ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 15ಕೋಟಿ ರೂ. ಬೇಡಿಕೆ ಇಟ್ಟ ಮುನಿರತ್ನ
ಮಂಗಳೂರು, ಡಿಸೆಂಬರ್ 12: ರಾಜ್ಯದ ಸಾವಿರಾರು ಎಕರೆಯಲ್ಲಿನ ಅಡಿಕೆ ಬೆಳೆಗೆ ತಗುಲಿದ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಅನುಭವಿ ರೈತರೊಬ್ಬರು ನೀಡಿದ ಸಲಹೆಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ 15ಕೋಟಿ ರೂ. ಹಣ ನೀಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತೋಟಗಾರಿಕೆ ಸಚಿವ ಎನ್.ಮುನಿರತ್ನ ಹೇಳಿದರು.
ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಪೀಡಿತ ಅಡಿಕೆ ತೋಟಗಳಿಗೆ ಸಚಿವ ಮುನಿರತ್ನ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ರೋಗ ನಿಯಂತ್ರಣದ ಪರಿಹಾರ ಕುರಿತು ವಿವರಿಸಿದರು.
ರಾಜ್ಯದ ಏಳು ಜಿಲ್ಲೆಗಳಲ್ಲಿ ಅಡಿಕೆ ಮರಗಳಿಗೆ ಈ ಎಲೆ ಚುಕ್ಕಿ ರೋಗ ಕಾಣಿಸಿಕೊಳ್ಳುವ ಮೂಲಕ ಬೆಳೆಗಾರರನ್ನು ಆತಂಕಕ್ಕೆ ನೂಕಿದೆ. ಈ ಎಲೆಚುಕ್ಕಿ ರೋಗವು ಕೊಲೆಟೋಟ್ರೈಕಂ ಗ್ಲಿಯೋಸ್ಪೊಯಿರೈಡಿಸ್ ಶಿಲೀಂಧ್ರದಿಂದ ಬರುತ್ತದೆ. ರೋಗಬಾಧಿತ ಸೋಗೆಗಳ (ಎಲೆ) ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆಗಳು ಕಾಣಿಸುತ್ತವೆ. ರೋಗ ಈ ಪೀಡಿತ ಎಲೆಗಳನ್ನು ಸಮಗ್ರವಾಗಿ ಕತ್ತರಿಸಿ ತೆಗೆದು ಬೆಂಕಿಯಲ್ಲಿ ಸುಟ್ಟು ನಾಶಪಡಿಸಿದರೆ ಮಾತ್ರ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಇದು ರೋಗ ನಿಯಂತ್ರಣಕ್ಕೆ ನೆರವಾಗಬಹುದು ಎಂದು ಚರ್ಚಿಸಿ ತೀರ್ಮಾನಿಸಲಾಗಿದೆ.

ಅನುಭವಿ ರೈತರು ನೀಡಿದ ಪರಿಹಾರ ಮಾರ್ಗ ರಾಜ್ಯಾದ್ಯಂತ ಅನುಸರಿಸಬೇಕಿದೆ. ರೋಗಪೀಡಿದ ಎಲೆ ನಾಶಪಡಿಸಲು, ಬಳಿಕ ರಾಸಾಯನಿಕ ಸಿಂಪಡಿಸಲು ಅಡಿಕೆ ಬೆಳೆಗಾರರಿಗೆ ಉಚಿತ ಏಣಿ, ದೋಟಿ ವಿತರಿಸಲು ಹಾಗೂ ರಾಸಾಯನಿಕ ಸಿಂಪಡಣೆಗೆ 15 ಕೋಟಿ ರೂ. ಅಗತ್ಯವಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಇದುವರೆಗೆ ಒಟ್ಟು 42,000 ಹೆಕ್ಟೇರ್‌ಗೂ ಅಧಿಕ ಪ್ರದೇಶದ ಅಡಿಕೆ ಬೆಳೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಯಾವ ಯಾವ ಜಿಲ್ಲೆಗಳ ಗ್ರಾಮಗಳಲ್ಲಿ ಎಷ್ಟು ಜಾಗದಲ್ಲಿ ರೈತರು ಅಡಿಕೆ ಬೆಳೆದಿದ್ದಾರೆ. ರೋಗ ತಡೆಗೆ ಆ ರೈತರಿಗೆ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಅಗತ್ಯವಿದೆ ಎಂಬ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ರಸಾಯಣನಿಕ, ದೋಟಿ, ಏಣಿಯನ್ನು ಇಲಾಖೆ ಒದಗಿಸಲಿದೆ. ಇಲಾಖೆಯಿಂದ ಔಷಧಿ ಸಿಂಪಡಣೆಗೆ ಏಜೆನ್ಸಿ ನೇಮಕ ಮಾಡಲಿದೆ. ಇದರಿಂದ ರೈತರ ಆತಂಕ ದೂರ ಮಾಡಲಿದ್ದೇವೆ ಎಂದು ಹೇಳಿದರು.
ಇಸ್ರೇಲ್ ವಿಜ್ಞಾನಿಗಳ ಸಲಹೆ ಪಡೆಯುತ್ತೇನೆ
ರೈತರಿಂದ ಮಾತ್ರವಲ್ಲದೇ ತುರ್ತಾಗಿ ಎಲೆ ಚುಕ್ಕೆ ರೋಗದ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ಹಲವು ವಿಜ್ಞಾನಿಗಳಿಂದ ಸಹ ಸಲಹೆ ಕೇಳಿದ್ದೇವೆ. ಮುಂದಿನ ತಿಂಗಳು ನಾನು ಇಸ್ರೇಲ್‌ಗೆ ತೆರಳಿದ್ದು, ಅಲ್ಲಿನ ವಿಜ್ಞಾನಿಗಳನ್ನು ಭೇಟಿ ಮಾಡಿ ಅವರಿಂದ ಈ ಸಮಸ್ಯೆ ಬಗ್ಗೆ ಪರಿಹಾರ ಕೇಳಲಿದ್ದೇನೆ ಎಂದರು.

ಕರ್ನಾಟಕದ ಚಿಕ್ಕಮಗಳೂರಲ್ಲಿ ಈ ಎಲೆ ಚುಕ್ಕೆ ರೋಗ ಹೆಚ್ಚು ಬಾಧಿಸುತ್ತಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 700 ಹೆಕ್ಟೇರ್ ಪ್ರದೇಶ, ಸುಳ್ಯದಲ್ಲಿ 200 ಹೆಕ್ಟೇರ್, ಪುತ್ತೂರು ತಾಲ್ಲೂಕಿನಲ್ಲಿ 100 ಹೆಕ್ಟೇರ್, ಬಂಟ್ವಾಳದಲ್ಲಿ 90 ಹೆಕ್ಟೇರ್ ಮತ್ತು ಮಂಗಳೂರಲ್ಲಿ ಸುಮಾರು 10 ಹೆಕ್ಟೇರ್ ಪ್ರದೇಶದಲ್ಲಿ ಈ ರೋಗ ಬಾಧಿಸುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.












Click it and Unblock the Notifications