Monsoon Rain: ರೈತರಿಗೆ ಸೂಕ್ತ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿ: ಚಿಕ್ಕಮಗಳೂರಿನಲ್ಲಿ ರೈತ ಮುಖಂಡರ ಆಗ್ರಹ
ಚಿಕ್ಕಮಗಳೂರು, ಜೂನ್, 14: ಮುಂಗಾರು ಪ್ರವೇಶ ಹಿನ್ನೆಲೆ ಜಿಲ್ಲಾಡಳಿತ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಯಲು ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಇದೀಗ ಮುಂಗಾರು ಸಹ ಆರಂಭವಾಗಿದೆ. ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಚಟುವಟಿಕೆಗೆ ಕಾಯುತ್ತಿದ್ದಾರೆ. ಈ ಆದ್ದರಿಂದ ರೈತರಿಗೆ ಅಗತ್ಯವಿರುವ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ, ತೋಟಗಾರಿಕೆ ಸಲಕರಣೆಗಳನ್ನು ಯಾವುದೇ ತೊಡಕುಗಳಿಗೆ ಅವಕಾಶವಿಲ್ಲದಂತೆ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಲವು ಮಾರಾಟಗಾರರು ರಸಗೊಬ್ಬರದ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಕೀಟನಾಶಕಗಳು ಸೇರಿದಂತೆ ಇನ್ನಿತರರೆ ಕೃಷಿ, ತೋಟಗಾರಿಕೆ ಸಾಮಾಗ್ರಿಗಳು ಕಳಪೆಯಾಗಿರುವ ಬಗ್ಗೆಯೂ ಆಕ್ಷೇಪಗಳು ಇರುವ ಹಿನ್ನೆಲೆ, ಅಂತಹವರಿಗೆ ಕಡಿವಾಣ ಹಾಕಬೇಕು. ಮತ್ತೊಂದೆಡೆ ಕೆಲವು ಮಾರಾಟಗಾರರು ಗೊಬ್ಬರವನ್ನು ನಿಗಧಿತ ಬೆಲೆಗಿಂತಲೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಮಾಯಕ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗೆ ಕಳಪೆ ಬೀಜ, ಗೊಬ್ಬರ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಇನ್ನು ಪಕ್ಕದ ಜಿಲ್ಲೆ ಹಾಸನದ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಮಾಡಿದ ಪರಿಣಾಮ, ಆಲೂಗೆಡ್ಡೆ ನೆಲದಲ್ಲೇ ಕೊಳೆತುಹೋಗಿವೆ. ಈ ಹಿನ್ನೆಲೆ ರೈತರು ಟ್ರ್ಯಾಕ್ಟರ್ ಹಾಯಿಸಿ ಬೆಳೆ ನಾಶ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೊನ್ನೆಯಷ್ಟೇ ನಡೆದಿದೆ.
ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯತ್ತ ನಿಗಾ ವಹಿಸಬೇಕು. ಅಲ್ಲದೆ, ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ಕಳಪೆ ಬೀಜ ಮಾರಾಟ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದೆಡೆ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ. ಮತ್ತೊಂದೆಡೆ ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿದ್ದು, ಇದರಿಂದ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವ ಜೊತೆಗೆ ರೈತರಿಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದು ಒತ್ತಾಯಿಸಿದರು.












Click it and Unblock the Notifications