ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸ್ಥಳದ ಶೌಚಾಲಯದಲ್ಲೇ ರೈತ ಆತ್ಮಹತ್ಯೆ
ನವದೆಹಲಿ, ಜನವರಿ 02: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ರೈತರೊಬ್ಬರು ಪ್ರತಿಭಟನಾ ಸ್ಥಳದಲ್ಲಿನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ದೆಹಲಿ-ಘಾಜಿಪುರ ಗಡಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸರ್ದಾರ್ ಕಾಶ್ಮೀರ್ ಸಿಂಗ್ (75) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ರೈತ ಸಂಘಟನೆಯಲ್ಲಿ "ಬಾಪು" ಎಂದೇ ಪರಿಚಿತರಾಗಿದ್ದರು.
ದುಬಾರಿ ವಿದ್ಯುತ್ ಬಿಲ್: ಪ್ರಧಾನಿ ಮೋದಿಗೆ ಪತ್ರ ಬರೆದು ರೈತ ಆತ್ಮಹತ್ಯೆ
ಶನಿವಾರ ಪ್ರತಿಭಟನಾ ಸ್ಥಳದ ಶೌಚಾಲಯದ ಒಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ, ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳ ಮೂಲಕ ಇಟ್ಟಿರುವ ಹೆಜ್ಜೆಯನ್ನು ದೂರಿದ್ದಾರೆ. ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಡೆತ್ ನೋಟ್ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಪ್ರತಿಭಟನಾ ಸ್ಥಳದಲ್ಲಿಯೇ ತನ್ನ ಅಂತ್ಯಸಂಸ್ಕಾರ ಮಾಡಬೇಕೆಂದು ಕಾಶ್ಮೀರ್ ಸಿಂಗ್ ಡೆತ್ ನೋಟ್ ಮೂಲಕ ಮನವಿ ಮಾಡಿರುವುದಾಗಿ ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ರಾಕೇಶ್ ತಿಕೈಟ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಸುಮಾರು 40 ರೈತ ಸಂಘಟನೆಗಳು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಶನಿವಾರಕ್ಕೆ ಈ ಪ್ರತಿಭಟನೆ 38ನೇ ದಿನಕ್ಕೆ ಕಾಲಿಡುತ್ತಿದೆ. ಈ ಕುರಿತು ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಎರಡು ಪ್ರಮುಖ ಬೇಡಿಕೆಗಳ ಕುರಿತು ಚರ್ಚೆಗೆ ಜ.4ಕ್ಕೆ ಏಳನೇ ಸುತ್ತಿನ ಮಾತುಕತೆ ನಡೆಸಲಾಗುತ್ತಿದೆ.