ರೈತರಿಂದ ಮೆಕ್ಕೆಜೋಳ ಖರೀದಿ; ದರವನ್ನು ನಿಗದಿ ಮಾಡಿದ ಕೆಎಂಎಫ್
ಧಾರವಾಡ, ನವೆಂಬರ್ 09; ಕರ್ನಾಟಕ ಸರ್ಕಾರದ ಹೊಸ ಆದೇಶದ ಪ್ರಕಾರ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ದರವನ್ನು ನಿಗದಿ ಮಾಡಿದೆ. ರೈತರಿಂದ ಖರೀದಿಗೆ ಪ್ರತಿ ಕ್ವಿಂಟಲ್‍ಗೆ ರೂ. 2,090ರಂತೆ ದರ ನಿಗದಿ ಮಾಡಲಾಗಿದೆ.
ಸರ್ಕಾರದಿಂದ ನಿಗದಿಪಡಿಸಿದ ಬೆಲೆ ನೀಡಿ ತೇವಾಂಶ ಮತ್ತು ಗುಣಮಟ್ಟದ ನಿಬಂಧನೆಗಳಿಗೆ ಒಳಪಟ್ಟು ರೈತರಿಂದ ಮೆಕ್ಕೆಜೋಳ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಲ್‍ಗೆ ಎರಡು ಗೋಣಿ ಚೀಲದ ಮೊತ್ತ (59 ಕೆ.ಜಿ. ಸಾಮರ್ಥ್ಯ) ಮತ್ತು ಸಾಗಾಣಿಕ ಪ್ರೋತ್ಸಾಹವಾಗಿ ರೂ.160 ಗಳನ್ನು ಸೇರಿಸಿ ಒಟ್ಟಾರೆ ರೂ. 2,250 ಪ್ರತಿ ಕ್ವಿಂಟಲ್‍ಗೆ ಖರೀದಿಸಲಾಗುತ್ತದೆ.

ಮೆಕ್ಕೆಜೋಳವನ್ನು ನೇರವಾಗಿ ಜಿಲ್ಲಾ ಹಾಲು ಒಕ್ಕೂಟಗಳ ಮೇಲ್ವಿಚಾರಣೆ ಸಹಕಾರದೊಂದಿಗೆ ಖರೀದಿಸುವ ಪ್ರಕ್ರಿಯೆಯನ್ನು ನವೆಂಬರ್ 13ರಿಂದ ಆರಂಭವಾಗಲಿದೆ. ರೈತರು ವೈಯಕ್ತಿಕವಾಗಿ ಪಶು ಆಹಾರ ಕಾರ್ಖಾನೆಗೆ ಆಗಮಿಸುವ ಬದಲು ಸರ್ಕಾರದ ಕೃಷಿ ಇಲಾಖೆ ಸಿದ್ಧಪಡಿಸಿದ ಫ್ರೂಟ್ಸ್ ಐಡಿ ಹೊಂದಿರುವ ಅರ್ಹ ರೈತರು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಲಭ್ಯವಿರುವ ಕ್ಷೀರಸಿರಿ ತಂತ್ರಾಂಶದ ಮೂಲಕ ನೋಂದಾಯಿಸಿ, ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುತ್ತಿದೆ.
ಸರಬರಾಜು ಮಾಡಬಹುದಾದ ಪ್ರಮಾಣವನ್ನು ಪ್ರತಿಯೊಬ್ಬ ರೈತರಿಂದ ಗರಿಷ್ಟ ಮಿತಿ 1,000 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸೀಮಿತಗೊಳಿಸಿದ್ದು, ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಅವಕಾಶವನ್ನು ಉಪಯೋಗಿಸಿಕೊಂಡು ರೈತರೇ ನೇರವಾಗಿ ಸರಬರಾಜು ಮಾಡಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.
ಬರ ಪರಿಹಾರದ ಸೂಚನೆ; ಬರ ಪರಿಹಾರವನ್ನು ಪಡೆಯುವ ಕುರಿತು ಸಹ ರೈತರಿಗೆ ಮಾಹಿತಿಯೊಂದನ್ನು ನೀಡಲಾಗಿದೆ. ಬೆಳೆ ವಿಮೆ ನೋಂದಣಿಗೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಎಫ್‍ಐಡಿ ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್‍ಐಡಿ ಸಂಖ್ಯೆ ಪಡೆಯಬೇಕು ಎಂದುರೈತರಲ್ಲಿ ಮನವಿ ಮಾಡಲಾಗಿದೆ.
ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications