ರಾಮನಗರ: ರೈತರ ಬದುಕು ಬರಡಾಗಿಸಿದ ಕಾಡಾನೆಗಳು
ಆನೆ ದಾಳಿಯಿಂದಾಗಿ ರಾಮನಗರ ಸುತ್ತ ಮುತ್ತಲಿನ ರೈತರ ಬೆಳೆ ನಾಶವಾಗುತ್ತಿದೆ. ಬರದ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದ ರೈತರು ಇದೀಗ ಅನ್ಯಾಯವಾಗಿ ತಮ್ಮ ಬೆಳೆಯನ್ನು ಕಾಡು ಪ್ರಾಣಿಗಳ ಬಾಯಿಗೆ ಇಡುವಂತಾಗಿದೆ.
ರಾಮನಗರ, ಜನವರಿ 29: ಈ ಬಾರಿ ರಾಮನಗರ ಬರದಿಂದ ತತ್ತರಿಸಿದೆ. ಇದರ ನಡುವೆಯೂ ಕಷ್ಟಪಟ್ಟು ಒಂದಷ್ಟು ರೈತರು ಕೃಷಿ ಮಾಡಿದ್ದಾರೆ. ಆದರೆ ಈ ಅಲ್ಪ ಸ್ವಲ್ಪ ಕೃಷಿಯನ್ನೂ ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತಿಂದು ತೇಗುತ್ತಿದೆ. ತನ್ನ ಕಣ್ಣ ಮುಂದೆಯೇ ಬೆಳೆದ ಬೆಳೆ ನಾಶವಾಗುತ್ತಿದ್ದರೂ, ಕೈಕಟ್ಟಿ ಕೂರಬೇಕಾದ ದುರಂತ ಸ್ಥಿತಿಗೆ ರೈತ ಬಂದಿದ್ದಾನೆ.
ಕನಕಪುರ, ರಾಮನಗರ, ಮಾಗಡಿ, ಮತ್ತು ಚನ್ನಪಟ್ಟಣ ವ್ಯಾಪ್ತಿಯ ರೈತರ ಪಾಡು ಹೇಳ ತೀರದಂತಾಗಿದೆ. ಒಂದೆಡೆ ಕಾಡಾನೆಗಳು ಲಗ್ಗೆಯಿಟ್ಟರೆ ಮತ್ತೊಂದೆಡೆ ಚಿರತೆ, ಕಾಡುಹಂದಿ, ಕರಡಿಗಳು ದಾಳಿಯಿಡುತ್ತಿವೆ. ಬೆಳೆಯನ್ನು ರಕ್ಷಿಸಿಕೊಳ್ಳುವುದಲ್ಲದೆ, ಮನೆಯಲ್ಲಿ ಸಾಕು ಪ್ರಾಣಿಗಳನ್ನೂ ಕಣ್ಣಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.[ಆನೆ ಹಿಂಡು ದಾಳಿ ಮಾಡಿದಾಗ ಆತ ಏನು ಮಾಡಿದ?]

ಅರಣ್ಯದಲ್ಲಿ ಮೇವು, ನೀರಿಗೆ ಕೊರತೆಯುಂಟಾಗಿದ್ದು ಆಹಾರ ಅರಸಿಕೊಂಡು ಕಾಡುಪ್ರಾಣಿಗಳು ನಾಡಿನತ್ತ ಬರತೊಡಗಿವೆ. ಹಾಗೆ ಬರುವ ಪ್ರಾಣಿಗಳು ನೇರವಾಗಿ ರೈತರ ಜಮೀನಿಗೆ ನುಗ್ಗುತ್ತಿವೆ. ಹಿಂಡುಗಟ್ಟಲೆ ಬರುವ ಕಾಡಾನೆಗಳನ್ನು ರೈತರು ಓಡಿಸುವುದಾದರೂ ಹೇಗೆ? ಅವು ಕಷ್ಟಪಟ್ಟು ಬೆಳೆದ ಬಾಳೆ, ತೆಂಗು, ಅಡಿಕೆ ಮರಗಳನ್ನು ಮುರಿದು ತಿಂದು ತುಳಿದು ನಾಶ ಮಾಡಿ ತೆರಳುತ್ತಿದ್ದರೆ ರೈತರು ಅಸಹಾಯಕರಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬನ್ನೇರುಘಟ್ಟ, ಮುತ್ತತ್ತಿ, ಸಾವನದುರ್ಗ, ಹಂದಿಗೊಂದಿ, ತೆಂಗಿನಕಲ್ಲು ಅರಣ್ಯ ಪ್ರದೇಶ ಮತ್ತು ಕಾವೇರಿ ವನ್ಯಧಾಮ ಇರುವುದರಿಂದ ಇಲ್ಲಿಂದ ನೇರವಾಗಿ ವನ್ಯಪ್ರಾಣಿ ರೈತರ ಜಮೀನಿಗೆ ಬರುತ್ತಿವೆ. ಚಿರತೆ, ಕರಡಿಗಳ ಭಯವೂ ಇಲ್ಲಿನ ರೈತರನ್ನು ಕಾಡುತ್ತಿವೆ. ಒಬ್ಬೊಬ್ಬರೇ ಜಮೀನಿನಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಇನ್ನು ಸಾಕು ಪ್ರಾಣಿಗಳಾದ ಹಸು, ನಾಯಿ, ಮೇಕೆಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಅವುಗಳನ್ನು ಕಾಪಾಡಿಕೊಳ್ಳುವುದೂ ಕಷ್ಟವಾಗುತ್ತಿದೆ.[ಸವದತ್ತಿಯಲ್ಲಿ ಕುಖ್ಯಾತ ಆನೆ ದಂತ ಚೋರರ ಬಂಧನ]

ಈ ನಡುವೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಚನ್ನಪಟ್ಟಣ ತಾಲೂಕಿನ ಹಲವೆಡೆ ದಾಂಧಲೆ ನಡೆಸುತ್ತಿವೆ. ಇವು ಮುತ್ತತ್ತಿ ಅರಣ್ಯದಿಂದ ಬಂದಿವೆ ಎಂದು ಹೇಳಲಾಗುತ್ತಿವೆ. ಮೊದಲಿಗೆ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಈ ಆನೆಗಳು ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡಿ ತೆಂಗು, ಮಾವಿನಮರ, ಸೀಮೆಹುಲ್ಲು, ಜೋಳದ ಬೆಳೆಗಳನ್ನು ನಾಶಪಡಿಸುತ್ತಿವೆ. ಜತೆಗೆ ಕೊಳವೆ ಬಾವಿಗಳ ಪಂಪ್ ಸೆಟ್‍ಗಳ ಪರಿಕರಗಳನ್ನು ಮುರಿದು ಜಖಂಗೊಳಿಸುತ್ತಿವೆ. ಇದರಿಂದ ಭಯಭೀತರಾಗಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಪ್ರಾಣಿಗಳನ್ನು ಕಾಡಿಗೆ ಅಟ್ಟಿ ನಮ್ಮನ್ನು ಕಾಪಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ತುಂಬೇನಹಳ್ಳಿ ಗ್ರಾಮದ ಸಮೀಪದ ಸೀಗೆಹುದಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಕಾಡಿಗೆ ಅಟ್ಟಿದ್ದರು. ಆದರೆ ನಾಡಿನಲ್ಲಿ ಸಿಗುವ ಮೇವಿನ ರುಚಿ ಕಂಡಿರುವ ಕಾಡಾನೆಗಳು ಮತ್ತೆ ನಾಡಿನತ್ತ ಮರಳಿವೆ. ರೈತರ ಕೃಷಿಭೂಮಿಯನ್ನೇ ಹುಡುಕುತ್ತಾ ಸಾಗುವ ಇವು ಎಲ್ಲಿ ಬಾಳೆ, ತೆಂಗು, ಅಡಿಕೆ ತೋಟಗಳು ಕಾಣುತ್ತೋ ಅಲ್ಲಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ.

ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಅವು ಮರಳಿ ನಾಡಿನತ್ತ ಬಾರದಂತೆ ಕ್ರಮಕೈಗೊಳ್ಳಬೇಕಿದೆ. ಒಂದು ವೇಳೆ ಕಾಡು ಪ್ರಾಣಿಗಳ ಉಪಟಳ ಮುಂದುವರೆದರೆ ರೈತರ ಬದುಕು ಬರಡಾಗುವುದರಲ್ಲಿ ಸಂಶಯವಿಲ್ಲ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications