ಜೋಕ್ಸ್ : ನಿನ್ ಕೈಲಿ ಎಲ್ಲಾಗುತ್ತೆ ಬಿಡು ಎಂದಳು ಅವಳು!
ಪರ್ವತಾರೋಹಿಗಳ ತಂಡವೊಂದು ಒಂದು ಪರ್ವತ ಶಿಖರವನ್ನೇರಲು ಹೊರಟಿತು. ಮೇಲಮೇಲಕ್ಕೆ ಏರಿದಂತೆ ಹಲವರ ಉತ್ಸಾಹ, ಶಕ್ತಿ ಕುಸಿಯತೊಡಗಿತು. ಒಬ್ಬೊಬ್ಬರಾಗಿ ಹಿಂದೆ ಬೀಳತೊಡಗಿದರು. ಕೊನೆಯಲ್ಲಿ ಉಳಿದವರು ಇಬ್ಬರೇ ಇಬ್ಬರು- ಒಬ್ಬ ಗಂಡಸು, ಒಬ್ಬಳು ಹೆಂಗಸು.
ಇಬ್ಬರೂ ಸೋಲದೇ ಮುಂದುವರೆದರು. ಗುರಿ ಹತ್ತಿರವಾಯಿತು. ಬೃಹದಾಕಾರದ ಬಂಡೆಯೊಂದನ್ನು ಏರಿ ನಿಂತರೆ ಶಿಖರದ ತುದಿ! ಆದರೆ ಅಷ್ಟೊತ್ತಿಗೆ ಸರಿಯಾಗಿ ಕತ್ತಲಾಗಿಬಿಟ್ಟಿತು. ಕತ್ತಲಲ್ಲಿ ಕಡಿದಾದ ಬಂಡೆಯನ್ನೇರುವುದು ಅಪಾಯಕರ ಎಂದರಿವಾಗಿ ನಿರಾಶೆಗೊಂಡರು. ಹೋಗಲಿ ಬಿಡು, ರಾತ್ರಿ ವಿಶ್ರಮಿಸಿ ಬೆಳ್ಳಂಬೆಳಿಗ್ಗೇ ಬಂಡೆ ದಾಟಿ ಗುರಿ ಮುಟ್ಟಿಬಿಡೋಣ ಎಂದು ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡರು.
ಬುತ್ತಿ ಬಿಚ್ಚಿ ಊಟ ಮಾಡಿದರು, ನೀರು ಕುಡಿದರು. ಮಲಗಲು ತಯಾರಾದರು. ಮಟ್ಟಸವಾದ ಜಾಗವೇ ಇಲ್ಲ! ಹೇಗೋ ಇಬ್ಬರಿಗಾಗುವಷ್ಟು ಜಾಗ ಹುಡುಕಿದರು. ಹೆಂಗಸು ಪುಟ್ಟ ಕಲ್ಲೊಂದನ್ನು ಆ ಜಾಗದ ನಡುವೆ ಇರಿಸಿ ಗಂಡಸಿಗೆ ಹೇಳಿದಳು: "ಈ ಕಲ್ಲಿನ ಈಚೆ ನನ್ನ ಜಾಗ, ಆಚೆ ನಿನ್ನ ಜಾಗ."
"ಓಕೇಮ್ಮಾ" ಅಂದ ಗಂಡಸು ತನ್ನ ಪಾಲಿನ ಸ್ಥಳಕ್ಕೆ ಸರಿದು ಸ್ಲೀಪಿಂಗ್ ಬ್ಯಾಗಿನೊಳಗೆ ನುಸುಳಿ ತೆಪ್ಪಗೆ ನಿದ್ದೆಹೋದ. ಬೆಳಗಾಯಿತು. ಇಬ್ಬರೂ ಎದ್ದರು. "ಬೇಗ ಹೊರಡು. ಬಂಡೆ ದಾಟಿಬಿಡೋಣ" ಎಂದು ಗಂಡಸು ಅವಸರಿಸಿದ. ಹೆಂಗಸು ಮೂತಿ ಸೊಟ್ಟ ಮಾಡಿದಳು. "ಕೆಳಗೆ ಇಳಿದು ಹೋಗೋಣ" ಅಂದಳು!
"ವಾಟ್ ಆರ್ ಯೂ ಟಾಕಿಂಗ್! ಈ ಬಂಡೆ ದಾಟಿಬಿಟ್ಟರೆ ಶಿಖರದ ತುದಿ. ಹಿಂದಕ್ಕೆ ಹೋಗಿಬಿಡೋಣ ಅಂತಿದೀಯಲ್ಲ. ನಿಂಗೇನು ಹುಚ್ಚಾ? ಬೆಪ್ಪಾ?" ಅಂದ ಗಂಡಸು. ಹೆಂಗಸು ಅವನ ಮೂತಿಗೆ ತಿವಿದು ಹೇಳಿದಳು: "ಇಡೀ ರಾತ್ರಿ ಈ ಒಂದು ಪುಟ್ಟ ಕಲ್ಲನ್ನ ದಾಟಿ ಈಕಡೆ ಬರೋದಿಕ್ಕೆ ನಿನ್ ಕೈಲಾಗ್ಲಿಲ್ಲ. ಇನ್ನು ಈ ಭಾರೀ ಬಂಡೆ ದಾಟ್ತೀಯಾ? ಹೋಗೋ ಹೋಗೋ, ನಿನ್ ಕೈಲಿ ಎಲ್ಲಾಗುತ್ತೆ ಅದು?"
(ಜೋಕು ಕತೆ ಕಳಿಸಿ, ಎಲ್ಲರನ್ನು ನಗಿಸಿದ್ದು; ಪ್ರೇಮಶೇಖರ )












Click it and Unblock the Notifications