ವಿಜಯಪುರ : ಕುರಿ ಸಂತೆಯಲ್ಲಿ ಕಂತೆ-ಕಂತೆ ಹಣ ಕಳೆದುಕೊಂಡರು
ವಿಜಯಪುರ, ಜನವರಿ 22 : ಸಂತೆ ಎಂದರೆ ಹಾಗೆ. ಗದ್ದಲ, ಗೌಜು, ಜನವೋ ಜನ. ಒಂದು ಕ್ಷಣ ಮೈ ಮರೆತರ ಸಾಕು ಜೇಬಿಗೆ ಕತ್ತರಿ ಖಂಡಿತ. ವಿಜಯಪುರದಲ್ಲಿಯೂ ಇಂತಹ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಎಪಿಎಂಸಿ ಆವಣದಲ್ಲಿ ಸೋಮವಾರ ಕುರಿ ಸಂತೆ. ಸುತ್ತಮುತ್ತಲ ಊರುಗಳು ಮಾತ್ರವಲ್ಲ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಜನರು ಸಂತೆಗೆ ಆಗಮಿಸಿದ್ದರು.
ಸಂತೆಯಲ್ಲಿ ಇಬ್ಬರು ಜೇಬುಗಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಇಬ್ಬರು ರೈತರ ಒಟ್ಟು 2 ಲಕ್ಷದ 77 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ. ಆದರೆ, ಜನರ ಸಮಯ ಪ್ರಜ್ಞೆಯಿಂದಾಗಿ ಒಬ್ಬ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರಿನ ಕುರಿ ವ್ಯಾಪಾರಿ ಚಂದ್ರಣ್ಣ ಮತ್ತು ಬಾಗಲಕೋಟೆಯ ವ್ಯಾಪಾರಿಯೊಬ್ಬರ ಹಣವನ್ನು ಜೇಬುಗಳ್ಳರು ಎಗರಿಸಿದ್ದಾರೆ. ಸಂತೆಯಲ್ಲಿ ಹಣ ಕಳೆದುಕೊಂಡ ಇಬ್ಬರು ಆತಂಕಗೊಂಡಿದ್ದರು. ವ್ಯಾಪಾರಿಗಳು ಒಬ್ಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಕಳ್ಳನನ್ನು ಹಿಡಿದ ವ್ಯಾಪಾರಿಗಳು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದರು. ಬಸವನಬಾಗೇವಾಡಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ಸೋಮವಾರ ಎಪಿಎಂಸಿ ಆವರಣದಲ್ಲಿ ಕುರಿಸಂತೆ ನಡೆಯುತ್ತದೆ.












Click it and Unblock the Notifications