ಮಂಡ್ಯದಲ್ಲಿ ಜೀತಕ್ಕಾಗಿ ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದರು!
ಮಂಡ್ಯ, ಸೆಪ್ಟೆಂಬರ್.21: ಗಂಡನ ಸಾಲಕ್ಕೆ ಜೀತ ಮಾಡಲು ಒಪ್ಪದ ಮಹಿಳೆಯನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದ ಘಟನೆ ಮದ್ದೂರು ತಾಲೂಕಿನ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬೆಕ್ಕಳಲೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಾಲೂಕಿನ ಕುದರಗುಂಡಿ ಗ್ರಾಮದ ದಿವಂಗತ ಚಿನ್ನತಂಬಿ ಎಂಬುವರ ಪತ್ನಿ ಜಾನಕಮ್ಮ ಎಂಬಾಕೆಯೇ ದೌರ್ಜನ್ಯಕ್ಕೊಳಗಾದ ಮಹಿಳೆ. ಈಕೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ನಾಗೇಶ್ ಹಾಗೂ ಸಹಚರರಾದ ಪಾಂಡು, ನಾಗೇಶ್, ಕರಿಯಪ್ಪ ಎಂಬುವರು ಜೀತಕ್ಕೆ ಬಲವಂತಾಗಿ ಎಳೆದ ಆರೋಪಿಗಳು.

ಬದುಕಿದ್ದಾಗ ಚಿನ್ನತಂಬಿ ಎಂಬಾತ ಕುದುರಗುಂಡಿ ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ನಾಗೇಶ್ ಬಳಿ 50 ಸಾವಿರ ರೂ. ಸಾಲ ಮಾಡಿಕೊಂಡಿದ್ದನು. ಅಷ್ಟೇ ಅಲ್ಲದೆ ಅವರ ಮನೆಯಲ್ಲೇ ಚಿನ್ನತಂಬಿ ಮತ್ತು ಪತ್ನಿ ಜಾನಕಮ್ಮ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ಅಲ್ಲಿಂದ ಮರಳಿದ ದಂಪತಿ ಬೆಕ್ಕಳಲೆ ಗ್ರಾಮದಲ್ಲಿ ನೆಲೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಚಿನ್ನತಂಬಿ ಸಾವನ್ನಪ್ಪಿದ್ದನು. ಪತಿ ಸಾವಿನ ನಂತರ ಜಾನಕಮ್ಮ ತನ್ನ ಇಬ್ಬರು ಮಕ್ಕಳನ್ನು ಸಾಕಿಕೊಂಡಿದ್ದಳು.

ಈ ಮಧ್ಯೆ ಬೆಕ್ಕಳಲೆ ಗ್ರಾಮದಲ್ಲಿ ಜಾನಕಮ್ಮ ವಾಸವಿರುವುದರ ಬಗ್ಗೆ ತಿಳಿದ ನಾಗೇಶ್ ಹಾಗೂ ಆತನ ಸಹಚರರು ಮಹಿಳೆಯನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದು ಹಲ್ಲೆ ನಡೆಸಿ ದೌರ್ಜನ್ಯವೆಸಗುವ ಜತೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ.
ಈಕೆಯನ್ನು ಎಳೆದೊಯ್ದ ದೃಶ್ಯಗಳು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.

ದೌರ್ಜನ್ಯಕ್ಕೊಳಗಾದ ಮಹಿಳೆ ಜಾನಕಮ್ಮ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹಿಳೆ ಮೇಲೆ ಹಲ್ಲೆ, ಗೌರವಕ್ಕೆ ಧಕ್ಕೆ, ಅಪಹರಣ, ಎಸ್ಸಿ, ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿ ಆರೋಪಿ ನಾಗೇಶ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications