ಸಿರಿಧಾನ್ಯಗಳಿಗೆ ವಿಶ್ವಾದ್ಯಂತ ಬೇಡಿಕೆಯಿರುವುದರಿಂದ ಕೃಷಿ ಪದ್ಧತಿಯಲ್ಲಿ ಬದಲಾವಣೆ ಆಗಬೇಕಿದೆ: ಸಚಿವ ಚಲುವರಾಯಸ್ವಾಮಿ
ಮಂಡ್ಯ, ಆಗಸ್ಟ್, 28: ಇಂದು ಬಡವರ ಆಹಾರ ಧಾನ್ಯ ಸಿರಿಧಾನ್ಯವಾಗಿದೆ. ಶ್ರೀಮಂತರ ಧಾನ್ಯವೂ ಆಗಿದೆ. ಸಿರಿಧಾನ್ಯ ಕುರಿತು ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಶ್ರೀಮಂತರು ಈ ಆಹಾರ ಧಾನ್ಯಗಳನ್ನು ಹುಡುಕಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿಬೆ. ಸಿರಿಧಾನ್ಯಗಳಿಗೆ ವ್ಯಾಪಕ ಬೇಡಿಕೆ ಇರುವುದರಿಂದ ಕೃಷಿಕರು ತಮ್ಮ ಕೃಷಿ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಂಡು ಆರ್ಥಿಕ ಸದೃಢತೆ ಸಾಧಿಸಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ಸೋಮವಾರ ನಗರದ ಡಾ.ರಾಜ್‌ಕುಮಾರ್ ಬಡಾವಣೆಯಲ್ಲಿ ಆಹಾರ ಸಂಸ್ಕರಣಾ ಮಂತ್ರಾಲಯ, ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ, ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಮೇಳ ವಸ್ತುಪ್ರದರ್ಶನ ಹಾಗೂ ಬೆಲ್ಲದ ಪರಿಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರಕ, ಊದಲು, ನವಣೆ, ಸಜ್ಜೆಯಂತಹ ಸಿರಿಧಾನ್ಯಗಳು ಅತಿ ಹೆಚ್ಚಿನ ಪೌಷ್ಠಿಕಾಂಶದಿಂದ ಕೂಡಿದ ಆಹಾರವಾಗಿದೆ. ಇವೆಲ್ಲವೂ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮೌಲ್ಯವರ್ಧಿತ ಬೆಳೆಗಳಾಗಿವೆ. ಇವುಗಳನ್ನು ಬೆಳೆದರಷ್ಟೇ ಪ್ರಯೋಜನವಾಗುವುದಿಲ್ಲ. ಅದರಿಂದ ಆಹಾರೋತ್ಪನ್ನಗಳನ್ನು ತಯಾರಿಸುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಅವುಗಳಿಗೆ ಹೇಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು ಎಂಬ ಬಗ್ಗೆ ಆಲೋಚಿಸಬೇಕು. ಆ ಆಹಾರೋತ್ಪನ್ನಗಳಿಗೆ ಬ್ರಾಂಡ್ ರೂಪದೊಂದಿಗೆ ಆಕರ್ಷಣೆ ಹೆಚ್ಚಿಸಿದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು ಎಂದರು.
ರೈತರು ಬದಲಾವಣೆಗೆ ಒಗ್ಗಿಕೊಳ್ಳುವುದನ್ನು ಕಲಿಯಬೇಕಿದೆ. ಸಿರಿಧಾನ್ಯಗಳನ್ನು ಬೆಳೆಯುವುದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಿಶೇಷವಾದ ಪ್ರೋತ್ಸಾಹವನ್ನು ನೀಡುತ್ತಿವೆ. ಸಿರಿಧಾನ್ಯಗಳು ಪೋಷಕಾಂಶಗಳ ಆಹಾರವಾಗಿದ್ದು, ಇವುಗಳನ್ನು ಭವಿಷ್ಯದ ಸೂಪರ್ ಫುಡ್ ಎಂದೇ ಕರೆಯಲಾಗುತ್ತಿದೆ. ಅದಕ್ಕಾಗಿ ರೈತರು ಸಿರಿಧಾನ್ಯಗಳನ್ನು ಬೆಳೆಯುವಂತೆ ಮನವಿ ಮಾಡಿದರು.
ಸಿರಿಧಾನ್ಯಗಳ ಬೇಸಾಯಕ್ಕೆ ಪ್ರೋತ್ಸಾಹ ನೀಡಲು ಹಿಂದಿನ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ರೈತಸಿರಿ ಎಂಬ ಯೋಜನೆ ಪ್ರಾರಂಭಿಸಿ ಇಂದಿಗೂ ಮುಂದುವರೆಸಲಾಗಿದೆ. ಈ ಯೋಜನೆಯಡಿ ಸಿರಿಧಾನ್ಯ ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಹೆಕ್ಟೇರ್‌ಗೆ 10 ಸಾವಿರ ರೂಪಾಯಿಗಳಂತೆ ಗರಿಷ್ಠ 2 ಹೆಕ್ಟೇರ್‌ಗೆ 20 ಸಾವಿರ ರೂಪಾಯಿಗಳನ್ನು ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರದ ಪ್ರಯತ್ನದಿಂದ ಕಳೆದೆರಡು ವರ್ಷಗಳಲ್ಲಿ ಸಿರಿಧಾನ್ಯಗಳಿಗೆ ಶೇಕಡಾ 176ರಷ್ಟು ಬೇಡಿಕೆ ಹೆಚ್ಚಾಗಿದೆ. ರಫ್ತು ಶೇಕಡಾ 20ರಷ್ಟು ಹೆಚ್ಚಾಗಿರುವುದು ಸಂತೋಷದಾಯಕವಾಗಿದೆ. ಆದರೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಒದಗಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಿರಿಧಾನ್ಯಗಳ ಪ್ರೋತ್ಸಾಹಕ್ಕಾಗಿ 15 ರೈತ ಸಂಘಗಳು ಸಿರಿಧಾನ್ಯ ಮಾರಾಟ ಒಕ್ಕೂಟವನ್ನು ರಚಿಸಿ ಸಿರಿಧಾನ್ಯಗಳ ಸಂಗ್ರಹಣೆ, ಸಂಸ್ಕರಣೆ, ಮಾರಾಟಕ್ಕೆ ಕೆಪೆಕ್ ಸಂಸ್ಥೆಯಿಂದ ಅನುದಾನ ನೀಡಲಾಗಿದೆ. ರೈತರ ಆದಾಯವನ್ನು ಹೆಚ್ಚಿಸಲು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯಡಿ ರೈತರು ಬೆಳದ ಪ್ರಾಥಮಿಕ ಪದಾರ್ಥಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಬ್ರಾಂಡಿಂಗ್ ಮಾಡಿ ಮಾರಾಟ ಮಾಡಲು 3 ರಿಂದ 10 ಲಕ್ಷ ರೂಪಾಯಿವರೆಗೆ ಸಹಯಧನ ನೀಡಲಾಗುವುದು ಎಂದರು.
ದಿವ್ಯಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದ ಆರ್ಥಿಕತೆಗೆ ಕೃಷಿ ಜಿಡಿಪಿ ಶೇಕಡಾ 50ರಷ್ಟಿತ್ತು. 75 ವರ್ಷಗಳ ಬಳಿಕ ದೇಶದಲ್ಲಿ ಶೇಕಡಾ 68ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದರೂ ಕೃಷಿ ಕ್ಷೇತ್ರದಿಂದ ಆರ್ಥಿಕತೆಗೆ ಶೇಕಡಾ 19 ರಿಂದ 20ರಷ್ಟು ಮಾತ್ರ ಕೊಡುಗೆ ಇದೆ. ಕೃಷಿ ಕ್ಷೇತ್ರವನ್ನು ಹೆಚ್ಚಿನ ಜನರು ಅವಲಂಬಿಸಿದ್ದರೂ ಕೊಡುಗೆ ಕಡಿಮೆ ಇದೆ ಎಂದು ವಿಷಾಧಿಸಿದರು.
ಯಾವ ದೇಶದ ಹೆಚ್ಚಿನ ಜನರು ಅವಲಂಬಿತವಾಗಿರುವ ಕ್ಷೇತ್ರವನ್ನು ಲಾಭದಾಯಕ ಮಾಡದಿದ್ದರೆ ಅಭಿವೃಏದ್ಧಿ ಸಾಧ್ಯವಾಗುವುದಿಲ್ಲ. ನಮ್ಮ ದೇಶದಲ್ಲಿ ನೀರು, ಆಹಾರ, ಗಾಳಿ ನಿರ್ಲಕ್ಷ್ಯಕ್ಕೆ ಒಳಗಾಗಿರುವಷ್ಟು ಇನ್ಯಾವುದೇ ಕ್ಷೇತ್ರವೂ ಆಗಿಲ್ಲ. ಹಾಗಾಗಿ ಸರ್ಕಾರಗಳು ಕೃಷಿಕರ ಬದುಕನ್ನು ಹಸನುಗೊಳಿಸಬೇಕಿದೆ. ವಿವಿಧ ಉತ್ಪನ್ನಗಳನ್ನು ಬ್ರಾಂಡ್‌ಗಳ ಮೂಲಕ ಮರಾಟ ಮಾಡಬೇಕು ಎಂದರು.
ಕೃಷಿಯ ವಿವಿಧ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಬೇಕು. ಹೆಚ್ಚು ಕೌಶಲ್ಯಗಳನ್ನು ಬಳಸಿಕೊಂಡು ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಕೃಷಿ ಇಲಾಖೆ, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳು ನೆರವಾಗಬೇಕು ಎಂದು ಹೇಳಿದರು.
ಈ ವೇಳೆ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ, ಕೆ.ಎಂ.ಉದಯ, ವಿಧಾನಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಈಶ್ವರ್‌ಪ್ರಸಾದ್, ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ಡಾ.ಮನೋಜ್‌ರಾಜನ್, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಹೆಚ್.ಸಿ.ಗಿರೀಶ್, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್.ಬಂಥನಾಳ, ಪ್ರತಿನಿಧಿ ಆಕಾಂಕ್ಷ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಸೇರಿದಂತೆ ಮತ್ತಿತರರಿದ್ದರು.












Click it and Unblock the Notifications