ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಬೆಂಬಲ ಬೆಲೆಯೂ ಇಲ್ಲ, ಇಳುವರಿಯೂ ಇಲ್ಲ: ಬೇಸತ್ತು ನಗರಗಳತ್ತ ಮುಖಮಾಡಿದ ಕೃಷಿ ಕಾರ್ಮಿಕರು
ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗಿದೆ. ಆದರೆ ಹತ್ತಿ ಬೆಳೆಗೆ ಉತ್ತಮ ಬೆಂಬಲ ಬೆಲೆ ಸಿಗದೆ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.
ರಾಯಚೂರು, ಮಾರ್ಚ್, 22: ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗಿದೆ. ಆದರೆ ಹತ್ತಿ ಬೆಳೆಗೆ ಉತ್ತಮ ಬೆಂಬಲ ಬೆಲೆ ಹಾಗೂ ನಿರೀಕ್ಷಿತ ಇಳುವರಿ ಬಾರದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಸಾಲ ತೀರಿಸಲು ಆಗಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು, ರೈತರು ದೊಡ್ಡ ನಗರಗಳತ್ತ ಮುಖ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಜನರು ದುಡಿಮೆ ಅರಸಿ ನಗರಗಳೆಡೆಗೆ ಗುಳೆ ಹೋಗುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಊರುಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇರುವುದರಿಂದ ಮಕ್ಕಳನ್ನೂ ಜೊತೆಯಲ್ಲೇ ಕರೆದೊಯ್ಯುವ ಅನಿವಾರ್ಯತೆ ಬಂದೊದಗಿದೆ. ಇದರಿಂದ ಮಕ್ಕಳ ಕಲಿಕೆಗೂ ತೊಂದರೆ ಆಗುತ್ತಿದೆ.

ಹತ್ತಿ ಬೆಳೆಯಲ್ಲಿ ಇಳುವರಿ ಕುಂಠಿತ
ಜಿಲ್ಲೆಯಾದ್ಯಂತ ಈ ವರ್ಷ 2,06,299 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಪ್ರಾರಂಭದಲ್ಲಿ ಉತ್ತಮ ಇಳುವರಿ ಬಂದಿತ್ತು. ಆದರೆ ಕೊನೆ ಹಂತದಲ್ಲಿ ಬೂದು ರೋಗದಿಂದ ಇಳುವರಿ ಕುಂಠಿತಗೊಂಡಿತು. ಅಲ್ಲದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ಸಾಲ ತೀರಿಸುವ ದಾರಿ ಕಾಣದೆ ಕಂಗಾಲಾಗಿರುವ ರೈತರು ಗಂಟುಮೂಟೆ ಕಟ್ಟಿ ಮಹಾನಗರಗಳತ್ತ ತೆರಳುತ್ತಿದ್ದಾರೆ.
ನರೇಗಾ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ
2023ರ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ದಿನೇದಿನೇ ಹೆಚ್ಚುತ್ತಿದೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಊರು ತೊರೆಯುತ್ತಿದ್ದಾರೆ. ನರೇಗಾ ಅಡಿ ಕೆಲಸ ನೀಡಿದರೂ ಸಂಬಳ ಮಾತ್ರ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಗುಳೆ ಅನಿವಾರ್ಯ ಎಂದು ಗ್ರಾಮೀಣ ಭಾಗದ ಜನರು ಅಳಲು ತೋಡಿಕೊಂಡಿದ್ದಾರೆ.

ನಗರದೆಡೆಗೆ ಮುಖ ಮಾಡಿದ ಹಳ್ಳಿ ಜನ
ಮತ್ತೊಂದೆಡೆ ಗುಳೆ ಹೋಗುವುದರಿಂದ ಶೇಕಡವಾರು ಮತದಾನ ಪ್ರಮಾಣ ಕಡಿಮೆಯಾದರೆ ಹೇಗೆ ಎಂಬ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. ಪ್ರತಿಯೊಬ್ಬರೂ ಸುಶಿಕ್ಷಿತರಾಬೇಕು ಎನ್ನುವ ದೃಷ್ಟಿಯಿಂದ 14 ವರ್ಷದವರೆಗಿನ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿವೆ. ಆದಾಗ್ಯೂ ಸಾಲದ ಹೊರೆಗೆ ಸಿಲುಕಿರುವ ರೈತರು ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸದೆ ಗುಳೆ ಹೋಗುತ್ತಿದ್ದಾರೆ.
ಕುಟುಂಬ ಸಮೇತ ಗುಳೆ ಹೋಗುತ್ತಿರುವ ಜನ
ಕೂಲಿ ಕೆಲಸಕ್ಕಾಗಿ ಮಂಡ್ಯ, ಮೈಸೂರು, ತಮಿಳುನಾಡು, ಬೆಂಗಳೂರು, ಹೈದರಬಾದ್, ಪುಣೆ, ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ. ಹೀಗಾಗಿ ಗುಳೆ ಹೋದವರು ಹೊಲಗದ್ದೆಗಳಲ್ಲಿ ಟೆಂಟ್ ಹಾಕಿಕೊಂಡು ಅಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ಗಂಡ, ಹೆಂಡತಿ ಹಾಗೂ ಮಕ್ಕಳೂ ಸಹ ಕೆಲಸ ಮಾಡುತ್ತಾರೆ.
ಕಬ್ಬು ಕಟಾವು, ಮನೆ ಕಟ್ಟುವ ಕೆಲಸ ಸೇರಿ ನಾನಾ ಕೆಲಸ ಮಾಡುತ್ತಾ ನಿತ್ಯ ಪ್ರತಿಯೊಬ್ಬರೂ 700ರಿಂದ 1000 ರೂಪಾಯಿವರೆಗೂ ಕೂಲಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಹತ್ತಿ ಬೆಳೆ ಕೈ ಕೊಟ್ಟಿತ್ತು. ಉಳಿದ ಅಲ್ಪ ಸ್ವಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲಿಲ್ಲ. ಹೀಗಾಗಿ ಸಾಲ ತೀರಿಸಲು ಕೂಲಿ ಕೆಲಸಕ್ಕಾಗಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದು ಕೂಲಿ ಕಾರ್ಮಿಕ ಯಮುನಪ್ಪ ಹೇಳಿದರು.
ಕೂಲಿ ಕೆಲಸ ಕೊಡುವ ಭರವಸೆ
ಗುಳೆ ತಪ್ಪಿಸಲು ನರೇಗಾ ಅಡಿ ದೊಡ್ಡ ಮಟ್ಟದಲ್ಲಿ ಕೆಲಸ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ವಿಧಾನಸಭೆ ಚುನಾವಣೆಗೆ ಮತದಾನದ ಸಮಸ್ಯೆಯಾಗದಂತೆ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕೂಲಿ ಕೆಲಸ ಕೊಡುವ ಯೋಜನೆಯನ್ನು ಏಪ್ರಿಲ್‌ನಲ್ಲಿ ಪ್ರಾರಂಭಿಸುತ್ತೇವೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಭರವಸೆ ನೀಡಿದ್ದಾರೆ.
ಇದನ್ನೆಲ್ಲ ಗಮನಿಸಿದರೆ ಈ ಲಜ್ಜೆಗೆಟ್ಟ ಅಧಿಕಾರಿಗಳಿಗೆ ಜನರ ಜೀವನಕ್ಕಿಂತ ಮತದಾನವೇ ಮುಖ್ಯವಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ ಇವರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆಯೋ ರಾಜಕಾರಣಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆಯೋ ಎನ್ನುವ ಪ್ರಶ್ನೆಗಳು ಹುಟ್ಟುವುದು ಸಹಜವಾಗಿದೆ.












Click it and Unblock the Notifications