ಹುಬ್ಬಳ್ಳಿ : ಮೀಟರ್ ಬಡ್ಡಿ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ
ಹುಬ್ಬಳ್ಳಿ, ಜುಲೈ 20 : ಮೀಟರ್ ಬಡ್ಡಿ ದಂಧೆಯನ್ನು ತಡೆಯಲು ಹುಬ್ಬಳ್ಳಿ-ಧಾರವಾಡ ಪೊಲೀಸರು ಸಹಾಯವಾಣಿ ಆರಂಭಿಸಿದ್ದಾರೆ. ರೈತರು ಮತ್ತು ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ಹೇಳಿದ್ದಾರೆ.
ರೈತರ ಆತ್ಮಹತ್ಯೆಗೆ ಮೀಟರ್ ಬಡ್ಡಿ ದಂಧೆ ಪ್ರಮುಖ ಕಾರಣ ಎಂದು ಆರೋಪಿಸಲಾಗುತ್ತಿದೆ. ಆದ್ದರಿಂದ, ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಜನರು ದೂರು ನೀಡಲು 0836-2222603 ಸಂಖ್ಯೆಯ ಸಹಾಯವಾಣಿಯನ್ನು ಪೊಲೀಸರು ಆರಂಭಿಸಿದ್ದಾರೆ. [ಮೀಟರ್ ಬಡ್ಡಿ ದಂಧೆ ತಡೆಯಲು ಸಹಾಯವಾಣಿ]

ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವ ಜನರ ವಿವರವನ್ನು ಗೌಪ್ಯವಾಗಿ ಇಡಲಾಗುತ್ತದೆ. ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಯಾವ ಸಮಯದಲ್ಲಿ ಬೇಕಾದರೂ ಜನರು ಕರೆ ಮಾಡಿ ಮೀಟರ್ ಬಡ್ಡಿ ದಂಧೆ ಬಗ್ಗೆ ಮಾಹಿತಿ ನೀಡಬಹುದಾಗಿದೆ. [ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
ಅಧಿಕ ಬಡ್ಡಿ ಪಡೆಯುವುದು ಅಕ್ರಮ : ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಅಧಿಕ ಬಡ್ಡಿಯನ್ನು ಪಡೆಯುವುದು ಅಪರಾಧವಾಗಿದೆ ಎಂದು ಹೇಳಿರುವ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್, ಇಂತಹ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಹಿ ಹಾಕಬೇಡಿ : ರೈತರು ಹಣ ಪಡೆಯುವಾಗ ಖಾಲಿ ಚೆಕ್ ಮತ್ತು ಛಾಪಾ ಕಾಗದಗಳಿಗೆ ಸಹಿ ಹಾಕಬಾರದು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಚೆಕ್ ಅಥವ ಛಾಪಾ ಕಾಗದಗಳಿಗೆ ಸಹಿ ಹಾಕುವಂತೆ ಕೇಳುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.












Click it and Unblock the Notifications