ಜೋಳ ಖರೀದಿ ಹಗರಣ: ತನಿಖೆ ಚುರುಕುಗೊಳಿಸುವಂತೆ ಶ್ರೀರಾಮುಲು ಸೂಚನೆ
ಬಳ್ಳಾರಿ ನವೆಂಬರ್ 8: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ಜೋಳವನ್ನು ಅಕ್ರಮವಾಗಿ ಗೋದಾಮುಗಳಲ್ಲಿ ದಾಸ್ತಾನಿರಿಸಿ ಅವ್ಯವಹಾರ ಮಾಡಿದವರ ವಿರುದ್ಧ ತನಿಖೆ ನಡೆಸುವಂತೆ ಸಚಿವ ಬಿ.ಶ್ರೀ ರಾಮುಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾ ಪಂಚಾಯತ್‌ನ ನಜೀರ್ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಜೋಳದ ಹಂಚಿಕೆಯಲ್ಲಿ ಆಡಚಣೆ ಉಂಟಾಗಿದೆ. ಈ ಬಗ್ಗೆ ಕಾರ್ಯಾಚರಣೆ ಕೈಗೊಂಡಾಗ ಹಲವು ತಪ್ಪಿತಸ್ಥರು ಇದರಲ್ಲಿ ಭಾಗಿಯಾಗಿ ಅವ್ಯವಹಾರ ನಡೆದ ಬಗ್ಗೆ ತಿಳಿದು ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಂತೆ ಶ್ರೀರಾಮುಲು ಆಗ್ರಹ
ಜೋಳದ ಹಂಚಿಕೆಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾದ ಹಲವರ ವಿರುದ್ಧ ಬಳ್ಳಾರಿ ಗ್ರಾಮೀಣ ಮತ್ತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವ್ಯವಹಾರ ಹಗರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕು ಎಂದು ಸಚಿವ ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅದೇ ರೀತಿಯಾಗಿ ಜೋಳ ಬೆಳೆಯದವರೂ ಸಹ ಜೋಳ ಬೆಳೆದಿರುವುದಾಗಿ ಸುಳ್ಳು ಪ್ರಮಾಣ ಪತ್ರ ನೀಡಿ ಬೆಂಬಲ ಬೆಲೆ ಯೋಜನೆ ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಬೆಳೆ ಸಮೀಕ್ಷೆ ತಂತ್ರಾಂಶ ಫೋಟೋ ಹಾಗೂ ನಮೂದಿಸಿರುವ ಬೆಳೆ ತಾಳೆಯಾಗುವುದನ್ನು ಗಮನಿಸಿದಾಗ 600ಕ್ಕೂ ಹೆಚ್ಚು ವ್ಯತ್ಯಾಸ ಕಂಡು ಬಂದಿದೆ ಎಂದು ತನಿಖಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಮಾರ್ಚ್ ವೇಳೆಗೆ 13 ಲಕ್ಷ ಕಾರ್ಡ್ ವಿತರಿಸುವಂತೆ ಅಧಿಕಾರಿಗೆ ಸೂಚನೆ
ಶ್ರೀರಾಮುಲು, ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯಲ್ಲಿ 29ನೇ ಸ್ಥಾನದಲ್ಲಿದ್ದು, 5ನೇ ಸ್ಥಾನದೊಳಗೆ ಬರಲು ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಜಿಲ್ಲೆಯಲ್ಲಿ 140 ಗ್ರಾಮ ಒನ್ ಕೇಂದ್ರಗಳು ಆಭಾ ಕಾರ್ಡ್ ನೊಂದಣಿ ಮಾಡುತ್ತಿವೆ. ಈಗಾಗಲೇ 2 ಲಕ್ಷ ಆಭಾ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು. ಈ ವೇಳೆ ಮಾತನಾಡಿದ ಶ್ರೀರಾಮುಲು 16 ಲಕ್ಷ ಕಾರ್ಡ್ ವಿತರಣೆ ಗುರಿಯಲ್ಲಿ 2 ಲಕ್ಷ ಮಾತ್ರ ವಿತರಣೆ ಮಾಡಿದ್ದು ಮಾರ್ಚ್ ಆರಂಭದ ವೇಳೆಗೆ 13 ಲಕ್ಷದಷ್ಟು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ ಮಾಡಬೇಕೆಂದು ಖಡಕ್ ಸೂಚನೆ ನೀಡಿದರು.

ಹಳ್ಳಿಗಳಲ್ಲಿ ಬಿಲ್ ಕಟ್ಟದವರ ವಿದ್ಯುತ್ ಕಡಿತ ಮಾಡದಂತೆ ಸೂಚನೆ
ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಲು ಪ್ರಧಾನ ಮಂತ್ರಿಯವರ ಬೆಳಕು ಯೋಜನೆಯು ಜಾರಿಗೆ ಬಂದಿದ್ದು, ಅದನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಹಣ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಈ.ತುಕಾರಾಂ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಸಚಿವರು ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷೀಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಳ್ಳಿಗಳಲ್ಲಿ ವಿದ್ಯುತ್ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಜೆಸ್ಕಾಂ ಸಿಬ್ಬಂದಿ ಅಮಾನವೀಯವಾಗಿ ವರ್ತನೆ ಮಾಡುತ್ತಿದ್ದಾರೆ. ಬಾಕಿ ಬಿಲ್‌ಗಳನ್ನು ಹಂತ ಹಂತವಾಗಿ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಪ್ರಸ್ತಾಪಿಸಿದರು. ಜೆಸ್ಕಾಂ ಸಿಬ್ಬಂದಿಯವರು ಬಿಲ್ ಪಾವತಿ ಮಾಡದವರು ವಿದ್ಯುತ್ ಸಂಪರ್ಕ ಕಡಿತ ಮಾಡದೆ ಅವರಿಂದ ಬಿಲ್ ಕಟ್ಟಿಸಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಪ್ರತಿ ತಾಲೂಕಿನಲ್ಲಿ ಇಬ್ಬರು ಪಶು ವೈದ್ಯರ ನೇಮಕ
ಹಳ್ಳಿ ಭಾಗಗಳಲ್ಲಿ ದನ-ಕರು, ಎತ್ತುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದೇ ರೀತಿಯಾಗಿ ವಿವಿಧ ಖಾಯಿಲೆಗಳಿಂದ ಕುರಿಗಳು ಸಾವನ್ನಪ್ಪಿದರೂ, ಪಶು ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಪ್ರಸ್ತಾಪಿಸಿದರು.
ಜಿಲ್ಲೆಯಲ್ಲಿ ದನಕರುಗಳು ಹಾಗೂ ಎತ್ತುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಹಳ್ಳಿಯ ಭಾಗದ ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ. ಈ ರೋಗವು ಎಮ್ಮೆಗಳಲ್ಲಿ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಇಬ್ಬರಂತೆ ಪಶು ವೈದ್ಯರನ್ನು ನೇಮಕ ಮಾಡಲಾಗಿದೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿ ಆಂಧ್ರಾಳ್ ಮತ್ತು ಕಂಪ್ಲಿಯಲ್ಲಿ ಗೋ ಶಾಲೆಗಳನ್ನು ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.












Click it and Unblock the Notifications