ಮುಂಗಾರು ಹಂಗಾಮು; ಮೆಣಸಿನಕಾಯಿ ಬೆಳೆಗೆ ಸಲಹೆಗಳು
ಬಳ್ಳಾರಿ, ಜೂನ್ 05; ಈ ವರ್ಷದ ಮುಂಗಾರು ಹಂಗಾಮಿನ ತಯಾರಿ ಆರಂಭವಾಗಿದೆ. 2022ರಲ್ಲಿ ಒಣಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇತ್ತು. ಈ ಹಿನ್ನಲೆಯಲ್ಲಿ ಈ ವರ್ಷವು ಅತೀ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವ ನಿರೀಕ್ಷೆ ಮಾಡಲಾಗಿದೆ. ನೈಋತ್ಯ ಮುಂಗಾರು ಇನ್ನೂ ಆಗಮಿಸಿ, ಮಳೆ ಆರಂಭವಾಗಬೇಕಿದೆ.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಸ್‍ಪಿ ಭೋಗಿ, "ಪ್ರಸ್ತಕ ಸಾಲಿನ ಹಂಗಾಮಿನಲ್ಲಿ ಅತೀ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಪ್ರದೇಶ ಬಿತ್ತನೆಯಾಗುವ ಸಂಭವವಿದ್ದು, ದರ ಕಡಿಮೆಯಾಗಿ ಆದಾಯ ಕಡಿಮೆಯಾಗುವುದನ್ನು ತಪ್ಪಿಸಲು ಬೇಸಾಯದ ಖರ್ಚನ್ನು ಕಡಿಮೆ ಮಾಡುವುದು ಸೂಕ್ತ" ಎಂದು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಕೆಲವು ಬ್ಯಾಡಗಿ ಲೈನ್‍ನ ಹೈಬ್ರಿಡ್ ತಳಿಗಳ ಬೀಜಗಳು ತುಂಬಾ ದುಬಾರಿಯಾಗಿದ್ದು, ಅವುಗಳನ್ನು ಉಪಯೋಗಿಸಿ ಬೆಳೆ ಬೆಳೆಯುವ ಬದಲು, ಬೆಳೆಯಲು ಇಚ್ಛಿಸಿದ ಪ್ರದೇಶ ಶೇ25ರಷ್ಟು ಹೈಬ್ರಿಡ್ ಬೀಜಗಳನ್ನು ಉಪಯೋಗಿಸುವುದು ಹಾಗೂ ಇನ್ನುಳಿದ ಪ್ರದೇಶಗಳಲ್ಲಿ ಶೇ 75ರಷ್ಟು ಲೂಸ್ ಬ್ಯಾಡಗಿ ತಳಿಯ ಬೀಜಗಳನ್ನು ಉಪಯೋಗಿಸುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ರೈತರಿಗೆ ಸಲಹೆಗಳು; ಬಿತ್ತನೆ ಮಾಡುವುದಕ್ಕಿಂತ ಮುಂಚಿತವಾಗಿ ಭೂಮಿಯನ್ನು 2-3 ಬಾರಿ ಹದವಾಗಿ ಉಳುಮೆ ಮಾಡಬೇಕು. ಹೀಗೆ ಮಾಡುವುದರಿಂದ ರೋಗ ಮತ್ತು ಕೀಟಗಳನ್ನು ಹತೋಟಿಯಲ್ಲಿಡಬಹುದು. ಮೆಣಸಿನಕಾಯಿ ಬೀಜಗಳನ್ನು ಬಿತ್ತನೆ ಮಾಡುವ ಮುಂಚೆ Carbendizim ರೋಗ ನಾಶಕದಿಂದ ಉಪಚರಿಸಬೇಕು. ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಿದಲ್ಲಿ ಸಸಿಗಳನ್ನು ಬ್ಯಾವಿಸ್ಟಿನ್ ದ್ರಾವಣದಲ್ಲಿ ಒಂದು ನಿಮಿಷಗಳ ಕಾಲ ನೆನೆಸಿ ನಾಟಿ ಮಾಡಬೇಕು.

ಮೆಣಸಿನಕಾಯಿ ಬೆಳಗೆ ಸೂಕ್ಷ್ಮ ನೀರಾವರಿ ಪದ್ದತಿ ಅಳವಡಿಸುವುದರಿಂದ ಒಣ ಮೆಣಸಿನಕಾಯಿಯ ಗುಣಮಟ್ಟ ಮತ್ತು ಉತ್ಪಾದನೆಯು ಸಹ ಹೆಚ್ಚಳವಾಗುತ್ತದೆ. ಈ ಪದ್ದತಿ ಅಳವಡಿಸಿಕೊಂಡ ಸಾಮಾನ್ಯ ವರ್ಗದ ರೈತರಿಗೆ ಶೇ 75ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನ ಲಭ್ಯವಿರುತ್ತದೆ.
ಸಿಂಜೆಂಟಾ ಕಂಪನಿಯ 5531 ಹಾಗೂ 2043 ತಳಿಗಳಿಗೆ ರೈತರಿಗೆ ವರ್ಗದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಯಾವುದೇ ಕೊರತೆಯಾಗದಂತೆ ಹಂತ ಹಂತವಾಗಿ ಪೂರೈಸುವುದಾಗಿ ಸಿಂಜೆಂಟಾ ಕಂಪನಿಯವರು ತಿಳಿಸಿರುತ್ತಾರೆ. ಕಾರಣ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ.
ಸಿಂಜೆಂಟಾ ಕಂಪನಿಯ ಬೀಜಗಳನ್ನು ಒಳಗೊಂಡಂತೆ ಯಾವುದೇ ಕಂಪನಿಯವರು, ಡೀಲರ್‌ಗಳು ಚಿಲ್ಲರೆ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡತಕ್ಕದ್ದಲ್ಲ, ಹಾಗೇನಾದರೂ ಮಾರಾಟ ಮಾಡಿರುವುದು ಕಂಡುಬಂದರೆ, ತೋಟಗಾರಿಕೆ ಇಲಾಖೆಗೆ ದೂರು ನೀಡಬಹುದು. ದೂರಿನನ್ವಯ ಸಂಬಂಧಿಸಿದ ಡೀಲರ್, ಕಂಪನಿಯವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಿಂಜೆಂಟಾ ಅಥವಾ ಇನ್ನಾವುದೇ ಕಂಪನಿಯ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸುವ ಅಥವಾ ವಿತರಣೆ ಮಾಡುವ ಯೋಜನೆ ಇರುವುದಿಲ್ಲ. ಬೀಜ ಕಾಯ್ದೆಯನ್ವಯ ಕಂಪನಿ, ಡೀಲರ್‌ಗಳಿಂದ ಮಾರಾಟವಾಗುವ ವ್ಯವಸ್ಥೆಯ ಮೇಲೆ ನಿಗಾವಹಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಸಿಂಜೆಂಟಾ ಕಂಪನಿಯ 2043 ಬ್ಯಾಡಗಿ ಸೆಗ್ಮೆಂಟ್ ಭಾಗಶಂ ಹೋಲುವ ಮತ್ತು ಸರಿ ಸುಮಾರು ಅಷ್ಟೇ ಪ್ರಮಾಣದ ಉತ್ತಮವಾಗಿ ಇಳುವರಿಯನ್ನು ನೀಡುವ ಇತರೆ ಕಂಪನಿಯ ಹೈಬ್ರೀಡ್ ಬೀಜಗಳನ್ನು ಸಹ ರೈತರು ಬೆಳೆಯಬಹುದು.
ಉದಾಹರಣೆಗೆ ಸರ್ಪನ್ ಕಂಪನಿಯ ಬೀಜಗಳು, ಲಕ್ಷೀ ಕಂಪನಿ, ಎಲೈಟ್ ಕಂಪನಿ, ಸೆಮಿನಿಸ್ ಕಂಪನಿ, ಚರ್ರೀಸ್ ಕಂಪನಿ, ಲಕ್ಷೀ ಇನ್ಪುಟ್ಸ್ ಕಂಪನಿಯ LHC-2045, Farmagen FG-MIRAI-20, SSAgritech SRUSTI 43, Agbees Seeds BALI-F1, Ravi hybrid seeds Dabbi Byadgi (6263) ಕಂಪನಿಯ ಬೀಜಗಳನ್ನು ಸಹ ಬಿತ್ತನೆಗಾಗಿ ಉಪಯೋಗಿಸಬಹುದು.












Click it and Unblock the Notifications