ಭಾರತ್ ಬಂದ್: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರ ಪ್ರತಿಕ್ರಿಯೆ
ಬೆಳಗಾವಿ, ಡಿಸೆಂಬರ್ 7: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಾಳೆ ಭಾರತ್ ಬಂದ್ ಕರೆ ವಿಚಾರವಾಗಿ, ನಮ್ಮ ಸರ್ಕಾರ ವಿರೋಧಿಸುವ ಪಕ್ಷಗಳಿಂದ ರೈತರ ಹೆಸರಿನಲ್ಲಿ ದೆಹಲಿಯಲ್ಲಿ ಧರಣಿ ನಡೆಸಲಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರೂ ಆಗಿರುವ ಈರಣ್ಣ ಕಡಾಡಿ, ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೃಷಿಕರ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಗೆ ಸ್ವಾತಂತ್ರ್ಯಾನಂತರ ಇಷ್ಟೊಂದು ದೊಡ್ಡ ನಿರ್ಣಯ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಾ.ಸ್ವಾಮಿನಾಥನ್ ಆಯೋಗ ನೇಮಕ ಮಾಡಿದರು. ಆ ವೇಳೆ ಆಗಿನ ಕಾಂಗ್ರೆಸ್ ಸರ್ಕಾರಕ್ಕೆ ಡಾ.ಸ್ವಾಮಿನಾಥನ್ ವರದಿ ಕೊಟ್ಟಿದ್ದರು. ಅದರಲ್ಲಿ ರೈತರು ಬೆಳೆದ ಬೆಳೆಗೆ ಒಂದೂವರೆ ಪಟ್ಟು ಜಾಸ್ತಿ ಬೆಲೆ ಸಿಗಬೇಕೆಂದಿತ್ತು, ಆದರೆ ಮೋದಿ ಸರ್ಕಾರ, ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಕಲ್ಪನೆ ಇಟ್ಟುಕೊಂಡಿದೆ ಎಂದು ತಿಳಿಸಿದರು.

""ನಾವು ತಂದಿರುವ ಕೃಷಿ ಮಸೂದೆಗಳನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ದೃಢ ಹೆಜ್ಜೆ ಇಟ್ಟಿದ್ದು, ರೈತರು ಬಂದ್ ಮಾಡುವ ದಿಕ್ಕಿನೆಡೆಗೆ ಹೋಗಬಾರದೆಂದು ಮನವಿ ಮಾಡುತ್ತೇನೆ'' ಎಂದು ಸಂಸದ ಈರಣ್ಣ ಕಡಾಡಿ ವಿನಂತಿಸಿದರು.
ಪ್ರಧಾನಮಂತ್ರಿ ಫಸಲ್ ಭಿಮಾ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ರೈತಪರ ಯೋಜನೆ ಜಾರಿ ಮಾಡಲಾಗಿದ್ದು, ರೈತರ ಆದಾಯ ದ್ವಿಗುಣ ಮಾಡಬೇಕೆಂಬ ಕಲ್ಪನೆ ಇಟ್ಟುಕೊಂಡಿದ್ದೇವೆ. ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರಾಜಕೀಯ ಪ್ರೇರಿತ ಹೋರಾಟ ನಡೆಸಲಾಗುತ್ತದೆ ಎಂದು ಆರೋಪಿಸಿದರು.
ಏನಾದರೂ ಮಸೂದೆಯಲ್ಲಿರುವ ತಪ್ಪು ಎತ್ತಿ ತೋರಿಸಿದರೆ ಪರಿಷ್ಕರಣೆ ಮಾಡುತ್ತೇವೆ. ಹೋರಾಟ ಕೈ ಬಿಡುವಂತೆ ರೈತರಲ್ಲಿ ನಾನು ಮನವಿ ಮಾಡುತ್ತೇನೆಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.












Click it and Unblock the Notifications