ಬರಗಾಲದಲ್ಲೂ ಮಿಶ್ರ ಬೆಳೆ; ಕೊಪ್ಪಳದ ರೈತನ ಸಾಧನೆ

ಕೊಪ್ಪಳ, ಜನವರಿ 25: ಈ ಬಾರಿ ರಾಜ್ಯದಲ್ಲಿ ಬರಗಾಲವಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಬರಗಾಲದಲ್ಲೂ ಮಿಶ್ರ ಬೆಳೆ ಬೆಳೆದು ಕೊಪ್ಪಳದ ರೈತರೊಬ್ಬರು ಸಾಧನೆ ಮಾಡಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಈ ಸಾಧನೆ ಮಾಡಿದವರು ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ರೈತರಾದ ಮುದುಕಪ್ಪ ದೇವರ ಹಾಗೂ ಅವರ ಮಗ ವಿನೋದ ದೇವರ. ಮುದುಕಪ್ಪ ದೇವರ ಅವರು ಒಬ್ಬ ಪ್ರಗತಿಪರ ರೈತ ಹಾಗೂ ಉದ್ಯಮಿ. ಇವರು ನೂರಾರು ಎಕರೆ ಜಮೀನು ಹೊಂದಿದ್ದು, ಜೆಸಿಬಿ ಮಾಲೀಕರಾಗಿದ್ದಾರೆ. ಅಲ್ಲದೇ ತಮ್ಮದೇ ಸ್ವಂತ ಜೆಸಿಬಿ ಗ್ಯಾರೇಜ್ ಹೊಂದಿದ್ದಾರೆ.

Mixed Cropping Koppal Farmer Success Story

ಊರಿನ ಮುಖಂಡರಲ್ಲಿ ಒಬ್ಬರಾದ ಮುದುಕಪ್ಪ ದೇವರ ಹಾಗೂ ಮಗ ವಿನೋದ ದೇವರ ಇಬ್ಬರೂ ಇದೇ ಜಮೀನಿನಲ್ಲಿ ಪ್ರತಿ ವರ್ಷ ಮಳೆಯಾಶ್ರಯದಲ್ಲಿ ಕಡಲೆ, ಈರುಳ್ಳಿ, ಕೊತ್ತಂಬರಿ, ಹಿಂಗಾರು ಜೋಳ, ಗೋಧಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ.

ತೀವ್ರ ಬರಗಾಲ; 2023-24ನೇ ಸಾಲಿನಲ್ಲಿ ತೀವ್ರ ಬರಗಾಲವಿದ್ದರೂ 30 ಎಕರೆಗೂ ಹೆಚ್ಚು ಕಡಲೆ, 4 ಎಕರೆ ಸೂರ್ಯಕಾಂತಿ ಬೆಳೆದಿದ್ದಾರೆ. ಇದಲ್ಲದೇ 2.5 ಎಕರೆ ಜಮೀನಿನಲ್ಲಿ ಹಿಂಗಾರು ಜೋಳ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳನ್ನು ಒಟ್ಟಿಗೆ ಮಿಶ್ರ ಬೆಳೆಯಾಗಿ ಬೆಳೆದಿರುವುದೇ ಇವರ ಸಾಧನೆ.

ಅಕ್ಟೋಬರ್‌ ತಿಂಗಳಿನಲ್ಲಿ ಡಬ್ಬಿ ಮೆಣಸಿನಕಾಯಿ ಜೊತೆ ನಾಸಿಕ ತಳಿಯ ಈರುಳ್ಳಿಯನ್ನು ನಾಟಿ ಮಾಡಿದ್ದಾರೆ. ನವಂಬರ್‌ನಲ್ಲಿ ಒಂದು ಮಳೆಯಾದಾಗ ಸಾಲುಗಳ ಮಧ್ಯದಲ್ಲಿ ಹಿಂಗಾರು ಜೋಳವನ್ನು ಬಿತ್ತಿದ್ದಾರೆ. ಒಂದು ಸಾರಿ ಕೃಷಿ ಹೊಂಡದ ನೀರನ್ನು ಈ ಬೆಳೆಗಳಿಗೆ ರಕ್ಷಣಾತ್ಮಕವಾಗಿ ಹರಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಈ ಎಲ್ಲಾ ಬೆಳೆಗಳು ಕಟಾವಿಗೆ ಸಿದ್ದವಾಗಿದ್ದು, ಸುಮಾರು ರೂ. 3 ಲಕ್ಷ ಆದಾಯವನ್ನು ಅವರು ನಿರೀಕ್ಷಿಸಿರುತ್ತಾರೆ. ಇವರ ತೋಟಕ್ಕೆ ವಿಜ್ಞಾನಿಗಳು ಭೇಟಿ ನೀಡಿದಾಗ ಮೂರು ಮಿಶ್ರ ಬೆಳೆಗಳು ಉತ್ತಮವಾಗಿ ಬೆಳೆದಿರುವುದನ್ನು ಕಂಡು ಈ ರೈತರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಇದೇ ಸಮಯದಲ್ಲಿ ಹೊಲದಲ್ಲಿ ಬೆಳೆದ ಕಡಲೆ, ಸೂರ್ಯಕಾಂತಿ ಹಾಗೂ ಗೋಧಿ ಬೆಳೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುದುಕಪ್ಪನವರು ಸಾಹುಕಾರರಾಗಿದ್ದರೂ, ವಿನಯವಂತಿಕೆಯಿಂದ ಎಲ್ಲ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಬೆರೆಯುತ್ತಾರೆ.

ಊರಿನಲ್ಲಿಯೂ ಕೂಡ ಯಾವುದೇ ರೈತರಿಗೆ ಸಂಕಷ್ಟವಾದಾಗ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ಕೊಡಲು ಸಹಕಾರ ನೀಡುತ್ತಾರೆ.

ಹೀಗೆ ಮುದುಕಪ್ಪನವರು ಒಬ್ಬ ಪ್ರಗತಿಪರ ರೈತ ಹಾಗೂ ಉದ್ಯಮಿ ಅಷ್ಟೇ ಅಲ್ಲದೇ ಕೃಷಿಯಲ್ಲಿಯೂ ಕೂಡ ಉತ್ತಮ ಪ್ರಯೋಗ ಮಾಡುತ್ತಾ, ಸಾಧನೆಗೈದ ಒಬ್ಬ ಮಾದರಿ ರೈತರೆನಿಸಿಕೊಳ್ಳುತ್ತಾರೆ.

ಇವರೇ ಹೇಳುವ ಹಾಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವಿಜ್ಞಾನಿಗಳ ಸಲಹೆಯಂತೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದ್ದು, ತಮ್ಮ ಸಾಧನೆಗೆ ಫಲವತ್ತಾದ ಜಮೀನೇ ಕಾರಣ ಎನ್ನುತ್ತಾರೆ ಮುದುಕಪ್ಪ.

ಬರಗಾಲದಲ್ಲೂ ಕೃಷಿ ಹೊಂಡದ ನೀರು ಬಳಸಿ ಮೂರೂ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದಿರುವುದು ಅಪರೂಪದ ಸಾಧನೆ. ಎಲ್ಲ ರೈತರು ಈ ರೀತಿ ಮಿಶ್ರಬೆಳೆ ಬೆಳೆದಲ್ಲಿ ಆದಾಯ ದ್ವಿಗುಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೃಷಿ ವಿಸ್ತರಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ. ಎಂ. ವಿ. ರವಿ ರೈತರ ಸಾಧನೆಯನ್ನು ಕೊಂಡಾಡಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಬನ್ನಿಕೊಪ್ಪದ ರೈತ ಮುದುಕಪ್ಪ ದೇವರ ಅವರನ್ನು ಮೊಬೈಲ್ ಸಂಖ್ಯೆ 9449964291, ವಿಸ್ತರಣಾ ಮುಂದಾಳುಗಳಾದ ಡಾ. ಎಂ. ವಿ. ರವಿ. 9480247745 ಮತ್ತು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಅವರನ್ನು 8217696837 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+