ವರುಣನ ರೌದ್ರನರ್ತನಕ್ಕೆ ದಾವಣಗೆರೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಹೆಕ್ಟೇರ್ ಭತ್ತದ ಬೆಳೆ ನಾಶ, ಅನ್ನದಾತನ ಗೋಳು ಕೇಳೋರಾರು?
ದಾವಣಗೆರೆ, ಮೇ, 24: ದಾವಣಗೆರೆ ಜಿಲ್ಲೆಯ ಹಲವೆಡೆ ಮಳೆರಾಯ ಆರ್ಭಟಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಮತ್ತೊಂದೆಡೆ ರೈತರು ಬೆಳೆದ ಭತ್ತದ ಬೆಳೆಗಳು ಕೂಡ ಜಲಾವೃತವಾಗಿರುವ ಘಟನೆಗಳು ಸಂಭವಿಸಿವೆ. ಮಳೆ ಸುರಿದ ಕಾರಣ ಬತ್ತದ ಬೆಳೆ ನೀರು ಪಾಲಾಗಿದೆ. 200ರಿಂದ 250 ಕಾಳು ಉದುರಿ ಹೋಗಿವೆ. ಇರುವುದು ಕೇವಲ ಹತ್ತರಿಂದ ಹದಿನೈದು ಕಾಳು ಮಾತ್ರ. ಇದರಿಂದ ಕಟಾವು ಮಾಡಲು ಯಂತ್ರಕ್ಕೆ ನೀಡುವ ಹಣ ಕೂಡ ಸಿಗುವುದಿಲ್ಲ ಎಂದರು ರೈತರು ಗೋಳು ತೋಡಿಕೊಂಡಿದ್ದಾರೆ.
ಕೈಗೆ ಬಂದಿದ್ದ ಫಸಲು ಹೇಗೆ ನೀರು ಪಾಲಾಗಿದೆ ಎಂಬುದನ್ನು ರೈತರೊಬ್ಬರು ಜಿಲ್ಲಾಧಿಕಾರಿ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ ವಿವರಿಸಿದ್ದು, ಭತ್ತದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಒಂದೆಡೆ ಬಿಸಿಲಿನ ಶಾಖ, ಮತ್ತೊಂದೆಡೆ ಭಾರೀ ಗಾಳಿ, ಮಳೆಯಿಂದ ಆದ ಅನಾಹುತದಿಂದ ನಷ್ಟ ಅನುಭವಿಸಿದ್ದೇವೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮತ್ತು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಅವರು ದಾವಣಗೆರೆ ತಾಲೂಕಿನ ಚಿಕ್ಕತೊಗಲೇರಿ ಮತ್ತು ಹಿರೇತೊಗಲೇರಿ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಭತ್ತದ ಬೆಳೆಯನ್ನು ವೀಕ್ಷಿಸಿ ರೈತರ ಅಳಲನ್ನು ಆಲಿಸಿದರು. ಈ ವೇಳೆ ತಹಶೀಲ್ದಾರ್ ಅಶ್ವತ್ಥ್, ಕೃಷಿ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಅವರು ಇದ್ದರು.
ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಫಸಲಿಗೆ ಬಂದಿತ್ತು. ಈ ಬಾರಿ ಬೆಳೆಯೂ ಸಮೃದ್ಧವಾಗಿತ್ತು. ಇನ್ನೇನೂ ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಭತ್ತ ನೀರುಪಾಲಾಯಿತು. ಅಲ್ಲದೆ ಭತ್ತದ ಬೆಳೆ ಕೆಲವೆಡೆ ಹಾಸುಹೊದ್ದು ಮಲಗಿದಂತೆ ಕಾಣುತ್ತಿದೆ.
ಭತ್ತ ಬೆಳೆಯಲು ರೈತರು ಸಾಕಷ್ಟು ಬೆವರು ಸುರಿಸಿದ್ದರು. ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರಿಗೆ ಹಣ ಸೇರಿದಂತೆ ನಾನಾ ಬಗೆಯಲ್ಲಿ ಖರ್ಚು ಮಾಡಿದ್ದರು. ಇನ್ನೇನೂ ಫಸಲು ಚೆನ್ನಾಗಿ ಬಂದಿದೆ. ಈ ಬಾರಿಯಾದರೂ ಸಾಲ ತೀರಿಸಬಹುದು ಎಂಬ ಬಯಕೆಯನ್ನು ಹೊಂದಿದ್ದರು. ಆದರೆ ಇದೀಗ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿ ಅನ್ನದಾತರು ಗೋಳಾಡುವಂತಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಕೊರೊನಾದಿಂದ ತುಂಬಾನೇ ನಷ್ಟ ಅನುಭವಿಸಿದ್ದೇವೆ. ಕಳೆದ ಬಾರಿಯೂ ಭಾರೀ ಮಳೆ ಸುರಿದು ಜಮೀನಿನಲ್ಲಿ ನೀರು ನಿಂತು ಭತ್ತದ ಬೆಳೆ ಸಂಪೂರ್ಣ ನಾಶವಾಗಿತ್ತು. ಆಗಲೂ ತುಂಬಾ ನಷ್ಟ ಅನುಭವಿಸಿದ್ದೆವು. ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ. ಪ್ರತೀ ವರ್ಷವೂ ಇಂತಹ ಸ್ಥಿತಿ ನಿರ್ಮಾಣವಾದರೆ ನಮ್ಮ ಬದುಕು ಹೇಗೆ ಸಾಗುತ್ತದೆ. ಸರ್ಕಾರವೂ ಪರಿಹಾರ ಹೆಚ್ಚಿಸಬೇಕು. ಆದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಸರ್ವೆ ಮಾಡುತ್ತೇವೆ, ವರದಿ ತರಿಸಿಕೊಳ್ಳುತ್ತೇವೆ ಎನ್ನುವ ಭರವಸೆ ಕೊಡುವುದನ್ನು ಬಿಟ್ಟು ಆದಷ್ಟು ಬೇಗ ನಮಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಹರಿಹರ ತಾಲೂಕಿನಲ್ಲಿಯೇ ಸುಮಾರು 40 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಬಿರುಗಾಳಿ, ಮಳೆಗೆ 295 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದ್ದರೆ, ಎರಡು ಮನೆಗಳಿಗೆ ಹಾನಿ ಉಂಟಾಗಿದೆ.
ಪ್ರದೇಶವಾರು ಭತ್ತ ಬೆಳೆ ನಾಶದ ವಿವರ
1. ಹರಿಹರ ತಾಲೂಕು- 295 ಹೆಕ್ಟೇರ್
2. ದೇವರಬೆಳಕರೆ - 30 ಹೆಕ್ಟೇರ್,
3. ಕಡ್ಲೆಗೊಂದಿ - 50 ಹೆಕ್ಟೇರ್
4. ಗಂಗನರಸಿ - 70 ಹೆಕ್ಟೇರ್
5. ಕೊಂಡಜ್ಜಿ 20 ಹೆಕ್ಟೇರ್
6. ಕುಣಿಬೆಳಕೆರೆ 40 ಹೆಕ್ಟೇರ್
7. ಸಾಲಕಟ್ಟೆ 45 ಹೆಕ್ಟೇರ್
ಹೊತ್ತಿ ಉರಿದ ತೆಂಗಿನಮರ
ಇನ್ನು ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮಕ್ಕೆ ಸಮೀಪದ ಕೊಂಡದಹಳ್ಳಿ ಗ್ರಾಮದ ತೋಟದಲ್ಲಿನ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದಿದ್ದು, ಬೆಂಕಿ ಹೊತ್ತಿ ಉರಿದ ಘಟನೆಯೂ ನಡೆದಿದೆ. ಸಿಡಿಲಿನ ಹೊಡೆತದ ರಭಸಕ್ಕೆ ತೆಂಗಿನ ಮರದ ಸುತ್ತಲಿನ 20 ಅಡಿಕೆ ಮರಗಳಿಗೆ ಪೆಟ್ಟು ಬಿದ್ದಿದೆ. ಕೆಲ ದಿನಗಳ ಬಳಿಕ ಈ ಮರಗಳು ಉಳಿಯುತ್ತವೆಯೋ, ಇಲ್ಲವೋ ಎಂಬುದು ಗೊತ್ತಾಗಲಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಹೇಳಿದ್ದಾರೆ.
ಮಿಂಚು, ಗುಡುಗು, ಸಿಡಿಲಿನ ರಣ ಮಳೆಯು ಭತ್ತ, ಅಡಿಕೆ, ತೆಂಗು, ಬಾಳೆಗೆ ಹಾನಿಯುಂಟು ಮಾಡಿದೆ. ಮುಂಗಾರು ಪೂರ್ವ ಮಳೆಯ ಖುಷಿಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸದ ಬದಲು ಕಾರ್ಮೋಡ ಕವಿಯುವಂತೆ ಮಾಡಿದೆ.
ಕಳೆದ ವರ್ಷ ಅಧಿಕ ಮಳೆಯಿಂದ ಸಾವಿರಾರು ಹೆಕ್ಟೇರ್ ಬೆಳೆ ಹಾನಿ ಆಗಿತ್ತು. ಮರು ಬಿತ್ತನೆಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಹೋಬಳಿ ವ್ಯಾಪ್ತಿಯಲ್ಲಿ 6,400 ಹೆಕ್ಟೇರ್ ಮಳೆಯಾಧಾರಿತ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಪಾಪ್ ಕಾರ್ನ್ ತಳಿ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ವರುಣನ ಕೃಪೆ ಇದ್ದರೆ ಬಿತ್ತನೆಗೆ ಪೂರಕವಾದ ಬಿತ್ತನೆ ಬೀಜ, ಗೊಬ್ಬರ ಲಭ್ಯವೂ ಇದೆ.
ಜಗಳೂರಿನಲ್ಲಿ ಎತ್ತು ಸಾವು
ಜಗಳೂರು ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದೆ. ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದ್ದರೆ, ಮತ್ತೊಂದೆಡೆ ಬಾಳೆ ತೋಟಗಳಿಗೂ ಹಾನಿಯಾಗಿದೆ. ಕಸಬಾ ಹೋಬಳಿಯಲ್ಲಿ ಎರಡು ಹೆಕ್ಟೇರ್ ಬಾಳೆ, 1 ಹೆಕ್ಟೇರ್ ಪಪ್ಪಾಯಿ, 2 ಮನೆಗಳು, ಸೊಕ್ಕೆ ಹೋಬಳಿಯಲ್ಲಿ 2 ಹೆಕ್ಟೇರ್ ಅಡಿಕೆ, 5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದೆ.












Click it and Unblock the Notifications