ರೈತರಿಗೆ ವರದಾನವಾಗಲಿದೆ ದ್ರವರೂಪದ ನ್ಯಾನೋ ಯೂರಿಯಾ ಗೊಬ್ಬರ
ಶಿವಮೊಗ್ಗ, ಜುಲೈ 20; ನ್ಯಾನೋ ಯೂರಿಯಾ (ದ್ರವ) ಭಾರತ ಸರ್ಕಾರದ ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರಲ್ಲಿ ಸೇರ್ಪಡೆಯಾಗಿದೆ. ಪ್ರಪಂಚದಲ್ಲಿಯೇ ಮೊಟ್ಟ ಮೊದಲ ನ್ಯಾನೋ ಗೊಬ್ಬರ ಇದಾಗಿದ್ದು, ರೈತರಿಗೆ ವರದಾನವಾಗಿದೆ.
ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಈ ಗೊಬ್ಬರದ ಕುರಿತು ಮಾಹಿತಿ ನೀಡಿದ್ದಾರೆ, "ಗುಜರಾತ್‍ನ ಕಲೋಲ್‍ನಲ್ಲಿರುವ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಹಲವು ವರ್ಷಗಳ ಸಂಶೋಧನೆ ಬಳಿಕ ಈ ಗೊಬ್ಬರವನ್ನು ಅಭಿವೃದ್ದಿಪಡಿಸಲಾಗಿದೆ" ಎಂದು ಹೇಳಿದ್ದಾರೆ.
ಇದು ಶೇ.4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆಜಿ ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ. ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ಹಣವೂ ಉಳಿತಾಯವಾಗುತ್ತದೆ.

ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20 ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ.
ಬೆಳೆಗಳ ಪೋಷಕಾಂಶಗಳ ಹೆಚ್ಚಳ; ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕನ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.

ನ್ಯಾನೋ ಯೂರಿಯಾವನ್ನು ಬಳಸುವ ವಿಧಾನ: ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4 ಮಿ. ಲೀ. ನ್ಯಾನೋ ಯೂರಿಯಾವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
ಮೊಳಕೆ ಒಡೆದ 30 ರಿಂದ 35 ದಿನಗಳ ನಂತರ ಅಥವಾ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ (ಸಕ್ರಿಯ ಬೆಳವಣಿಗೆ ಅಥವಾ ಕವಲೊಡೆಯುವ ಹಂತ) ಮೊದಲನೇ ಸಿಂಪಡಣೆ ಹಾಗೂ ಹೂ ಬರುವ ಮುಂಚಿತವಾಗಿ ಅಥವಾ 20 ರಿಂದ 25 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು.












Click it and Unblock the Notifications