ದಾವಣಗೆರೆ: ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಭದ್ರಾ ಬಲದಂಡೆ, ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ, ಎಷ್ಟು ದಿನ?
ದಾವಣಗೆರೆ, ಸೆಪ್ಟೆಂಬರ್, 26: 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.
ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 15ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26ರಿಂದ ನವೆಂಬರ್ 17ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭದ್ರಾ ಜಲಾಶಯದಿಂದ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ದಾವಣಗೆರೆ ಬಂದ್ ನಡೆಸಿತ್ತು. ಈ ಬಂದ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಪ್ರತಿಭಟನೆಯ ಕಾವು ಜೋರಾಗಿತ್ತು. ಅಷ್ಟೇ ಅಲ್ಲದೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ದಾವಣಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಡ್ಯಾಂನಿಂದ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಭದ್ರಾ ಡ್ಯಾಂ ನೀರು ಅವಲಂಬಿತವಾಗಿರುವ ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡಾ 70ರಷ್ಟು ಇದೆ. ಈಗಾಗಲೇ ಭತ್ತ ಬೆಳೆದಿರುವ ರೈತರು ಕಂಗಾಲಾಗಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ಡ್ಯಾಂನಿಂದ ನೀರು ಸ್ಥಗಿತಗೊಳಿಸಲಾಗಿತ್ತು. ಪರಿಹಾರ ಬೇಡ, ನಮಗೆ ಭದ್ರಾ ಡ್ಯಾಂನಿಂದ ನೀರು ಹರಿಸಲೇಬೇಕು ಎಂದು ರೈತರು ಪಟ್ಟುಹಿಡಿದಿದ್ದರು. ಜೊತೆಗೆ ಈಗಾಗಲೇ ಭತ್ತ ನಾಟಿ ಮಾಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಮಳೆಯೂ ಸುರಿದಿಲ್ಲ. ಈ ಕಾರಣಕ್ಕೆ ಸರ್ಕಾರವು ನೀರು ಹರಿಸಲು ನಿರ್ಧರಿಸಿದೆ.
ಭಾರತೀಯ ರೈತ ಒಕ್ಕೂಟವು ಕರೆ ಕೊಟ್ಟಿದ್ದ ಬಂದ್‌ಗೆ ಬಿಜೆಪಿ, ವಿವಿಧ ಸಂಘಟನೆಗಳು, ವಿವಿಧ ಪಕ್ಷಗಳು ಸಾಥ್ ಕೊಟ್ಟಿದ್ದವು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಎರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ನಾನು ಇರುವವರೆಗೆ ಭತ್ತ ಬೆಳೆದವರು ಆತಂಕ ಪಡಬೇಕಿಲ್ಲ ಎಂದು ಭರವಸೆ ಕೊಟ್ಟಿದ್ದರು.
ಪ್ರತಿಭಟನೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರವಾಗುವುದನ್ನು ಅರಿತ ನೀರಾವರಿ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಸೆಪ್ಟಂಬರ್ 26ರಿಂದ ಅಕ್ಟೋಬರ್ 15ರವರೆಗೆ ಅಂದರೆ 20 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಿರುವುದು ರೈತರಿಗೆ ಖುಷಿ ತಂದಿದೆ. ಈಗಾಗಲೇ 40 ದಿನಗಳ ಕಾಲ ನೀರು ಹರಿಸಲಾಗಿತ್ತು. ಈಗ 43 ದಿನಗಳ ಕಾಲ ನೀರು ಹರಿಸಲು ಮುಂದಾಗಿರುವುದು ಸಮಾಧಾನ ತಂದಿದೆ.












Click it and Unblock the Notifications