ಚಾಮರಾಜನಗರ: ಸೀಡ್ಸ್ ಕಂಪನಿ ಯಡವಟ್ಟಿನಿಂದ ಅನ್ನದಾತನಿಗೆ ಲಕ್ಷ..ಲಕ್ಷ ನಷ್ಟ
ಚಾಮರಾಜನಗರ, ಜನವರಿ, 10: ಮಾರುಕಟ್ಟೆಯಲ್ಲಿ ಬದನೆಕಾಯಿ ಕೆ.ಜಿ. 30 ರೂಪಾಯಿ ತನಕ ಮಾರಾಟವಾಗುತ್ತಿದೆ. ಆದರೆ ಈ ವೇಳೆಯೇ ಸೀಡ್ಸ್ ಕಂಪನಿಯೊಂದರ ಯಡವಟ್ಟಿನಿಂದ ಕಳಪೆ ಬೀಜ ಬಿತ್ತನೆ ಮಾಡಿದ್ದರಿಂದ ಬೆಳೆ ಬಾರದೇ ರೈತ ಕಂಗಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ.
ಹಸಗೂಲಿ ಗ್ರಾಮದ ರೈತ ಲೋಕೇಶ್ ಎಂಬವವರು ಗೊತ್ತಾಗದೇ ಕಳಪೆ ಬೀಜ ಬಿತ್ತನೆ ಮಾಡಿ ವಂಚನೆಗೊಳಗಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಬೆಳೆ ಇಲ್ಲದೇ ರೈತ ಕಂಗಲಾಗಿದ್ದಾನೆ. ಲಲಿತಾ ಸೀಡ್ಸ್ ಎಂಬ ಕಂಪನಿಯಿಂದ ಗುಂಡುಬದನೆ ಬಿತ್ತನೆ ಬೀಜವನ್ನು ಲೋಕೇಶ್ ಖರೀದಿ ಮಾಡಿದ್ದು, ಒಂದೂವರೆ ಲಕ್ಷ ಖರ್ಚು ಮಾಡಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಗೊಬ್ಬರ, ಬೀಜೋಪಚಾರ ಮಾಡಿದ್ದಾರೆ. ಆದರೂ ಬೆಳೆ ಕೈ ಸೇರುವ ಸಮಯದಲ್ಲಿ ಕೇವಲ ರೈತನಿಗೆ ಒಣ ಹೂವು ಸಿಕ್ಕಿದೆ.

ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಬೇಸಾಯ ಮಾಡಿದ್ದ ರೈತ ಸದ್ಯ ಕಂಗಲಾಗಿದ್ದು, ಈಗಿರುವ ಧಾರಣೆಯಲ್ಲಿ 8-10 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಸ್ಥಳೀಯ ನರ್ಸರಿ ಮಾಲೀಕರ ಬಳಿ ಲಲಿತಾ ಸೀಡ್ಸ್ ಎಂಬ ಕಂಪನಿಯ 4,400 ಗುಂಡು ಬದನೆ ಬಿತ್ತನೆ ಬೀಜವನ್ನು ಖರೀದಿಸಿದ್ದು, ಬಿತ್ತನೆ ಬೀಜವನ್ನು ವಿತರಿಸುವ ವೇಳೆ ಕಂಪನಿಯವರು 2023ರ ಫೆಬ್ರವರಿ 28ರಲ್ಲೇ ಅವಧಿ ಮುಗಿದ ಬಿತ್ತನೆ ಬೀಜವನ್ನು ಸೆಪ್ಟೆಂಬರ್‌ನಲ್ಲಿ ನೀಡಿರುವುದು ಈ ಪ್ರಮಾದಕ್ಕೆ ಕಾರಣವಾಗಿದೆ.
ಒಂದೂವರೆ ಹೆಕ್ಟೇರ್ ಜಮೀನಿನಲ್ಲಿ 4,400 ಬಿತ್ತನೆ ಬೀಜವನ್ನು ಹಾಕಿದ್ದ ರೈತನಿಗೆ 55 ದಿನಗಳ ಬಳಿಕ ಫಸಲು ಕೈ ಸೇರಬೇಕಿತ್ತು. ಆದರೆ 120 ದಿನ ಕಳೆದರೂ ಸಹ ಸೊಂಪಾಗಿ ಬೆಳೆದ ಗಿಡದಲ್ಲಿ ರೈತ ಲೋಕೇಶ್‌ಗೆ ಕಂಡಿದ್ದು, ಕೇವಲ ಬಾಡಿದ ಹೂವು ಮತ್ತು ಮೊಗ್ಗು, ಕೈ ಸೇರಬೇಕಿದ್ದ ಬೆಳೆ ಬಾರದೇ ರೈತ ಕಂಗಾಲಾಗಿದ್ದಾನೆ. ಇನ್ನು ಮಂಗಳವಾರದಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ಕೊಟ್ಟರೇ ಕ್ರಮ ವಹಿಸುವ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications