ದುರ್ಗಕ್ಕೆ ಬಂತು ಮಳೆ

ಬೆಂಗಳೂರು : ಇವರು ಬರುತ್ತಾರೆ... ಬೇಗವಲ್ಲದಿದ್ದರೇನಾಯಿತು ? ನಿಧಾನವಾಗಿಯಾದರೂ...ಬಂದೇ ಬರುತ್ತಾರೆ. ಒಡಕು, ಬಿರುಕಗಳ ನೋವನ್ನೆಲ್ಲಾ ಅಳಿಸಲಿಕ್ಕೆಂದೇ ಬರುತ್ತಾರೆ. ಹಸಿರ ಹರಿಸಲಿಕ್ಕೆ ಉಸಿರಾಗಿ ಬರುತ್ತಾರೆ... ಅಂತೆಲ್ಲಾ ಆಸೆಯಿಟ್ಟುಕೊಂಡು ಮಳೆರಾಯರನ್ನು ಕಾಯುತ್ತಿದ್ದರು... ಚಿತ್ರದುರ್ಗದವರು.

ಅವರು ಬೇಗನೆ ಏನೂ ಬರಲಿಲ್ಲ . ತಡವಾಗಿಯೇ ಬಂದರು. ಸರಿ, ಬಂದರೆಂದು ಸಂಭ್ರಮಿಸುತ್ತಿರುವಾಗಲೇ ಕಳೆದ ಮೂರು ದಿನಗಳಲ್ಲಿ ಚಿತ್ರದುರ್ಗದವರ ಉಸಿರು ಕಟ್ಟಿ ಹೋಗುವಂತೆ ಧೋಗುಟ್ಟಿದ ಮಳೆರಾಯರು ತಾಳೆ, ಬಾಳೆ, ಬೆಳೆಕಳೆಗಳನ್ನು ಕೊಚ್ಚಿಕೊಂಡು ಹೋದರು. ಅಮೃತ ವಿಷವಾಗುವುದಿಲ್ಲ ಎಂದು ಎದೆ ತುಂಬ ನಿರೀಕ್ಷೆ ಇಟ್ಟುಕೊಂಡ ದುರ್ಗದವರು ರಕ್ಷಣೆ ಪಡೆಯಲೊಂದು ಕೋಟೆಯಿಲ್ಲದೆ ತೊಯ್ದು ನಡುಗುತ್ತಿದ್ದಾರೆ. ಕುರುಮರಡಿಕೆರೆ, ಕಾತ್ರಾಳು, ಓಬೇನ ಹಳ್ಳಿಗಳಲ್ಲಿದ್ದ ಕೆರೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಲಾಗದಷ್ಟು , ಊರು ತುಂಬಾ ನೀರು ಹರಿಯುತ್ತಿದೆ. ತಾಳವಟ್ಟಿಕೆರೆ ಒಂದೇ ದಿನದ ಮಳೆಗೆ ತುಂಬಿ, ಉಕ್ಕಿ ಹರಿಯುತ್ತಿದೆ. ಎಂದರೆ ಬಂದ ಮಳೆಯ ಪ್ರಮಾಣವನ್ನು ನೀವೇ ಲೆಕ್ಕ ಹಾಕಿ. ಮುಗಿಲು ಮಟ್ಟುವ ಅಡಿಕೆ ಮರಗಳ ಬುಡದಲ್ಲಿ ತ್ರಾಣಕುಂದಿದೆ. ಬಡಿಯುತ್ತಿರುವ ಮಳೆರಾಯರ ತಡೆದುಕೊಳ್ಳಲಾಗದೆ ನೆಲಕಚ್ಚುತ್ತಿವೆ.

ಬರಗಾಲ ಬಡಿದವರು ಎಂಬ ಹಣೆ ಪಟ್ಟಿಯನ್ನು ದುರ್ಗಕ್ಕೆ ಹಚ್ಚಲು ಬಿಡದೆ ಬಂದ ಮಳೆರಾಯರತ್ತ ಕೃತಜ್ಞತೆಯಿಂದ, ಕಣ್ತುಂಬಿ ನೋಡುತ್ತಲೇ ದುರ್ಗದವರು ಗದ್ದೆ, ಹೊಲಗಳನ್ನು ಉತ್ತು ಬಿತ್ತಿ ಮನೆ ಸೇರಿಕೊಂಡರು. ಎರಡು 'ಬಿದೆ ನೀರು" ಇಳಿದು ಹೋಗುವ ಮುಂಚೆ ಮಳೆ ರಾಯರು ಎಲ್ಲ ಬೋಳಿಸಿಕೊಂಡು ಹೋದರು. ದೈವವಾಗಿ ಬರುತ್ತಾರೆಂದು ನಂಬಿದವರು ಮೋಸ ಹೋದರು. ಜಿಲ್ಲೆಯಲ್ಲಿಯೇ 50 ಲಕ್ಷ ರೂಪಾಯಿ ಬೆಳೆಯ ಅವಶೇಷವೂ ಕಾಣುವುದಿಲ್ಲ. ಚಿತ್ರದುರ್ಗದಲ್ಲಿ ನಡೆದ ಮಳೆರಾಯರ ರಂಪಾಟಕ್ಕೆ ಎಲ್ಲರೂ ತತ್ತರಿಸಿದ್ದಾರೆ.

ಗುಲ್ಬರ್ಗಾ, ಗುಬ್ಬಿ, ಬಳ್ಳಾರಿಯಲ್ಲಿ 3ರಿಂದ 4 ಸೆಂಟಿ ಮೀಟರ್‌ ಮಳೆಯಾಗಿದೆ. ಕರಾವಳಿಯವರು ಮಳೆಗೆ ಕಾಯುತ್ತಿದ್ದಾರೆ, ಇಂದು ನಾಳೆಯಲ್ಲಿ ಮಳೆ ಬರಬಹುದು ಎಂದು ಹವಾಮಾನ ಇಲಾಖೆಯವರು ಹೇಳುತ್ತಾರೆ. ಬೆಂಗಳೂರಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಮುಸ್ಸಂಜೆಯ ವಾತಾವರಣ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+