Raitha Shakti Scheme : ರೈತರಿಗೆ ಡೀಸೆಲ್ ಸಬ್ಸಿಡಿ ನೀಡುವ 'ರೈತ ಶಕ್ತಿ ಯೋಜನೆ' ಸೆಪ್ಟಂಬರ್‌ನಲ್ಲಿ ಜಾರಿ
ಬೆಂಗಳೂರು, ಆಗಸ್ಟ್ 26: ''ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದೆ. ಕೃಷಿಕರ ಮೇಲಿನ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದಂತೆ 'ರೈತ ಶಕ್ತಿ ಯೋಜನೆ'ಗೆ ಸೆಪ್ಟಂಬರ್‌ನಲ್ಲಿ ಚಾಲನೆ ನೀಡಲಾಗುವುದು'' ಎಂದು ಕೃಷಿ ಬಿ.ಸಿ.ಪಾಟೀಲ್ ತಿಳಿಸಿದರು.
ಈ ಸಂಬಂಧ ಶುಕ್ರವಾರ ಪ್ರಕಟಣೆ ಹೊರಡಿಸಿರುವ ಸಚಿವರು, ರೈತರಿಗೆ ಕೃಷಿ ಯಾಂತ್ರೀಕರಣವು ಡೀಸೆಲ್ ಇಂಧನದ ಮೇಲೆ ಬಹುತೇಕ ಅವಲಂಬಿತವಾಗಿದೆ. ಹೀಗಾಗಿ ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ 2022-23ನೇ ಸಾಲಿನಲ್ಲಿ ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ ಸೆಪ್ಟೆಂಬರ್‌ನಲ್ಲಿ 'ರೈತ ಶಕ್ತಿ ಯೋಜನೆಗೆ' ಚಾಲನೆ ದೊರೆಯಲಿದೆ ಎಂದು ಅವರು ಹೇಳಿದರು.
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಕೃಷಿ ವಲಯದಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ "ರೈತ ಶಕ್ತಿ ಯೋಜನೆ" ಜಾರಿಯಾಗಲಿದೆ. ಇದರಿಂದ ರೈತರ ಆದಾಯವು ದ್ವಿಗುಣವಾಗಲಿದ್ದು, ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.

ರೈತ ಶಕ್ತಿ ಯೋಜನೆಯಡಿ ಡೀಸೆಲ್ ಸಬ್ಸಿಡಿ
ಪ್ರತಿ ಎಕರೆಗೆ 250ರೂ. ಗಳಂತೆ ಗರಿಷ್ಠ ಐದು ಎಕರೆಗೆ ಡಿಬಿಟಿ ಮೂಲಕ ಡೀಸೆಲ್‌ಗೆ ಸಹಾಯಧನವನ್ನು ನೀಡಲು 'ರೈತ ಶಕ್ತಿ' ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ವತಿಯಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ರೈತರಿಗೆ 'ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ' (ಎಫ್‌ಆರ್‌ಯುಐಟಿಎಸ್) ಪೋರ್ಟಲ್ ಮೂಲಕ ನೋಂದಣಿ, ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.

ರೈತರ ಖಾತೆಗೆ 'ಡಿಬಿಟಿ' ಯಡಿ ಹಣ ಜಮೆ
ಅದೇ ರೀತಿ 'ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ' ಪೋರ್ಟಲ್‌ನಲ್ಲಿ ನೋಂದಣಿಗೊಂಡ ರಾಜ್ಯದ ಎಲ್ಲಾ ರೈತರಿಗೆ ರೈತ ಶಕ್ತಿ ಯೋಜನೆಯನ್ನು, ಸಹ ಕಿಸಾನ್ ತಂತ್ರಾಂಶ ಬಳಸಿಕೊಂಡು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕವೇ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಎಫ್‌ಆರ್‌ಯುಐಟಿಎಸ್ ಪೋರ್ಟಲ್‌ನಲ್ಲಿ ನೋಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ನಗದು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಪ್ರತ್ಯೇಕ ಅರ್ಜಿ ಸಲ್ಲಿಕೆ ಬೇಡ
ಪ್ರಸ್ತುತ ಈ ಯೋಜನೆಯು ಅರ್ಹತೆ ಆಧಾರಿತ ಯೋಜನೆ ಆಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ 'ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ' ಪೋರ್ಟಲ್‌ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುತ್ತದೆ. ಈ ಪೋರ್ಟಲ್‌ನಲ್ಲಿ ನಮೂದಿಸಲಾದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಗರಿಷ್ಠ 5ಎಕರೆಗೆ 1,250ರೂ.ಡೀಸೆಲ್ ಸಬ್ಸಿಡಿ
'ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ' ತಂತ್ರಾಂಶದಲ್ಲಿ ನೋಂದಾಯಿತ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಆಯಾ ರೈತರಿಗೆ, ಪ್ರತಿ ಎಕರೆಗೆ 250ರೂ.ಗಳಂತೆ ಗರಿಷ್ಠ ಐದು ಎಕರೆಗೆ 1,250 ರೂ.ಡೀಸೆಲ್ ಸಹಾಯಧನ ಸಹಾಯಧನವನ್ನು ಸರ್ಕಾರ ಒದಗಿಸಲಾಗುವುದು. ಅರ್ಹ ರೈತರಿಗೆ ಡೀಸೆಲ್ ಸಹಾಯಧನದ ಮೊತ್ತವನ್ನು ಸರ್ಕಾರದ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಆಧಾರದ ಸೀಡೆಡ್ ಬ್ಯಾಂಕ್ ಅಥವಾ ರೈತರ ಅಂಚೆ ಕಚೇರಿಯ ಖಾತೆಗೆ ವರ್ಷಕ್ಕೊಮ್ಮೆ ಜಮೆ ಮಾಡಲಾಗುವುದು ಎಂದು ವಿವರಿಸಿದರು.
ರೈತರು ನಿಯಮಾನುಸಾರವಾಗಿ ಸರ್ಕಾರ ಸೂಚಿಸಿದ ಮಾರ್ಗಸೂಚಿಯನ್ವಯ ಡೀಸೆಲ್ ಸಹಾಯಧಣ ಯೋಜನೆಯ ಫಲಾನುಭವಿ ಆಗಬೇಕು ಎಂದು ರಾಜ್ಯದ ರೈತರಲ್ಲಿ ಬಿ.ಸಿ.ಪಾಟೀಲ್ ಮನವಿ ಮಾಡಿದರು.











Click it and Unblock the Notifications