ಮುಂಗಾರು ಹಂಗಾಮು ಆರಂಭ, ರೈತರಿಗೆ ಬಿತ್ತನೆ ಬೀಜ ವಿತರಣೆ
ಕೊಪ್ಪಳ, ಮೇ 31; ಈ ಬಾರಿಯ ನೈಋತ್ಯ ಮುಂಗಾರು ಹಂಗಾಮಿಗೆ ದಿನಗಣನೆ ಆರಂಭವಾಗಿದೆ. ಹಿಂಗಾರು ಮಳೆ ಆರ್ಭಟ ಜೋರಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ರೈತರು ಸಹ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಕೊಪ್ಪಳದಲ್ಲಿ ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಚಾಲನೆ ನೀಡಿದರು. ನಗರದ ಈಶ್ವರ ಪಾರ್ಕ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಿತು. ಜೂನ್ 5ರ ಬಳಿಕ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರು ಕಾಳು, ಮೆಕ್ಕೆಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೀಜಗಳನ್ನು ರೈತರಿಗೆ ಸಾಂಕೇತಿಕವಾಗಿ ವಿತರಣೆ ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, "ತಾಲೂಕಿನ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿ ಸರ್ಕಾರದ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

ವಾಡಿಕೆ ಮಳೆ ಎಷ್ಟು?; ಕೊಪ್ಪಳ ತಾಲೂಕಿನ ವಾರ್ಷಿಕ ವಾಡಿಕೆ ಮಳೆ 599 ಮಿ. ಮೀ. ಇದ್ದು, ಇಲ್ಲಿವರೆಗೆ 55 ಮಿ. ಮೀ ಮಳೆಗೆ 48.7 ಮಿ. ಮೀ. ಮಳೆ ಆಗಿರುತ್ತದೆ. ಕೊಪ್ಪಳ ತಾಲೂಕು 1,36,755 ಹೆಕ್ಟೇರ್ ಭೌಗೋಳಿಕ ಕ್ಷೇತ್ರವನ್ನು ಹೊಂದಿದ್ದು, ಅದರಲ್ಲಿ 1,12,675 ಹೆಕ್ಟೇರ್ ಸಾಗುವಳಿ ಕ್ಷೇತ್ರ ಹೊಂದಿರುತ್ತದೆ.
ಮುಂಗಾರು ಹಂಗಾಮಿಗೆ ಒಟ್ಟು 62,568 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಹೊಂದಿದ್ದು, ತಾಲೂಕಿನಲ್ಲಿ ಮುಂಗಾರು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ 4 ರೈತ ಸಂಪರ್ಕ ಕೇಂದ್ರ ಹಾಗೂ ಎರಡು ಹೆಚ್ಚುವರಿ ಬೀಜ ವಿತರಣಾ ಕೇಂದ್ರದ ಮೂಲಕ ಕೈಗೊಳ್ಳಲಾಗಿದೆ.
ಕೊಪ್ಪಳ ತಾಲೂಕಿಗೆ ಸಂಬಂಧಿಸಿದಂತೆ ಪ್ರಸ್ತುತ 50 ಕ್ವಿಂಟಾಲ್ ಹೆಸರು, 65 ಕ್ವಿಂಟಾಲ್ ತೊಗರಿ, 5 ಕ್ವಿಂಟಾಲ್ ನವಣೆ, 250 ಕ್ವಿಂಟಾಲ್ ಮೆಕ್ಕೆಜೋಳ ದಾಸ್ತಾನು ಲಭ್ಯವಿದ್ದು ಬೇಡಿಕೆ ಹಾಗೂ ಅವಶ್ಯಕತೆಗನುಗುಣವಾಗಿ ಬೀಜಗಳ ದಾಸ್ತಾನು ಮಾಡಿ ಮಾರ್ಗಸೂಚಿಯನ್ವಯ ರೈತರಿಗೆ ವಿತರಣೆ ಮಾಡಲಾಗುತ್ತಿದೆ.
ಬಿತ್ತನೆ ಬೀಜ ಮಾತ್ರವಲ್ಲ ಯೂರಿಯಾ-9314, ಡಿಎಪಿ-4726, ಎಂಓಪಿ-943, ಕಾಂಪ್ಲೆಕ್ಸ್-100 56, ಎಸ್‌ಎಸ್‌ಪಿ-907 ಸೇರಿ ಒಟ್ಟು 25,946 ಟನ್‌ಗಳ ಬೇಡಿಕೆ ಇದ್ದು, ಪ್ರಸ್ತುತ ಯೂರಿಯಾ-2350, ಡಿಎಪಿ-1500, ಕಾಂಪ್ಲೆಕ್ಸ್-2960 ಸೇರಿ ಒಟ್ಟು 6810 ಟನ್‌ಗಳ ದಾಸ್ತಾನು ಲಭ್ಯವಿರುತ್ತದೆ.
ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ; ನೈಋತ್ಯ ಮುಂಗಾರು ಹಂಗಾಮಿನ ಆರಂಭದ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, "ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ತೊಂದರೆಯಾದಲ್ಲಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಹ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಿಯಮಿತವಾಗಿ ನಡೆಯಬೇಕು" ಎಂದರು.
"ಮಳೆ ಹಾಗೂ ಪ್ರವಾಹ ಸೇರಿದಂತೆ ವಿಪತ್ತು ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ವಿಪತ್ತು ಪರಿಸ್ಥಿತಿಗೆ ಸಿಲುಕಿದಲ್ಲಿ ಸಂತ್ರಸ್ತರಿಗೆ ಪರಿಹಾರೋಪಾಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕ್ರಮವಹಿಸಿ ಜನತೆಗೆ ಸ್ಪಂದನೆ ನೀಡಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications