ಇದು ಜೋಕಲ್ಲ: ಒಂದಿಷ್ಟು ಹಾಸ್ಯಮಯ ಗಾದೆಗಳು!
ಹಾಸ್ಯ ರಸ ಎಲ್ಲಿಲ್ಲ ಹೇಳಿ? ನಾವು ಹುಡುಕಿದರೆ ಗಾದೆಗಳಲ್ಲೂ ಹಾಸ್ಯ ಲಾಸ್ಯವಾಡುತ್ತದೆ. ಈಗೀಗ ನಮ್ಮ ಮಾತುಕತೆಗಳಲ್ಲಿ ಗಾದೆಗಳ ಬಳಕೆಯೇ ಕಡಿಮೆಯಾಗುತ್ತಿದೆ. ಹಿಂದಿನವರು ಸಂದರ್ಭ ಅರಿತು ಗಾದೆಗಳನ್ನು ಬಳಸುತ್ತಿದ್ದ ರೀತಿ-ನೀತಿಗಳು ಸಮಸ್ಯೆ ಎಷ್ಟೇ ದೊಡ್ಡದಿರಲಿ ಈ ರೀತಿಯ ಹಾಸ್ಯ ಮಿಶ್ರಿತ ಗಾದೆ ಮೂಲಕ ತಕ್ಷಣ ಪರಿಹರಿಸುತ್ತಿದ್ದರು. ದಟ್ಸ್ಕನ್ನಡ ಓದುಗರಿಗಾಗಿ ಒಂದಷ್ಟು ಹಾಸ್ಯ ಮಯ ಗಾದೆಗಳು.
*ಅಜ್ಜ ಮದುವೆ ಎಂದರೆ, ಎನಗೋ? ಅಂದ
*ಅಟ್ಟದಿಂದ ಬಿದ್ದವನ ದಡಿಯಿಂದ ಚಚ್ಚಿದರು
*ಅಡಿ ಜಾರಿ ಬಿದ್ದಲ್ಲಿಂದ ಬಡಿದಾರ ಮಾಡಿದನಂತೆ
*ಅನಂತಯ್ಯನ ಮಾತ್ರೆ, ವೈಕುಂಠ ಯಾತ್ರೆ
*ಅಲ್ಲದ ಕೆಲಸಕ್ಕೆ ಹೋಗಿ ಹಲ್ಲು ಮುರಿಸಿಕೊಂಡ
*ಅವುಟು ಇದ್ದವಗೆ ಸವುಟುನಿಂದ ಹೊಡೆದ ಹಾಗೆ
*ಅಂಗಿ ಕೊಟ್ಟು ಬಂಗಿ ಸೇದಿ ಮಂಗನಾದ
*ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ
*ಆನೆ ಮೇಲೆ ಹೋಗುವವನ ಸುಣ್ಣ ಕೇಳುದ ಹಾಗೆ
*ಇತ್ತಿತ್ತ ಬಾ ಅಂದರೆ ಹೆಗಲ ಮೇಲೆ ಹತ್ತಿಕೊಂಡ
*ಎಲ್ಲರೂ ನಕ್ಕರೆ ಹುಚ್ಚ ತಾನೂ ನಕ್ಕ
*ಎಂದೂ ಇಲ್ಲ ಮಾಣಿ ಅಮಾವಾಸೇ ದಿನ ಓದಕೂತ
*ಒಳ್ಳೆಯವರ ಮಾನ ಹಳ್ಳೀಲಿ ಹೋಯಿತು
*ಕನ್ನಂಬಾಡಿಯಲ್ಲಿ ಕಂಬಳೀ ಕಿತ್ತು ಕೊಂಡರೆ ಬಲಮುರಿಯಲ್ಲಿ ಹಲ್ಲು ಮುರೀ ಕಚ್ಚಿಕೊಂಡ
*ಕಳ್ಳಗೆ ಚೇಳು ಬಡಿದ ಹಾಗೆ
*ತಾನು ಜಾರಿ ಬಿದ್ದು, ಉಣ್ಣೆಯಂತ ನೆಲ ಅಂದ
*ತುಳ್ಳಾಡಿ ತುಳ್ಳಾಡಿ ಮುಳ್ಳಿನ ಮೇಲೆ ಬಿದ್ದ
(ಕಿಟ್ಟೆಲರ ಗಾದೆಗಳ ಕೋಶದಿಂದ ಎರವಲು ಪಡೆದದ್ದು)












Click it and Unblock the Notifications