ಚಿತ್ರದುರ್ಗ: ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ 800ಕ್ಕೂ ಹೆಚ್ಚು ಅಡಿಕೆ ಗಿಡಗಳು, ಎಷ್ಟು ಲಕ್ಷ ನಷ್ಟ ಗೊತ್ತಾ?
ಚಿತ್ರದುರ್ಗ, ಜನವರಿ, 29: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದ ರೈತ ಈರಣ್ಣ ಅವರ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 800ಕ್ಕೂ ಹೆಚ್ಚು ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಇದರಿಂದ ರೈತ ಈರಣ್ಣ ಕಂಗಾಲಾಗಿದ್ದು, ರೈತನ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಅಡಿಕೆ ಗಿಡ ಸುಟ್ಟಿದ್ದಲ್ಲದೆ ಗಿಡಗಳಿಗೆ ನೀರಿನ ಡ್ರೀಪ್ ಪೈಪ್ ಕೂಡ ಸುಟ್ಟು ಕರಕಲಾಗಿದ್ದು, ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ ಎನ್ನಲಾಗಿದೆ. ರೈತ ಈರಣ್ಣ ತನ್ನ ಜಮೀನಿನಲ್ಲಿ 10ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರಸಿದ್ದರು. ಆದರೆ ಕೊಳವೆ ಬಾವಿಯಲ್ಲಿ ನೀರು ಅಷ್ಟಕಷ್ಟೆ ಬರುತಿತ್ತು. ಆದರೂ ಸಹ ಪಕ್ಕದ ಜಮೀನಿನಲ್ಲಿ ನೀರನ್ನು ಹಾಯಿಸಿಕೊಂಡು ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಆದರೆ ಇದೀಗ ಅದೇ ಅಡಿಕೆ ಗಿಡಗಳಿಗೆ ಬೆಂಕಿ ಬಿದ್ದಿದೆ.

ಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಪ್ರತಿಕ್ರಿಯಿಸಿ, ಬೆಳಗೆರೆ ಕಾವಲಿನ ಸರ್ವೆ ನಂಬರ 283ರ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿ ಹೆಚ್ಚದಾ ಹಿನ್ನೆಲೆ ಬೆಂಕಿ ಜಮೀನಿನ ಗಿಡಗಳಿಗೆ ಆವರಿಸಿಕೊಂಡು ಗಿಡಗಳಿಗೆ ತಾಗಿ ಸುಟ್ಟು ಹೋಗಿದೆ ಎಂದರು. ಇನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications