ವಿಜಯನಗರ; ಜನವರಿ 1 ರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿ
ಹೊಸಪೇಟೆ, ಡಿಸೆಂಬರ್ 15; ವಿಜಯನಗರ ಜಿಲ್ಲೆಯಲ್ಲಿ ಜನವರಿ 1ರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾಡಲಾಗುತ್ತದೆ. ಜಿಲ್ಲೆಯಾದ್ಯಂತ ಒಟ್ಟು 5 ಕೇಂದ್ರ ತೆರೆಯಲಾಗುತ್ತದೆ, ರೈತರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು. ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಡಿಸೆಂಬರ್ 15 ರಿಂದ ನೋಂದಣಿ ಮಾಡಬೇಕು, ಜನವರಿ 1ರಿಂದ ಖರೀದಿ ಆರಂಭವಾಗಲಿದೆ ಎಂದು ಹೇಳಿದರು.
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಖರೀದಿ ಮಾಡಲಾಗುತ್ತದೆ. ಬೆಂಬಲ ಬೆಳೆಗಳನ್ನು ಖರೀದಿಸಲು ರೈತರು ಡಿಸೆಂಬರ್ 15ರಿಂದ ಪೂರಕ ದಾಖಲೆಗಳೊಂದಿಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖರೀದಿ ಕೇಂದ್ರವಿರುವ ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಬೇಕಿದೆ.

ರೈತರಿಂದ ನೇರವಾಗಿ ಖರೀದಿ ಪ್ರಕ್ರಿಯೆಯು 2023ರ ಜನವರಿ 1ರಿಂದ ಆರಂಭವಾಗಿ 2023ರ ಮಾರ್ಚ್ 31ರವೆರೆಗೆ ನಡೆಯಲಿದೆ. ಇದಕ್ಕೆ ಬೇಕಾದ ನೋಂದಣಿ ಮತ್ತು ಖರೀದಿ ಸಿದ್ದತೆ ಮತ್ತು ಸಂಗ್ರಹಕ್ಕೆ ಗೋದಾಮುಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎಲ್ಲೆಲ್ಲಿ ಖರೀದಿ ಕೇಂದ್ರ?; ಹೊಸಪೇಟೆ ಎಪಿಎಂಸಿ ಯಾರ್ಡ್, ಹರಪನಹಳ್ಳಿ ಎಪಿಎಂಸಿ ಯಾರ್ಡ್, ಹಗರಿಬೊಮ್ಮನಹಳ್ಳಿ ಎಪಿಎಂಸಿ ಯಾರ್ಡ್, ಹಡಗಲಿ ಎಪಿಎಂಸಿ ಯಾರ್ಡ್, ಕೂಡ್ಲಿಗಿ ಮತ್ತು ಕೊಟ್ಟೂರು ಎಪಿಎಂಸಿ ಯಾರ್ಡ್ ಸೇರಿದಂತೆ 5 ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ ನೋಂದಣಿಗಾಗಿ ಈ ಕೇಂದ್ರಗಳೊಂದಿಗೆ ಎಲ್ಲಾ ರೈತ ಕೇಂದ್ರಗಳಲ್ಲಿಯೂ ಅವಕಾಶ ನೀಡಲಾಗಿದೆ.
ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ ರೂ. 2040, ಗ್ರೇಡ್ 'ಎ' ಭತ್ತಕ್ಕೆ ರೂ. 2060, ರಾಗಿಗೆ ರೂ. 3578, ಹೈಬ್ರೀಡ್-ಬಿಳಿ ಜೋಳಕ್ಕೆ ರೂ. 2970, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ. 2990 ಬೆಂಬಲ ದರ ನಿಗದಿಪಡಿಸಲಾಗಿದೆ.

ಬೆಂಬಲ ಬೆಲೆ ಕಾರ್ಯಾಚರಣೆ ಬಗ್ಗೆ ಖರೀದಿ ಏಜೆನ್ಸಿಗಳು, ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆಗಳು ಕರಪತ್ರ, ಡಂಗೂರ, ಬ್ಯಾನರ್ ಮೂಲಕ ಪ್ರಚಾರ ನೀಡಬೇಕು. ರೈತರು ಮಾರಾಟ ಮಾಡಲು ಬಯಸುವ ಕೃಷಿ ಉತ್ಪನ್ನಗಳ ಸ್ಯಾಂಪಲ್ ಪರೀಕ್ಷೆಯ ಬಗ್ಗೆ ಪ್ರತಿ ಖರೀದಿ ಕೇಂದ್ರದಲ್ಲಿ ಒಂದು 'ಸ್ಯಾಂಪಲ್ ಪರೀವಿಕ್ಷಣಾ ವಹಿ' ಇಡಬೇಕು ಎಂದು ಸೂಚನೆ ನೀಡಲಾಗಿದೆ.
ಖರೀದಿ ಕೇಂದ್ರದ ಕೊಠಡಿ, ಖರೀದಿ ಪ್ರಾಂಗಣ, ಬೆಳಕು, ಕುಡಿಯುವ ನೀರು, ನೆರಳು, ರೈತ ವಿಶ್ರಾಂತಿ, ತುರ್ತು ಟಾರ್ಪಲಿನ್, ರಕ್ಷಣಾ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊಂದಬೇಕು. ಗಾಳಿ, ಮಳೆ, ಬೆಳಕು ಮುಂತಾದ ಪ್ರಕೃತಿ ಅಥವಾ ಮಾನವ ವಿಕೋಪಗಳಿಂದ ಕೃಷಿ ಉತ್ಪನ್ನ ರಕ್ಷಿಸಲು ಅವಶ್ಯವಿರುವ ಹೊದಿಕೆ, ಹಾಸುಗಳು, ರಕ್ಷಣಾ ಸಾಮಗ್ರಿಗಳನ್ನು ಹಾಗೂ ಖರೀದಿ ಕೇಂದ್ರಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ಎಪಿಎಂಸಿ ಅಧಿಕಾರಿಗಳು ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ತಾಲ್ಲೂಕು ನೋಡಲ್ ಅಧಿಕಾರಿಗಳು; ಹೆಚ್ಚಿನ ಮಾಹಿತಿಗಾಗಿ ರೈತರು ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆಗಳು 8277929660, 9972461112, 8550858916, 6362227568, 9448887557.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಜನವರಿ 1ರಿಂದ ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳ ಖರೀದಿ ನಡೆಯಲಿದೆ. ಇದಕ್ಕೂ ಮೊದಲು ರೈತರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.












Click it and Unblock the Notifications