ಮುಂಗಾರು ಜೋಳ ಖರೀದಿಗಷ್ಟೇ ನೋಂದಣಿ: ರಾಯಚೂರು ರೈತರು ಅತಂತ್ರ- ಜೋಳ ಖರೀದಿಗೆ ತಾಂತ್ರಿಕ ತೊಡಕು
ರಾಯಚೂರು ಫೆಬ್ರವರಿ 22: ಬಹುತೇಕ ರೈತರು ಸಾಮಾನ್ಯವಾಗಿ ಹಿಂಗಾರಿನಲ್ಲಿ ಜೋಳಬಿತ್ತನೆ ಮಾಡುವುದು ವಾಡಿಕೆ. ಆದರೆ ಮುಂಗಾರಿನಲ್ಲಿ ಬೆಳೆದ ಜೋಳ ಖರೀದಿಗೆ ಮಾತ್ರ ನೋಂದಣಿ ಅವಕಾಶ ದೊರಕಿದ್ದು ಹಿಂಗಾರಿನಲ್ಲಿ ಜೋಳಬೆಳೆದ ರೈತರು ತಾಂತ್ರಿಕ ತೊಡಕಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಗಾರಿನಲ್ಲಿ ಬೆಳೆದ ಜೋಳ ಖರೀದಿಗೆ ಜಿಲ್ಲೆಯ 29 ಖರೀದಿ ಕೇಂದ್ರಗಳಲ್ಲಿ 4,049 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೆ ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಜೋಳದ ಬೆಳೆ ಕಟಾವು ಹಾಗೂ ರಾಶಿ ಮಾಡುವ ಹಂತದಲ್ಲಿದೆ. ತೀವ್ರ ಬರ , ಮಳೆ ಕೊರತೆ ಮಧ್ಯೆ ಬೆಳೆದ ಹಿಂಗಾರು ಜೋಳ ಖರೀದಿಸಲು ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ರೈತರನ್ನು ಹಿಂದಕ್ಕೆ ಕಳಿಸಲಾಗುತ್ತಿದೆ.

ಸರಕಾರ ಪ್ರತಿ ಬಾರಿ ತಡವಾಗಿ ಜೋಳ ಖರೀದಿ ಮಾಡುವುದರಿಂದ ಬೆಂಬಲ ಬೆಲೆ ಯೋಜನೆಯ ಲಾಭ ರೈತರಿಗೆ ದೊರೆಯದೇ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಜಿಲ್ಲೆಯಲ್ಲಿ 50,768 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲು ಕೃಷಿ ಇಲಾಖೆ ಗುರಿ ಹೊಂದಿತ್ತು. ರೈತರು 52,765 ಹೆಕ್ಟೇರ್ ನಲ್ಲಿ ಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಜೋಳದ ದರ ದಿಡೀರ್ ಕುಸಿತದಿಂದಾಗಿ ರೈತರು ಕಂಗಲಾಗಿದ್ದಾರೆ.
ಹೈಬ್ರಿಡ್ ಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 3180 ರೂಪಾಯಿ ಹಾಗೂ ಬಿಳಿ ಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 3225 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಆದರೆ ಇನ್ನೂ ಜೋಳ ಖರೀದಿ ಕೇಂದ್ರಗಳು ಆರಂಭವಾಗದ ಹಿನ್ನೆಲೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 2332 ರೂಪಾಯಿಗೆ ರೈತರು ಜೋಳ ಮಾರಾಟಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಜೋಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 4049 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶೀಘ್ರವೇ ಜೋಳ ಖರೀದಿ ಮಾಡಲಾಗುವುದು. ಹಿಂಗಾರಿನಲ್ಲಿ ಬೆಳೆದ ಜೋಳ ಖರೀದಿ ಕೇಂದ್ರ ಆರಂಭಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೆಲವೇ ದಿನಗಳಲ್ಲಿ ಹಿಂಗಾರು ಜೋಳದ ನೋಂದಣಿ ಪ್ರಾರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ ಹೇಳಿದರು.

ಪ್ರತಿ ವರ್ಷ ಬೆಂಬಲ ಬೆಲೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ಬೆಲೆ ಇರುತ್ತಿತ್ತು. ಈ ಬಾರಿ ಮಾರುಕಟ್ಟೆಗಿಂತ ಖರೀದಿ ಕೇಂದ್ರದಲ್ಲಿ ದರ ಹೆಚ್ಚಿದೆ. ಆದರೆ ಹಿಂಗಾರಿನಲ್ಲಿ ಬೆಳೆದ ಜೋಳ ಖರೀದಿಗೆ ಹೆಸರು ನೋಂದಾಯಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು , ಇದರಿಂದಾಗಿ ನಮಗೆ ಸಮಸ್ಯೆ ಎದುರಾಗಿದೆ ಎಂದು ಮಾನ್ವಿ ರೈತ ಬಸವರಾಜ ಪಾಟೀಲ್ ಬ್ಯಾಗವಾಟ್ ಹೇಳಿದರು.












Click it and Unblock the Notifications