ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗ; ಹತೋಟಿಗೆ ರೈತರಿಗೆ ಸಲಹೆಗಳು
ಉಡುಪಿ, ಜುಲೈ 10; ಜೂನ್‌ನಲ್ಲಿ ಆರಂಭವಾಗಬೇಕಿದ್ದ ಪ್ರಸಕ್ತ ಸಾಲಿನ ಮುಂಗಾರು ಮಳೆಯು ಜುಲೈನಲ್ಲಿ ಚುರುಕಾಗಿದೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಬಾಧಿಸುವ ಸಾಧ್ಯತೆ ಇದೆ.
ರೈತರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಕೆಳಕಂಡ ರೋಗಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಇಲಾಖೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳು
* ಕೆಳಗೆ ಬಿದ್ದಿರುವ ರೋಗ ಪೀಡಿತ ಅಡಿಕೆ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.
* ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು.
* ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
* ತೋಟದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ, ಬತ್ತದ ಹೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕಬೇಕು (ಎಕರೆಗೆ 3-4 ಕಡೆ ಈ ರೀತಿ ಮಾಡುವುದು).
* ರೋಗ ಪೀಡಿತ ಮರಗಳಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಅವಧಿಯಲ್ಲಿ ಶೇ. 1ರ ಬೋರ್ಡೋ ದ್ರಾವಣ ಅಥವಾ ಶೇ. 0.2 ರ ಮೆಟಕಾಕ್ಸಿಲ್ ಎಂ.ಝಡ್ (02 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ನಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು.
* ಶಿರಿಕೊಳೆ ರೋಗ ಕಂಡುಬಂದಲ್ಲಿ ಮುಂಜಾಗೃತ ಕ್ರಮವಾಗಿ ಶೇ. 0.2 ರ ತಾಮ್ರದ ಆಕ್ಸಿಕ್ಲೋರೈಡ್ ಮತ್ತು ಶೇ. 0.05 ರ ಸ್ಟೆಪ್ಟೊಸೈಕ್ಲಿನ್ ದ್ರಾವಣದಿಂದ ಶಿರ ಭಾಗಗಳನ್ನು (ತೊಂಡೆ ಭಾಗ) ನೆನೆಸಬೇಕು.
* ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ 140:40:140 ಗ್ರಾಂ ಸಾ.ರಂ.ಪೊ) ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸು ಮಾಡಿದ ಶೇ.50 ರಷ್ಟು ರಸಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ.
* ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ. 10 ರ ಬೋರ್ಡೋ ದ್ರಾವಣ ಅಥವಾ ಶೇ. 0.3 ರ ಅಕೋಮಿನ್/ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. (ಪ್ರತಿ ಮರಕ್ಕೆ ಸುಮಾರು 5 ಲೀ ದ್ರಾವಣ ಅವಶ್ಯಕವಿರುತ್ತದೆ).
* ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲಿಂದ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ ಎಂ.ಜಡ್ ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದು.
ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಾಗ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.












Click it and Unblock the Notifications