ಕೈ ಕೊಟ್ಟ ಮುಂಗಾರು: ಮೈಸೂರು ಜಿಲ್ಲೆಯಲ್ಲಿ ನೆಲಕಚ್ಚಿದ ಹತ್ತಿ, ಮುಸುಕಿನ ಜೋಳದ ಬೆಳೆ, ಆತಂಕದಲ್ಲಿ ಅನಾದಾತ
ಮೈಸೂರು, ಆಗಸ್ಟ್, 31: ಪ್ರತಿವರ್ಷವೂ ಒಂದಲ್ಲ ಒಂದು ಕಾರಣಕ್ಕೆ ರೈತರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅಕಾಲಿಕ ಮಳೆ ಮತ್ತು ಅತಿವೃಷ್ಠಿ ರೈತರನ್ನು ಕಾಡಿತ್ತು. ಈ ಬಾರಿ ಮುಂಗಾರು ಮಳೆ ಕೈಕೊಟ್ಟು, ಜುಲೈ ತಿಂಗಳ ಮಧ್ಯದಲ್ಲಿ ಹದವಾಗಿ ಮಳೆ ಸುರಿದ ಕಾರಣದಿಂದ ಎಚ್.ಡಿ.ಕೋಟೆ ಮತ್ತು ಸರಗೂರು ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಹುಲುಸಾಗಿ ಬೆಳೆದಿತ್ತು. ಆದರೀಗ ಮಳೆ ಬಾರದೆ ಇರುವುದು ರೈತರು ಕಂಗಾಲಾಗಿದ್ದಾರೆ.
ಇಷ್ಟರಲ್ಲೇ ಆಗೊಮ್ಮೆ ಈಗೊಮ್ಮೆ ಮಳೆ ಸುರಿದಿದ್ದರೆ ಜೋಳ, ಹತ್ತಿ ಬೆಳೆಗೆ ಅನುಕೂಲವಾಗುತ್ತಿತ್ತು. ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯುತ್ತಿತ್ತಾದರೂ ಈ ಬಾರಿ ಮಳೆ ಸುರಿಯಲೇ ಇಲ್ಲ. ಇದು ರೈತರು ಆತಂಕ ಪಡುವಂತೆ ಮಾಡಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುಸುಕಿನ ಜೋಳ, ಹತ್ತಿಯ ಬೆಳೆಯಿಂದ ಒಂದಷ್ಟು ಆದಾಯವನ್ನು ರೈತರು ಪಡೆಯಲು ಸಾಧ್ಯವಾಗುತ್ತಿತ್ತು. ಆದರೀಗ ಭಯದ ವಾತಾವರಣ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಎಚ್.ಡಿ.ಕೋಟೆ ಮತ್ತು ಸರಗೂರು ವ್ಯಾಪ್ತಿಯಲ್ಲಿ 27,945 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 7,700 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗಿದೆ. ಜುಲೈ ತಿಂಗಳಲ್ಲಿ ಸಾಧಾರಣ ಮಳೆ ಕಾರಣದಿಂದ ಮುಸುಕಿನ ಜೋಳ ಉತ್ತಮವಾಗಿ ಬೆಳೆದು ನಳನಳಿಸುತ್ತಿತ್ತು. ಇದರಿಂದ ಬಂಪರ್ ಬೆಳೆಯ ನಿರೀಕ್ಷೆಯನ್ನು ರೈತರು ಮಾಡಿದ್ದರು.
ಜಲಾಶಯಗಳಿದ್ದರೂ ನೀರಿಗೆ ಬರ
ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲೂಕು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತಿನ ಜೊತೆಗೆ ರಾಜ್ಯದ ಜೀವನಾಡಿ ಕಬಿನಿ ಜಲಾಶಯ ಸೇರಿ ನಾಲ್ಕು ಜಲಾಶಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ರಾಜ್ಯದ ಏಕೈಕ ತಾಲೂಕು ಎನ್ನುವ ಹಿರಿಮೆ ಹೊಂದಿದೆ. ಆದರೂ ನೀರಾವರಿ ಪ್ರದೇಶ ತೀರಾ ಕಡಿಮೆ. ಹೀಗಾಗಿ ಇಲ್ಲಿನ ರೈತರು ಮಳೆಯನ್ನು ಆಶ‍್ರಯಿಸಿ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಪ್ರಸಕ್ತ ವರ್ಷ ಈ ವ್ಯಾಪ್ತಿಯ ರೈತರು ಹತ್ತಿ, ಜೋಳದ ಬೆಳೆಗಳನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಬೆಳೆ ಬೆಳೆಯುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ. ಕೂಲಿಯಾಳುಗಳ ಸಮಸ್ಯೆ ಮತ್ತು ಮುಂಗಾರು ಮಳೆಯ ಕಣ್ಣಾಮುಚ್ಚಲೆ ನಡುವೆ ಕೃಷಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳೆ ಬೆಳೆದ ಪ್ರಮಾಣ ಕಡಿಮೆಯಿದೆ.
ಮಳೆಯಿಲ್ಲದೆ ರೈತರಲ್ಲಿ ಆತಂಕ
ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಜುಲೈ ತಿಂಗಳ ಮಧ್ಯದಲ್ಲಿ ಕಾಣಿಸಿಕೊಂಡು ಹದಿನೈದು ದಿನಗಳ ಕಾಲ ಹದವಾಗಿ ಸುರಿದಿತ್ತು. ಇದರಿಮದ ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಗಳಿಗೆ ಜೀವ ಬಂದಂತಾಗಿತ್ತು. ಈ ಬಾರಿ ಭರಣಿ ಮಳೆ ಕೈಕೊಟ್ಟು, ನಂತರದ ಮಳೆಗಳು ಕ್ಷೀಣಿಸಿದ ಪರಿಣಾಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಗಳು ಮೇಲೆಳಲಾರದ ದುಸ್ಥಿತಿ ಕಂಡಿವೆ. ಇದನ್ನು ಕಂಡ ರೈತ ಬಿತ್ತನೆಗೆ ಹಾಕಿದ ಮೂಲ ಬಂಡವಾಳವೂ ಮಣ್ಣು ಪಾಲಾಯಿತೆಂದು ತಲೆಮೆಲೆ ಕೈಇಟ್ಟು ಕೂರುವಂತಾಗಿದೆ.
ಹತ್ತಿ ಬೆಳೆಯುವ ಪ್ರಮಾಣ ಇಳಿಕೆ
ಜುಲೈ ತಿಂಗಳ ಮಧ್ಯದಲ್ಲಿ ಚುರುಕಾದ ಮಂಗಾರು ಪುಷ್ಯ ಮಳೆ ಹದಿನೈದು ದಿನಗಳ ಕಾಲ ನಿರಂತರವಾಗಿ ಸುರಿದು ನೆಲಕಚ್ಚಿದ್ದ ಹತ್ತಿ, ಜೋಳದ ಬೆಳೆಗಳಿಗೆ ಜೀವ ನೀಡಿತ್ತು. ಇದರಿಂದ ಕ್ಷೀಣಿಸಿದ ಬೆಳೆ ಚೇತರಿಕೆ ಕಂಡು ರೈತರು ಖುಷಿಗೊಂಡಿದ್ದರು. ಹತ್ತಿ ಬೆಳೆಯನ್ನು ಮೊದಲೆಲ್ಲ ದೊಡ್ಡ ಪ್ರಮಾಣದಲ್ಲಿ ಅಂದರೆ ಶೇಕಡಾ 60ರಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ತದ ನಂತರ ವಾತಾವರಣದ ಏರುಪೇರು, ಕೂಲಿ ಆಳುಗಳ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಅದರತ್ತ ರೈತರ ಆಸಕ್ತಿ ಕಡಿಮೆಯಾಗಿ ಸದ್ಯ ಶೇಕಡಾ 25ಕ್ಕೆ ಬಂದು ನಿಂತಿದೆ.
ಇನ್ನು ಹತ್ತಿ ಬೀಜ ಬಿತ್ತನೆ ಮಾಡುವಾಗ, ಮೊಳಕೆ ಮೂಡುವಾಗ, ಹೂ ಬಿಡುವಾಗ, ಕಾಯಿ ಕಟ್ಟುವಾಗ, ಹಾಲು ಕಟ್ಟುವಾಗ ಹೀಗೆ 5 ಹಂತದಲ್ಲಿ ಹದವಾದ ಮಳೆ ಬೇಕಾಗುತ್ತದೆ. ಈ ಬಾರಿ ಮುಂಗಾರು ಮಳೆ ತಡವಾದ ಕಾರಣ 4 ಸಾವಿರ ಹೆಕ್ಟೇರ್‌ನಷ್ಟು ಹತ್ತಿ ಬೆಳೆ ಕಡಿಮೆಯಾಗಿದೆ. ಕಳೆದ ಜುಲೈ ತಿಂಗಳು ಮುಂಗಾರು ಚುರುಕಾಗಿ ಹದವಾಗಿ ಬಿದ್ದ ಮಳೆಗೆ ಹತ್ತಿ ಮತ್ತು ಜೋಳದ ಬೆಳೆಗೆ ವರದಾನವಾಗಿ ಸಮೃದ್ಧವಾಗಿ ಬೆಳೆ ಬಂದಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಮಳೆಯೇ ಇಲ್ಲದಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ಏನು ಮಾಡುವುದು ಎಂಬ ಚಿಂತೆಯೂ ಕಾಡಲಾರಂಭಿಸಿದೆ. ಒಂದು ವೇಳೆ ಸಕಾಲಕ್ಕೆ ಮಳೆ ಸುರಿಯದೆ ಹೋದರೆ ರೈತರು ಬೆಳೆ ಬೆಳೆದರೂ ಅದರಿಂದ ಯಾವುದೇ ಪ್ರಯೋಜನ ಇಲ್ಲದಂತಾಗುವ ಸಾಧ್ಯತೆಯಿದೆ. ಹೀಗಾಗಿ ಎಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 5 ವರ್ಷಗಳಿಂದ ಮಳೆಯ ಸಮಸ್ಯೆ ಎದುರಾಗಿರಲಿಲ್ಲ. ಬದಲಿಗೆ ಅತಿಯಾದ ಮಳೆಯಿಂದ ರೈತರು ತೊಂದರೆ ಅನುಭವಿಸುವಂತಾಗಿತ್ತು. ಈ ಬಾರಿ ಬರದ ಪರಿಸ್ಥಿತಿ ನಿರ್ಮಾಣವಾಗಿರುವುದು ರೈತರನ್ನು ಕಂಗೆಡಿಸಿದೆ.












Click it and Unblock the Notifications