ಹಣದುಬ್ಬರದ ಎರಡು ಅಲುಗಿನ ಕತ್ತಿಗೆ ಸಿಕ್ಕು ಅಧಿಕಾರ ಕಳ್ಕೊಂಡ ಬಿಜೆಪಿ
ಚಿಲ್ಲರೆ ಹಣದುಬ್ಬರ ದರದ ಮೇಲೆ ಆಧಾರವಾದ ಗ್ರಾಹಕ ದರ ಸೂಚ್ಯಂಕವು ಎಷ್ಟು ಮುಖ್ಯ ಎಂಬುದನ್ನು ಈ ಹಿಂದೆ ಹಲವು ಸಲ ವಿವರಿಸಲಾಗಿತ್ತು. ಹಾಗೇ ಇದೊಂದು ಬಗೆಯ ಎರಡು ಅಲುಗಿನ ಕತ್ತಿ ಅಂತಲೂ ತಿಳಿಸಲಾಗಿತ್ತು. ಅದೇ ಈಗ ಬಿಜೆಪಿಯ ಸೋಲಿಗೂ ಕಾರಣವಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಈ ಹಿಂದೆಲ್ಲ ಹಣದುಬ್ಬರ ವಿಪರೀತ ಹೆಚ್ಚಾಗಿ ಸರಕಾರಗಳು ಉದುರಿಹೋದ ಉದಾಹರಣೆಗಳಿವೆ. ಆದರೆ ಈ ಬಾರಿ ಕೇಂದ್ರ ಸರಕಾರದ ಸ್ಥಿತಿ ನೋಡಿ, ಗ್ರಾಮೀಣ ಭಾಗದ ಆದಾಯಕ್ಕೆ ಬೆಂಬಲ ನೀಡಲಾರದ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ (2.33%) ಕುಸಿದಿದ್ದರಿಂದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಗಿದೆ.
ಹಣದುಬ್ಬರಕ್ಕೂ ಆಹಾರ ಧಾನ್ಯಗಳ ಬೆಲೆಗೂ ನೇರವಾದ ಸಂಬಂಧವಿದೆ. ಹಣದುಬ್ಬರ ಕಡಿಮೆ ಇದೆ ಅಂದರೆ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇದೆ ಅಂತ ಅರ್ಥ. ಇದರಿಂದ ಗ್ರಾಹಕ ದರ ಸೂಚ್ಯಂಕವು ಕಡಿಮೆ ಆಗಿ, ಖರೀದಿದಾರರು ಸಂತೋಷದಿಂದ ಇರುತ್ತಾರೆ. ಆದರೆ ಬೆಳೆಗಾರರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗುತ್ತಾರೆ.

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಸತತವಾಗಿ ಚಿಲ್ಲರೆ ಹಣದುಬ್ಬರ ಕಡಿಮೆ ಆಗಿತ್ತು. ಅದರಲ್ಲೂ ಆಹಾರ ಪದಾರ್ಥಗಳ ಬೆಲೆ ಕುಸಿದಿತ್ತು. ಇದರಿಂದ ಕೃಷಿ ಆದಾಯಕ್ಕೆ ಹೊಡೆತ ಬಿದ್ದು, ಗ್ರಾಮೀಣ ಭಾಗದ ಒತ್ತಡ ಬಿತ್ತು. ಇದರಿಂದ ಆಡಳಿತಾರೂಢ ಸರಕಾರದ ವಿರುದ್ಧ ಸಿಟ್ಟು ಕಾರಿಕೊಳ್ಳುವಂತಾಯಿತು. ನೆನಪಿಟ್ಟುಕೊಳ್ಳಿ, ಎಲ್ಲರಿಗೂ ಉದ್ಯೋಗ ಭರವಸೆ ನೀಡಿದ್ದ ಸರಕಾರ ಇದಾಗಿತ್ತು.
ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳು ಇರುವಾಗ ಈ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರಕಾರ ತುರ್ತಾಗಿ ಗಮನ ಹರಿಸಬೇಕಿದೆ. ಚಿಲ್ಲರೆ ಹಣದುಬ್ಬರದ ಇಳಿಕೆಯಾದರೆ ಹಣಕಾಸು ನೀತಿಯ ಹೊಂದಾಣಿ ಮಾಡುವುದು ಆರ್ ಬಿಐಗೆ ಕಷ್ಟವಾಗಲಾರದು. ಆದರೆ ಅದೇ ಹಣದುಬ್ಬರ ಭಾರೀ ಏರಿಕೆಯಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಷ್ಟವಾಗುತ್ತದೆ.
ಆ ಕಾರಣಕ್ಕೆ ರೈತರ ಆದಾಯದಲ್ಲಿ ಬಹಳ ಇಳಿಕೆ ಆಗಿದೆ. ಆದರೆ ಅವರು ಸಾಲ ತೆಗೆದುಕೊಳ್ಳುತ್ತಿದ್ದ ಬಡ್ಡಿ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ.











Click it and Unblock the Notifications