ಸಾವಯವ ಕೃಷಿ ಉತ್ತೇಜನಕ್ಕೆ ವಿಜ್ಞಾನಿಗಳು ಕೈಜೋಡಿಸಿ: ಸಿಎಂ ಯೋಗಿ ಕರೆ
ಲಕ್ನೋ, ಜೂನ್ 15: "ಸಾವಯವ ಕೃಷಿಯನ್ನುಉತ್ತೇಜಿಸಲು ಮತ್ತು ರೈತರು ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡಲು ಉತ್ತರ ಪ್ರದೇಶ ಸರ್ಕಾರ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಕೃಷಿ ವಿಜ್ಞಾನಿಗಳು ಸಹಾಯ ಮಾಡಬೇಕೆಂದು" ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಉತ್ತರ ಪ್ರದೇಶ ಕೃಷಿ ಸಂಶೋಧನಾ ಮಂಡಳಿಯ (ಯುಪಿಸಿಎಆರ್) 33 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಆಯೋಜಿಸಲಾದ ಸಮ್ಮೇಳನವನ್ನು ವಾಸ್ತವಿಕವಾಗಿ ಉದ್ಘಾಟಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದರು. "ರಾಜ್ಯದಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ" ಎಂದರು.
"ಸಾವಯವ ಕೃಷಿಯಿಂದ ಹಸುಗಳಿಗೆ ಭದ್ರತೆ ನೀಡುವುದಲ್ಲದೇ ರಾಸಾಯನಿಕ ಕೃಷಿಯಿಂದ ಉಂಟಾಗುವ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ಕಳೆದ 5 ವರ್ಷಗಳಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವಲ್ಲಿ ಕೃಷಿ ಇಲಾಖೆ ಪ್ರಮುಖ ಪಾತ್ರ ವಹಿಸಿದೆ" ಎಂದು ಹೇಳಿದರು.
"ನೈಸರ್ಗಿಕ ಕೃಷಿಯು ರಾಸಾಯನಿಕಗಳ ಬಳಕೆಯನ್ನು ತಪ್ಪಿಸಲು ಇರುವ ಉತ್ತಮ ಸಾಧನವಾಗಿದೆ, ಜೊತೆಗೆ ರೈತರು ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಉತ್ಪಾದನೆಯನ್ನು ಪಡೆಯಲು ಸಾವಯವ ಕೃಷಿ ಸಹಾಯ ಮಾಡುತ್ತದೆ" ಎಂದರು.

ಕೃಷಿಯಲ್ಲಿ ರಾಸಾಯನಿಕ ಬಳಕೆ ತಪ್ಪಿಸಬೇಕು
ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ತಪ್ಪಿಸುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದ ಆದಿತ್ಯನಾಥ್, ಕೇಂದ್ರ ಬಜೆಟ್‌ನಲ್ಲಿ ಹಸು ಆಧಾರಿತ ನೈಸರ್ಗಿಕ ಕೃಷಿಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದರು.
ಸಾವಯವ ಕೃಷಿ ವಿಧಾನದಲ್ಲಿ ಸುಧಾರಣೆ ತರಲು, ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿಸಲು ಕೃಷಿ ವಿಜ್ಞಾನಿಗಳು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು. ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ದೇಶೀಯ ಪದ್ಧತಿಯನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಲು ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ಒತ್ತಾಯಿಸಿದರು.

ಸಾವಯವ ಕೃಷಿಗೆ ಪ್ರೋತ್ಸಾಹ ಅತ್ಯಗತ್ಯ
ಗಂಗಾ ನದಿಯ ದಡದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ರಾಜ್ಯ ಸರ್ಕಾರವು ಬುಂದೇಲ್‌ಖಂಡ್ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಗಂಗಾ ನದಿಯ ದಡದಲ್ಲಿರುವ ಗ್ರಾಮಗಳಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸುವ ಮೂಲಕ ಉತ್ತರ ಪ್ರದೇಶವನ್ನು ದೇಶದಲ್ಲಿ ಸಾವಯವ ಕೃಷಿಯ ಕೇಂದ್ರವನ್ನಾಗಿ ಮಾಡಲು ಸರ್ಕಾರ ಯೋಜನೆ ಆರಂಭಿಸಿದೆ.
ರಾಜ್ಯ ಸರ್ಕಾರವು ಯೋಜಿತ ರೀತಿಯಲ್ಲಿ ಮತ್ತು ಉತ್ತಮ ಮೇಲ್ವಿಚಾರಣೆಗಾಗಿ ಕ್ಲಸ್ಟರ್ ಫಾರ್ಮಿಂಗ್ ಅನ್ನು ಪರಿಚಯಿಸುತ್ತಿದೆ. ರೈತರಿಗೆ ಉತ್ತೇಜನ ನೀಡಲು ಮೂರು ವರ್ಷಗಳ ಕಾಲ 50 ಎಕರೆ ಅಳತೆಯ ಪ್ರತಿ ಕ್ಲಸ್ಟರ್‌ಗೆ 10 ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ನೀಡಲಿದೆ.

ದೇಶದ ಶೇಕಡಾ 20 ರಷ್ಟು ಆಹಾರ ಧಾನ್ಯ ಪೂರೈಕೆ
ರೈತರಿಗೆ ಕೃಷಿ ತಯಾರಿಕೆ, ಹಸಿರೆಲೆ ಗೊಬ್ಬರ ನಿರ್ವಹಣೆ, ನರ್ಸರಿ ತಯಾರಿಕೆ, ಪಂಚಗವ್ಯ, ಜೀವಾಮೃತ, ವರ್ಮಿ ಕಾಂಪೋಸ್ಟ್ ಮತ್ತು ಉತ್ಪನ್ನ ಶುಚಿಗೊಳಿಸುವಿಕೆ ಇತ್ಯಾದಿಗಳ ಬಗ್ಗೆ ಸಾವಯವ ವಿಧಾನದಲ್ಲಿ ತರಬೇತಿ ನೀಡಲಾಗುತ್ತಿದೆ.
"ದೇಶದ ಜನಸಂಖ್ಯೆಯ ಶೇಕಡಾ 17ಕ್ಕಿಂತ ಹೆಚ್ಚು ಜನರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಯೋಗಿ ಹೇಳಿದರು, ಆದರೆ ರಾಜ್ಯದಲ್ಲಿ ಕೇವಲ ಶೇಕಡಾ 12 ಕೃಷಿ ಭೂಮಿ ಇದೆ. ಇದರ ಹೊರತಾಗಿಯೂ, ಉತ್ತರ ಪ್ರದೇಶ ದೇಶದ ಶೇಕಡಾ 20 ರಷ್ಟು ಆಹಾರ ಧಾನ್ಯಗಳನ್ನು ಪೂರೈಸುತ್ತದೆ ಮತ್ತು ಇದು ರಾಜ್ಯದಲ್ಲಿ ಫಲವತ್ತಾದ ಭೂಮಿ ಮತ್ತು ಹೇರಳವಾದ ಜಲಸಂಪನ್ಮೂಲಗಳ ಲಭ್ಯತೆಗೆ ಸಾಕ್ಷಿಯಾಗಿದೆ" ಎಂದು ಅವರು ಮಾಹಿತಿ ನೀಡಿದರು.

ಸಕ್ಕರೆ ಉತ್ಪಾದಿಸಲು 120 ಕಾರ್ಖಾನೆಗಳು ಕಾರ್ಯಾಚರಣೆ
"ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಸಕ್ಕರೆ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸರ್ಕಾರದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಯೋಗಿ, ಮುಚ್ಚಿದ ಸಕ್ಕರೆ ಕಾರ್ಖಾನೆಗಳನ್ನು ಪುನರಾರಂಭಿಸಲಾಗಿದೆ ಮತ್ತು ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ 120 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸಿವೆ" ಎಂದು ಹೇಳಿದರು.
"ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಮತ್ತು ಇದು ರೈತರ ಆದಾಯವನ್ನು ಕೂಡ ಹೆಚ್ಚಿಸುತ್ತದೆ. ಗ್ರಾಹಕರಿಗೆ ಕೊಳ್ಳುವ ಉತ್ಪನ್ನ ಗುಣಮಟ್ಟ ಚೆನ್ನಾಗಿದೆ ಎನ್ನು ನಂಬಿಕೆ ಬಂದರೆ ರೈತರಿಗೆ ಉತ್ತಮ ಬೆಲೆ ನೀಡಲು ಸಿದ್ಧರಾಗಿದ್ದಾರೆ," ಎಂದು ತಿಳಿಸಿದರು.












Click it and Unblock the Notifications