ರೈತರು ಮಾಗಿ ಉಳುಮೆಯನ್ನು ಏಕೆ ಮಾಡಬೇಕು ಗೊತ್ತಾ?
ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಸುರಿದಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ. ಬಿಸಿಲ ಧಗೆಗೆ ಬೆಂದಿದ್ದ ಜಮೀನಿನನ್ನು ಮಳೆ ತಂಪಾಗಿಸಿದೆ. ಜೊತೆಗೆ ಗಿಡಮರಗಳಿಗೆ ಜೀವ ಬಂದಿದೆ. ಹೀಗಾಗಿ ರೈತರಲ್ಲಿ ಹುರುಪು ಮೂಡಿದ್ದು ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಆರಂಭಿಸುವ ಸಲುವಾಗಿ ಉಳುಮೆ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಲವರು ಟ್ರ್ಯಾಕ್ಟರ್ ಗಳಿಂದ ಉಳುಮೆ ಮಾಡಿದರೆ ಮತ್ತೆ ಕೆಲವು ರೈತರು ಎತ್ತುಗಳ ಮೂಲಕ ಉಳುಮೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆಯೇ ಮಳೆ ಸುರಿದರೆ ರೈತರ ಮೊಗದಲ್ಲಿ ಮಂದಹಾಸ ಮೂಡುವುದರೊಂದಿಗೆ ಖುಷಿ ಖುಷಿಯಾಗಿ ಉಳುಮೆ ಮಾಡಲು ಸಹಕಾರಿಯಾಗಲಿದೆ.
ಆಧುನಿಕ ಕೃಷಿ ಕ್ರಮಗಳ ಮೂಲಕ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದರೂ ಹಳೆಯ ಸಂಪ್ರದಾಯವನ್ನು ಬಿಟ್ಟಿಲ್ಲ. ಹಿಂದಿನ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ರೈತರು ಕೃಷಿ ಕಾರ್ಯಗಳನ್ನು ಮಾಡುತ್ತಿದ್ದರು. ಅದರಲ್ಲೂ ಸಂಕ್ರಾಂತಿ ಕಳೆದ ನಂತರ ತಲೆ ಸುಡುವ ಬೇಸಿಗೆಯಲ್ಲಿ ಮಳೆ ಸುರಿದಾಗ ರೈತರ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಯುಗಾದಿ ಕಳೆಯುತ್ತಿದ್ದಂತೆಯೇ ಮಳೆಯೂ ಸುರಿಯಲಾರಂಭಿಸುತ್ತಿತ್ತು. ಹೀಗಾಗಿ ಕೃಷಿ ಭೂಮಿ ತೇವವಾಗುತ್ತಿತ್ತು. ಈ ಸಂದರ್ಭ ರೈತರು ಮುಂದಿನ ಕೃಷಿ ಚಟುವಟಿಕೆಗಾಗಿ ಉಳುಮೆ ಆರಂಭಿಸುತ್ತಿದ್ದರು. ಇದುವೇ ಮಾಗಿ ಉಳುಮೆಯಾಗಿದೆ.

ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ಧಗೊಳಿಸುವ ಮಾಗಿ ಉಳುಮೆ ಪಾರಂಪರಿಕ ಕೃಷಿ ಪದ್ಧತಿಯ ಬಹುಮುಖ್ಯ ಭಾಗವಾಗಿದೆ. ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕಡಿಮೆ ಖರ್ಚಿನ ನೆಲ ಅಗೆತ ಅಥವಾ ತಿರುವಿ ಹಾಕುವಿಕೆಗೆ ಅರ್ಥಾತ್ ಉಳುಮೆಗೆ ಇದು ಸಕಾಲವಾಗಿರುತ್ತದೆ. ಈ ಸಂದರ್ಭ ಉಳುಮೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಸಸಿಮಡಿ ತಯಾರಿ, ಬಿತ್ತನೆ ಹೀಗೆ ತಾವು ಬೆಳೆಯುವ ಬೆಳೆಗೆ ತಕ್ಕಂತೆ ಕೃಷಿ ಕಾರ್ಯ ನಡೆಸಲು ಅನುಕೂಲವಾಗಲಿದೆ. ಅಲ್ಲದೆ ಭೂಮಿಯಲ್ಲಿನ ಕೀಟಗಳ ನಿಯಂತ್ರಣಕ್ಕೂ ಅನುಕೂಲವಾಗಲಿದೆ.
ಮಾಗಿ ಉಳುಮೆ ಏಕೆ ಮಾಡಬೇಕು?
ಕೃಷಿ ಇಲಾಖೆ ಹೇಳುವಂತೆ ಉಳುಮೆಗೆ ಇದು ಸಕಾಲವಂತೆ. ರೈತರು ಈ ಸಮಯದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡುವ ಕೃಷಿ ಅಧಿಕಾರಿಗಳು ಜನವರಿ ಮತ್ತು ಫೆಬ್ರವರಿ ತಿಂಗಳೊಳಗೆ ರೈತರು ಬೆಳೆದ ಕೃಷಿ ಬೆಳೆಗಳನ್ನು ಕಟಾವು ಮಾಡಲು ಸೂಕ್ತ ಸಮಯವಾಗಿದೆ. ಭೂಮಿಯನ್ನು ಹದವಾಗಿ ಉಳುಮೆ ಮಾಡಬೇಕು. ಅಂದರೆ, ಪೂರ್ಣ ಅವಧಿ ಮುಗಿದ ನಂತರ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆಯಲು ಭೂಮಿ ಸಿದ್ಧಗೊಳಿಸಲು ಮಾಗಿ ಉಳುಮೆ ಸಹಕಾರಿಯಾಗಿದೆ. ಸಾಮಾನ್ಯವಾಗಿ ನೀರಾವರಿ ಸೌಲಭ್ಯವಿದ್ದಲ್ಲಿ ಮಾತ್ರ ರೈತರು ಬೇಸಿಗೆ ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ.

ಬೇಸಿಗೆ ಬೆಳೆಗೆ ಅವಕಾಶವಿಲ್ಲದ ಸಂದರ್ಭದಲ್ಲಿ ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಟ್ರ್ಯಾಕ್ಟರ್ ಚಾಲಿತ ನೇಗಿಲು ಅಥವಾ ಎತ್ತಿನ ನೇಗಿಲಿನಿಂದ ಉಳುಮೆಯನ್ನು ಕೈಗೊಳ್ಳಬೇಕು. ಕೆಂಪು ಮಣ್ಣಿನಲ್ಲಿ ವರ್ಷಕ್ಕೊಮ್ಮೆ ಮಾಗಿ ಉಳುಮೆ ಕೈಗೊಳ್ಳಬೇಕು. ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದರಿಂದ ಅನೇಕ ರೀತಿಯ ಸಸ್ಯರೋಗ, ಕೀಟರೋಗ ಭಾದೆ ಹೆಚ್ಚಾಗಲು ಕಾರಣವಾಗಿದೆ. ಈ ವರ್ಷದಲ್ಲಿ ಅವಧಿಗಿಂತ ಮುಂಚಿತವಾಗಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಮಾಗಿ ಉಳುಮೆ ಮಾಡಿದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳ ಶಿಲೀಂದ್ರಗಳು ನಾಶವಾಗಲು ಸಹಕಾರಿಯಾಗಲಿದೆ.
ಮಾಗಿ ಉಳುಮೆಯಿಂದ ಏನೆಲ್ಲ ಉಪಯೋಗ?
ಇವತ್ತು ಕೃಷಿ ಕಾರ್ಯ ಮಾಡುವ ಬಹುತೇಕ ರೈತರಿಗೆ ಮಾಗಿ ಉಳುಮೆಯ ಉಪಯೋಗವೇನು ಎಂಬುವುದೇ ಗೊತ್ತಿಲ್ಲ. ಹೀಗಾಗಿ ಕೃಷಿ ಕೆಲಸದಲ್ಲಿ ವಿಫಲತೆ ಕಾಣುತ್ತಿದ್ದಾರೆ. ಹಾಗಾದರೆ ಮಾಗಿ ಉಳುಮೆಯಿಂದ ಏನೇನು ಪ್ರಯೋಜನವಿದೆ ಎಂಬುದನ್ನು ನೋಡಿದ್ದೇ ಆದರೆ ಹಿಂದಿನ ಹಂಗಾಮಿನಲ್ಲಿ ಬೆಳೆದ ಬೆಳೆಯ ತ್ಯಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಸೇರುವಂತೆ ಮಾಡಲಾಗುವುದರಿಂದ ತ್ಯಾಜ್ಯವು ಕೊಳೆತು ಸಾವಯವ ಗೊಬ್ಬರವಾಗುತ್ತದೆ. ಮಾಗಿ ಉಳುಮೆಯಿಂದ ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದ ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗಲು ಸಹಕಾರಿಯಾಗುತ್ತದೆ.
ಈ ಹಿಂದಿನ ಹಂಗಾಮುಗಳಲ್ಲಿ ಬೆಳೆದ ಬೆಳೆಗಳಲ್ಲಿದ್ದ ಅಥವಾ ಮಣ್ಣಿನಲ್ಲಿರುವ ಕೀಟ, ಮೊಟ್ಟೆಗಳು ಹಾಗೂ ರೋಗಗಳು ಸೂರ್ಯನ ಬಿಸಿಲಿನ ತಾಪಕ್ಕೆ ನಾಶವಾಗುವುದರಿಂದ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಅಕಾಲಿಕ ರಭಸದ ಮಳೆಯಿಂದ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದು, ಜೊತೆಗೆ ಬಿದ್ದಂತಹ ಮಳೆ ನೀರು ಉಳುಮೆಯ ಕಿರುಪಾತಿಗಳಲ್ಲೇ ಶೇಖರಣೆಯಾಗುತ್ತದೆ.
ಮಾಗಿ ಉಳುಮೆಯಿಂದ ಕಳೆಗಳಾದ ಗರಿಕೆಯ ಬೇರು ಮತ್ತು ಜೇಕಿನ ಗೆಡ್ಡೆಗಳನ್ನು ಆರಿಸಿ ತೆಗೆಯಲು ಅನುಕೂಲ ಆಗುವುದರಿಂದ ಬಹುವಾರ್ಷಿಕ ಕಳೆ ನಿಯಂತ್ರಿಸಲು ಸಾಧ್ಯವಾಗಲಿದೆ. ಆದ್ದರಿಂದ ಮಳೆ ಬಿದ್ದು ಭೂಮಿ ಹದವಾಗಿದ್ದರೆ ರೈತರು ಉದಾಸೀನತೆ ತಾಳದೆ ಉಳುಮೆಗೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.












Click it and Unblock the Notifications