಕೋಟೆ, ಫೆಬ್ರವರಿ 18: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ, ಜಿಲ್ಲೆಯ ಘಟಪ್ರಭಾ ನದಿಯ ಕಲಾದಗಿ ಸೇತುವೆ ಬಳಿ ಶವ ಎಸೆದಿರುವ ಬಗ್ಗೆ ದೂರು ದಾಖಲಾಗಿದೆ.
ಅಂಕಲಗಿ ಸೇತುವೆ ಬಳಿ ಯುವತಿಯ ಮೃತ ದೇಹ ಪತ್ತೆಯಾಗಿದ್ದು, ಹನೀಪ್ ಎಂಬ ಯುವಕನೇ ಕೃತ್ಯ ಎಸಗಿದ್ದಾನೆ ಎಂದು ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನರ್ಸಿಂಗ್ ಮುಗಿಸಿರುವ ಯುವತಿಯು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹನೀಪ್ ಸಹ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ಹೋದ ಯುವತಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ನಾಪತ್ತೆ ಆಗಿರುವ ಬಗ್ಗೆ ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಕಲಾದಗಿಯಿಂದ ಕಾತರಕಿ ಗ್ರಾಮಕ್ಕೆ ಹೋಗುವ ಅಂಕಲಗಿ ಸೇತುವೆ ಬಳಿ ಯುವತಿಯ ಶವ ಪತ್ತೆ ಆಗಿದೆ.
ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಕೊಲೆ ಆಗಿರುವ ಯುವತಿಯ ಸಹೋದರರ ಮಾವ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಆರ್.ಬಿ.ತಿಮ್ಮಾಪೂರ ಖಂಡನೆ
ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ದಲಿತ ಸಮುದಾಯದ ಯುವತಿ ಮೇಲೆ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ, ಘಟಪ್ರಭಾ ನದಿಗೆ ಎಸೆದಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಆರ್.ಬಿ ತಿಮ್ಮಾಪೂರ ತಿಳಿಸಿದ್ದಾರೆ.
ಮುಧೋಳ ಕ್ಷೇತ್ರದ ಶಾಸಕರು ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರು, ಈ ಕೃತ್ಯದ ಹಿಂದೆ ಯಾರೇ ಇರಲಿ ಆದಷ್ಟು ಬೇಗ ಅವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆರ್.ಬಿ ತಿಮ್ಮಾಪೂರ ಒತ್ತಾಯಿಸಿದರು.
ಈ ಘಟನೆಯಿಂದ ಯುವತಿಯ ಕುಟುಂಬದವರಿಗೆ ಆಘಾತವಾಗಿದ್ದು, ಇದನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದರು.












Click it and Unblock the Notifications