ರೈತನ ಯಶೋಗಾಥೆ; ತೈವಾನ್ ಪಿಂಕ್ ಪೇರಲ ಬೆಳೆಯಲ್ಲಿ ಕೊಪ್ಪಳ ರೈತನ ಸಾಧನೆ
ಕೊಪ್ಪಳ, ಜುಲೈ 15; 'ಒಂದು ಜಿಲ್ಲೆ ಒಂದು ಬೆಳೆ' ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಪೇರಲ ಬೆಳೆ ಆಯ್ಕೆಯಾಗಿದೆ. ಮಾವಿನ ಬೆಳೆ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಆದರೆ ಇತ್ತೀಚಿಗೆ ರೈತರು ಪೇರಲ ಬೆಳೆಯಲ್ಲಿಯೂ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳದಲ್ಲಿ ಆಯೋಜಿಸಿದ್ದ ಮಾವು ಮೇಳ ಅತ್ಯಂತ ಯಶಸ್ವಿಯಾಗಿ ರಾಜ್ಯಮಟ್ಟದಲ್ಲೂ ಸುದ್ದಿ ಮಾಡಿತ್ತು. ಜಿಲ್ಲೆ ಕೇವಲ ಮಾವಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಇನ್ನೊಂದು ಪ್ರಮುಖ ಬೆಳೆಯಾಗಿ ಪೇರಲ ಎಂದು ಕರೆಯಲ್ಪಡುವ ಸೀಬೆ ಹೆಚ್ಚು ಜನಪ್ರಿಯವಾಗುತ್ತಿದೆ.
ಪೇರಲ ಬೆಳೆ ಸಾಧಾರಣ ಮಣ್ಣು ಹಾಗೂ ಕಡಿಮೆ ನೀರಿನಲ್ಲಿಯೂ ಅತ್ಯಂತ ಸಮೃದ್ಧ ಇಳುವರಿ ಕೊಡಬಲ್ಲದು. ಜನರೂ ಕೂಡಾ ಹೆಚ್ಚು ಇಷ್ಟಪಡುವ ಬೆಳೆ ಇದಾಗಿದೆ. ಇದರಲ್ಲಿರುವ ವಿಟಮಿನ್ 'ಸಿ' ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿ. ಮಧುಮೇಹಿಗಳಿಗೂ ಪೇರಲ ಉತ್ತಮ ಔಷಧ.
ಕೇಂದ್ರ ಸರ್ಕಾರದ ಮಾಡಿದ ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಯೋಜನೆ ನಿಯಮಬದ್ದಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ಕೊಪ್ಪಳ ಜಿಲ್ಲೆಗೆ 'ಒಂದು ಜಿಲ್ಲೆ ಒಂದು ಬೆಳೆ' ಯೋಜನೆಯಡಿ ಪೇರಲ ಬೆಳೆ ಆಯ್ಕೆಯಾಗಿದೆ.

ಪೇರಲ ಬೆಳೆಯಲ್ಲಿ ಯಶಸ್ವಿ
ಬಿಕನಳ್ಳಿ ಗ್ರಾಮದ ಹನುಮಂತಪ್ಪ ಪೂಜಾರ ಒಬ್ಬರು ಸಾಮಾನ್ಯ ರೈತರು. ಮೆಕ್ಕೆ ಜೋಳ, ಹತ್ತಿ, ಸಜ್ಜೆ, ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ರೇಷ್ಮೆ ಕೃಷಿ ಕೂಡ ಮಾಡಿದರೂ ಆಕರ್ಷಕ ಆದಾಯ ಕೈ ಸೇರಿರಲಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಅನೇಕ ರೈತಪರ ಯೋಜನೆಗಳ ಬಗ್ಗೆ ಮಾಧ್ಯಮಗಳಿಂದ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಡಿಮೆ ಖರ್ಚು, ಅಧಿಕ ಲಾಭ ಪಡೆಯಬೇಕಾದರೆ ಯಾವ ಬೆಳೆ ಬೆಳೆಯಬೇಕು? ಎಂದು ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಿದರು. ಆಗ ಪೇರಲ ಬೆಳೆಯಲ್ಲಿ ಕಡಿಮೆ ನಿರ್ವಹಣೆಯಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು.

ತೈವಾನ್ ಪಿಂಕ್ ತಳಿಯ ಪೇರಲ
2021-22ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪೇರಲ ಬೆಳೆ ನಾಟಿ ಮಾಡಿದರು. ಇವರಿಗೆ ಸಸಿಗಳ ಲಭ್ಯತೆ, ನಾಟಿ ಮಾಡುವ ವಿಧಾನ, ಅಂತರ ಮತ್ತು ಮುಂತಾದ ತಾಂತ್ರಿಕ ಮಾಹಿತಿ ನೀಡಿ ಇಲಾಖೆ ಮಾರ್ಗದರ್ಶನ ನೀಡಿತು.
ಅಳವಂಡಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜ ರಾಂಪೂರ ಸಲಹೆ ಪಡೆದು ಎಕರೆಗೆ 6*6 ಅಡಿ ಅಂತರದಲ್ಲಿ ತೈವಾನ ಪಿಂಕ್ ತಳಿಯ 1000 ಗಿಡಗಳನ್ನು ಆಂಧ್ರ ಪ್ರದೇಶ ರಾಜಮಂಡ್ರಿಯಿಂದ ತಂದು ನಾಟಿ ಮಾಡಿದರು.

ಸುಮಾರು 3 ಲಕ್ಷ ರೂ. ಆದಾಯ ಪಡೆದರು
ಗಿಡಗಳಿಗೆ ಒಂದೂವರೆ ವರ್ಷದವರೆಗೂ ಉತ್ತಮ ನೀರು, ಪೋಷಕಾಂಶಗಳ ನಿರ್ವಹಣೆಯಿಂದ 1.5 ವರ್ಷಕ್ಕೆ ಉತ್ತಮ ಗುಣಮಟ್ಟದ ಇಳುವರಿ ಪಡೆದರು. ಸುಮಾರು 3 ಲಕ್ಷ ಆದಾಯ ಪಡೆದಿರುತ್ತಾರೆ.
ಈ ಕುರಿತು ಮಾತನಾಡಿದ ರೈತ ಹನುಮಂತಪ್ಪ, "ಒಂದು ಎಕರೆಯಿಂದ ಎರಡೇ ವರ್ಷದಲ್ಲಿ ಇನ್ನೊಂದು ಆದಾಯ ಪಡೆದಿರುವುದು ಇದೇ ಮೊದಲು. ನನ್ನ ಹಣ್ಣುಗಳಿಗೆ ಹೊಸಪೇಟೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ನಿರಂತರವಾಗಿ ನಾನು ಹೊಸಪೇಟೆ ಮಾರುಕಟ್ಟೆಗೆ ಹಣ್ಣುಗಳನ್ನು ಕಳುಹಿಸುತ್ತೇನೆ. ಇಂದು ನನ್ನ ಈ ಉತ್ತಮ ಸ್ಥಿತಿಗೆ ತೋಟಗಾರಿಕೆ ಅಧಿಕಾರಿಗಳ ಸಲಹೆ, ಸಹಕಾರವೇ ಕಾರಣ. ಅವರ ಮಾರ್ಗದರ್ಶನದಲ್ಲಿ ನನಗೆ ಲಾಭವಾಗಿದೆ. ಅವರಿಗೆಲ್ಲಾ ನಾನು ಋಣಿಯಾಗಿರುತ್ತೇನೆ" ಎಂದರು.

ರೈತರು ಯೋಜನೆಗಳ ಉಪಯೋಗ ಪಡೆಯಿರಿ
ತೋಟಗಾರಿಕೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಪನ್ಮೂಲ ಅಧಿಕಾರಿಗಳು ರೈತ ಹನುಮಂತಪ್ಪ ತೋಟಕ್ಕೆ ಭೇಟಿ ನೀಡಿದರು. ಉತ್ತಮ ಬೆಳೆ ನೋಡಿ ಶ್ಲಾಘಿಸಿದರು. ತೋಟಗಾರಿಕೆ ಉಪನಿರ್ದೇಶಕರು ಕೃಷ್ಣ ಉಕ್ಕುಂದ ಅವರು ಮಾತನಾಡಿ, "ರೈತರು ಕಡಿಮೆ ಖರ್ಚಿನಲ್ಲಿ ಪೇರಲ ಬೆಳೆ ಬೆಳೆದರೆ, ಉತ್ತಮ ಆದಾಯ ಪಡೆಯಬಹುದಾಗಿದೆ. ಇದಕ್ಕಾಗಿ ಇಲಾಖೆಯಲ್ಲಿ ಹಲವಾರು ರೈತ ಪರ ಯೋಜನೆಗಳಿವೆ. ರೈತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಕರೆ ನೀಡಿದರು.
Recommended Video

ಸಸಿಗಳನ್ನು ತರಿಸಿದ್ದಾರೆ
ಈಗ ಪೇರಲ 1 ಎಕರೆಯಲ್ಲಿ ಪೇರಲ ಬೆಳೆದಿದ್ದು, ಉತ್ತಮ ಆದಾಯ ಪಡೆದಿರುವ ಹನುಮಂತಪ್ಪ ಪೂಜಾರ ಇನ್ನೊಂದು ಎಕರೆ ನಾಟಿ ಮಾಡಲು ಆಗಲೇ ಸಸಿಗಳನ್ನು ತರಿಸಿದ್ದಾರೆ. ಪೇರಲ ಬೆಳೆಯಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುವುದೆಂದು ಮಾಹಿತಿ ಪಡೆದ ಈ ಭಾಗದ ಹತ್ತಾರು ರೈತರು ಒಂದೂವರೆಯಿಂದ 2.5 ಎಕರೆಯಷ್ಟು ಸಾಂದ್ರ ಪದ್ದತಿಯಲ್ಲಿ ಪೇರಲೆ ಬೆಳೆಯಲು ಉತ್ಸಾಹ ತೋರಿಸುತ್ತಿದ್ದಾರೆ.
ಪೇರಲ ಕೊಪ್ಪಳ ಜಿಲ್ಲೆಯ ಎರಡನೇ ಪ್ರಮುಖ ಹಣ್ಣಿನ ಬೆಳೆಯಾಗಿ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಾಮನಮೂರ್ತಿ ಹೇಳಿದ್ದಾರೆ.












Click it and Unblock the Notifications