ಸಾಲ ಮರುಪಾವತಿಸಲಾಗದೆ ಎಚ್ ಡಿ ಕೋಟೆ ರೈತ ಆತ್ಮಹತ್ಯೆ
ಮೈಸೂರು, ಫೆಬ್ರವರಿ 20: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ರೈತರೊಬ್ಬರು ಸಾಲ ಮರುಪಾವತಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್ ಡಿ ಕೋಟೆ ತಾಲೂಕಿನ ಬೀರಂಬಳ್ಳಿಯಲ್ಲಿ ನಡೆದಿದೆ.
ಬೀರಂಬಳ್ಳಿ ಗ್ರಾಮದ ಮಹದೇವ (45) ಮೃತರು. ಮೂರು ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಸಾಲ ಮರುಪಾವತಿಸಲಾಗದೆ ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ತಹಶೀಲ್ದಾರ್ ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಡಾದಿಡ್ಡಿ ಕಾರು ಚಾಲನೆ, ಇಬ್ಬರಿಗೆ ಗಾಯ
ಯುವಕನೊಬ್ಬ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಆರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಜಖಂಗೊಂಡು, ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಅಕ್ಷಯ್ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದಾತ. ಈತ ಭಾನುವಾರ ಬೆಳಗ್ಗೆ ಮನಬಂದಂತೆ ಕಾರು ಚಲಾಯಿಸಿದ್ದು, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆರಕ್ಕೂ ಹೆಚ್ಚು ಬೈಕ್ ಗಳು ಜಖಂಗೊಂಡಿವೆ. ಅಷ್ಟೇ ಅಲ್ಲ, ಅಲ್ಲೇ ನಿಂತಿದ್ದ ಇಬ್ಬರು ಗಾಯಗೊಂಡಿದ್ದು, ಭಾನವಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಾರು ಚಾಲಕ ಅಕ್ಷಯ್ ನನ್ನು ಕುವೆಂಪುನಗರ ಸಂಚಾರ ಠಾಣೆ ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಸಂಚಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ವಿಪರೀತ ಸಾಲ ಮಾಡಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತರನ್ನು ಮೈಸೂರು ಕುಂಬಾರಕೊಪ್ಪಲಿನ ನಿವಾಸಿ ಸರಸ್ವತಿ (45) ಎಂದು ಗುರುತಿಸಲಾಗಿದೆ. ಇವರು ನಿರ್ಮಾಣ ಹಂತದಲ್ಲಿರುವ ಮನೆಯ ನೀರಿನ ಸಂಪ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗಾಗಿ ಪತಿ ಮಹೇಶ ಹಾಗೂ ಸರಸ್ವತಿ ಇಬ್ಬರೂ ಸಾಲ ಮಾಡಿದ್ದರು. ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications