ರೈತರೇ ಗಮನಿಸಿ; ತೊಗರಿ ಖರೀದಿಗೆ ನೋಂದಣಿ ಆರಂಭ
ಕಲಬುರಗಿ, ಜನವರಿ 18: ರೈತರೇ ಗಮನಿಸಿ, 2023-24ನೇ ಸಾಲಿನ ಬೆಲೆ ಸ್ಥಿರೀಕರಣ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ರೈತರಿಂದ ತೊಗರಿ ಖರೀದಿಗೆ ಜನವರಿ 18 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರು ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಬಳಿಕ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾಹಿತಿ ನೀಡಿದ್ದಾರೆ. ರಾಜ್ಯ ಸಹಕಾರ ಮಾರಾಟ ಮಂಡಳ ನಿಯಮಿತ ಕಲಬುರಗಿ ಮತ್ತು ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ತೊಗರಿ ಖರೀದಿಗೆ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.

ಜಿಲ್ಲೆಯ 185 ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳಲ್ಲಿ ಜನವರಿ 18 ರಿಂದ 27ರ ವರೆಗೆ ರೈತರು ತೊಗರಿ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಳ್ಳಬೇಕು. ಜನವರಿ 20ರಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ.
ಬೆಲೆ ಸ್ಥಿರೀಕರಣ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ದದ ತೊಗರಿಯನ್ನು ಮಾರುಕಟ್ಟೆಯ ದರಕ್ಕೆ ಅಂದರೆ ಕೇಂದ್ರ ಸರ್ಕಾರದ AG.Mark Portal ನಿಂದ Minimum Assured Procurement Price (MAPP) ಅಥವಾ Dynamic Buffer Procurement Price (DBPP) ಈ ಎರಡು ದರಗಳನ್ನು ಪಡೆದುಕೊಂಡು ಇವುಗಳಲ್ಲಿ ಯಾವ ಬೆಲೆ ಹೆಚ್ಚು ಇದೆಯೋ ಅದನ್ನು ರೈತರಿಗೆ ಪಾವತಿಸಿ ತೊಗರಿ ಖರೀದಿಸಲಾಗುತ್ತದೆ.
ಕಲಬುರಗಿ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು. ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಭತ್ತ ನೋಂದಣಿ ಅವಧಿ ವಿಸ್ತರಣೆ; ಬಳ್ಳಾರಿ ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಗೆ 2023ರ ಡಿಸೆಂಬರ್ 31ರ ವರೆಗೆ ಕಾಲವಕಾಶ ನಿಗದಿ ಮಾಡಲಾಗಿತ್ತು.
ರಾಜ್ಯದಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಬೇಕಾಗಿರುವುದರಿಂದ ಪ್ರಸ್ತುತ ಸರ್ಕಾರವು ಭತ್ತ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿ ಆದೇಶಿಸಿದೆ.
ಸರ್ಕಾರವು ರಾಜ್ಯದಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಗುರಿ ತಲುಪುವವರೆಗೆ ನೋಂದಣಿ ಕೈಗೊಳ್ಳಲು ಸೂಚಿಸಿದ್ದರಿಂದ, ರೈತರು ತಕ್ಷಣವೇ ನೋಂದಣಿ ಮತ್ತು ಖರೀದಿಯ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ನೋಂದಣಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಖರೀದಿ ಏಜೆನ್ಸಿಯಾದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು ಅಥವ 9686935278 ಸಂಖ್ಯೆಗೆ ಕರೆ ಮಾಡಬಹುದು.
ಆಯಾ ತಾಲ್ಲೂಕಿನ ಖರೀದಿ ಕೇಂದ್ರಗಳ ಖರೀದಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಕೀನಾ ತಿಳಿಸಿದ್ದಾರೆ.












Click it and Unblock the Notifications