ಕೃಷಿ ಕಾಯ್ದೆಗಳ ಅಮಾನತು: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಾರ
ನವದೆಹಲಿ, ಜನವರಿ 30: ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು 18 ತಿಂಗಳ ಕಾಲ ಅಮಾನತುಗೊಳಿಸುವ ಸರ್ಕಾರದ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುನರುಚ್ಚರಿಸಿದ್ದಾರೆ. ರೈತರ ಪ್ರತಿಭಟನೆ ನಡುವೆ ಸಂಧಾನ ಪ್ರಕ್ರಿಯೆ ಮತ್ತು ಮಾತುಕತೆಗಳು ನನೆಗುದಿಗೆ ಬಿದ್ದಿವೆ.
ರೈತರು ಮತ್ತು ಸರ್ಕಾರದ ನಡುವಿನ ಒಂಬತ್ತನೇ ಸುತ್ತಿನ ಮಾತುಕತೆ ಮುರಿದುಬಿದ್ದ ಬಳಿಕ ಈ ಹೊಸ ಪ್ರಸ್ತಾಪವನ್ನು ಮುಂದಿರಿಸಲಾಗಿತ್ತು. ಒಂದೂವರೆ ವರ್ಷದವರೆಗೆ ಕೃಷಿ ಕಾಯ್ದೆಗಳನ್ನು ಅಮಾನತಿನಲ್ಲಿರಿಸುವುದು ಮತ್ತು ಈ ಅವಧಿಯಲ್ಲಿ ಅದರ ಸಾಧಕ-ಬಾದಕಗಳ ಬಗ್ಗೆ ಚರ್ಚೆ ನಡೆಸುವುದು ಎಂದು ಸರ್ಕಾರ ಹೇಳಿತ್ತು. ಆದರೆ ಈ ಪ್ರಸ್ತಾಪವನ್ನು ಕೂಡ ರೈತ ಸಂಘಟನೆಗಳು ತಿರಸ್ಕರಿಸಿದ್ದವು.
ಕಳೆದ ವಾರ ನಡೆದ ಹನ್ನೊಂದನೇ ಸುತ್ತಿನ ಮಾತುಕತೆಯ ನಂತರ ಕೂಡ ರೈತ ನಾಯಕರು ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ. ಎಲ್ಲ ಕಾಯ್ದೆಗಳನ್ನು ರದ್ದುಗೊಳಿಸದ ವಿನಾ ಬೇರೆ ಯಾವ ಪ್ರಸ್ತಾಪವನ್ನೂ ಒಪ್ಪುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. 'ಚೆಂಡು ಈಗ ನಿಮ್ಮ ಅಂಗಳದಲ್ಲಿದೆ' ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಭೆ ಬಳಿಕ ರೈತರಿಗೆ ಹೇಳಿದ್ದರು. ಮುಂದೆ ಓದಿ.

ಮತ್ತೆ ಪ್ರಸ್ತಾಪ
ಸೋಮವಾರ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಅದಕ್ಕೂ ಮುನ್ನ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆ ಜಾರಿಯನ್ನು ಹದಿನೆಂಟು ತಿಂಗಳ ಕಾಲ ತಡೆಹಿಡಿಯುವ ಪ್ರಸ್ತಾಪವನ್ನು ಪುನಃ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಒಂದು ಫೋನ್ ಕರೆಗೂ ಸಿಗುತ್ತಾರೆ
ಪ್ರತಿಭಟನಾನಿರತ ರೈತರು ಒಂದು ಫೋನ್ ಕರೆ ಮಾಡಿದರೂ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲಭ್ಯವಿರುತ್ತಾರೆ. ಅದನ್ನು ರೈತ ಮುಖಂಡರಿಗೆ ಕೃಷಿ ಸಚಿವರು ಮನವರಿಕೆ ಮಾಡಿದ್ದಾರೆ. ಸಮಸ್ಯೆಗಳಿಗೆ ಮಾತುಕತೆಗಳ ಮೂಲಕ ಒಂದು ನಿರ್ಣಯ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ದೇಶದ ಬಗ್ಗೆ ಆಲೋಚಿಸಬೇಕಿದೆ ಎಂದು ಸಭೆಯಲ್ಲಿ ಮೋದಿ ತಿಳಿಸಿದ್ದಾರೆ.

ರೈತರಿಗೆ ಆಫರ್ ನೀಡುತ್ತಿದ್ದೇವೆ
'ಸರ್ಕಾರ ಮುಂದಿಟ್ಟಿರುವ ಪ್ರಸ್ತಾಪ ಈಗಲೂ ಇದೆ. ಇದನ್ನು ನಿಮ್ಮ ಬೆಂಬಲಿಗರಿಗೆ ದಯವಿಟ್ಟು ಮನವರಿಕೆ ಮಾಡಿಕೊಡಿ. ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಹೇಳಿದ್ದನ್ನು ನಾನು ಪುನರಾವರ್ತಿಸಲು ಬಯಸುತ್ತೇನೆ. ನಾವು ಒಮ್ಮತಕ್ಕೆ ಬಂದಿಲ್ಲ. ಆದರೆ ನಾವು ನಿಮಗೆ (ರೈತರಿಗೆ) ಆಫರ್ ನೀಡುತ್ತಿದ್ದೇವೆ. ನೀವು ಮುಂದುವರಿಯಬಹುದು' ಎಂದು ಮೋದಿ ಹೇಳಿದ್ದಾರೆ.
ಪ್ರತಿಭಟನಾನಿರತ ರೈತರು ಪ್ರಸ್ತಾಪಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಯ ಮೂಲಕ ನಿರಂತರವಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕ ಭಾಷಣ
ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಶಿವಸೇನಾ ಸಂಸದ ವಿನಾಯಕ್ ರಾವತ್ ಮತ್ತು ಎಸ್‌ಎಡಿಯ ಬಲ್ವಿಂದರ್ ಸಿಂಗ್ ಭುಂದರ್ ಅವರು ರೈತರ ಪ್ರತಿಭಟನೆ ಬಗ್ಗೆ ಸುದೀರ್ಘ ಮಾತುಗಳನ್ನಾಡಿದರು.












Click it and Unblock the Notifications