ಕೊಪ್ಪ: ಅಡಿಕೆಗೆ ಎಲೆಚುಕ್ಕಿ ರೋಗ; ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ
ಚಿಕ್ಕಮಗಳೂರು, ಜನವರಿ, 26: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕಿರೋಗ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಇಡೀ ಅಡಿಕೆ ತೋಟವೇ ನಾಶವಾಗುತ್ತಿದೆ. ಇದರಿಂದ ಬೇಸತ್ತು ಇದುವರೆಗೂ ನಾಲ್ಕು ಜನ ಅಡಿಕೆ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗೆಯೇ ಬುಧವಾರ (ಜನವರಿ 25) ಕೊಪ್ಪ ತಾಲೂಕಿನ ಕಕ್ಕದ್ದೆ ಗ್ರಾಮದಲ್ಲಿ ಅಡಿಕೆ ಬೆಳೆಗಾರ ರವೀಂದ್ರ (75) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಡಿಕೆ ಬೇಳೆ ನಾಶದಿಂದ ಬೇಸತ್ತ ರೈತ ರವೀಂದ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ 5 ಹೆಕ್ಟೇರ್ ಅಡಿಕೆ ತೋಟ ಹೊಂದಿದ್ದ ಅವರು, ಅಡಿಕೆ ತೋಟ ಎಲೆಚುಕ್ಕಿ ರೋಗಕ್ಕೆ ತುತ್ತಾಗಿತ್ತು. ರೋಗ ನಿಯಂತ್ರಣಕ್ಕೆ ಎಲ್ಲಾ ರೀತಿಯ ಔಷಧ ಸಿಂಪಡಣೆ ಮಾಡಿದ್ದರು. ಆದರೂ ಕೂಡ ರೋಗ ಹತೋಟಿಗೆ ಬಾರದೇ ಅಡಿಕೆ ಮರಗಳು ಒಣಗಲಾರಂಭಿಸಿದ್ದು, ಅಡಿಕೆ ಇಳುವರಿ ಪ್ರಮಾಣವೂ ಕುಸಿದಿತ್ತು. ಇದರಿಂದ ರೈತ ರವೀಂದ್ರ ಚಿಂತೆಗೀಡಾಗಿದ್ದರು ಎನ್ನಲಾಗುತ್ತಿದೆ.
ಮನನೊಂದ ರೈತ ಆತ್ಮಹತ್ಯೆ
ರೈತ ರವೀಂದ್ರ ಜಯಪುರ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೃಷಿಗಾಗಿ 1.50 ಲಕ್ಷ ರೂಪಾಯಿ ಸಾಲ ಮಾಡಿದ್ದು, ಖಾಸಗಿ ವ್ಯಕ್ತಿಗಳಿಂದಲೂ ಕೈಸಾಲ ಮಾಡಿಕೊಂಡಿದ್ದರು. ಅಡಿಕೆ ಇಳುವರಿ ಕಡಿಮೆಯಾಗಿದ್ದು, ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸುವುದು ಹೇಗೆ ಎಂದ ಭೀತಿಗೊಳಗಾಗಿದ್ದರು. ಇದೇ ಕೊರಗಿನಿಂದ ಖಿನ್ನತೆಗೆ ಒಳಗಾಗಿದ್ದ ಅವರು ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದರು. ಕಿಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬಸ್ಥರು ಕೂಡಲೇ ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ರೈತ ರವೀಂದ್ರ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೈತರ ಬೆಂಬಲಕ್ಕೆ ನಿಲ್ಲುತ್ತೇನೆ
ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೈಶುಗರ್ ಕಾರ್ಖಾನೆ ಪುನರಾರಂಭಿಸಲು ವಿಫಲಗೊಂಡಿದ್ದವು. ಆದರೆ ನಮ್ಮ ಬಿಜೆಪಿ ಸರ್ಕಾರ ಕಾರ್ಖಾನೆ ಪುನರಾರಂಭಿಸಿ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ಮಂಡ್ಯದಲ್ಲಿ ಹೇಳಿದ್ದರು. ನಗರದ ಫ್ಯಾಕ್ಟರಿ ವೃತ್ತದ ಬಳಿ ಬುಧವಾರ ಕಾರ್ಯನಿಮಿತ್ತ ತೆರಳುತ್ತಿದ್ದ ವೇಳೆ, ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಬಳಿಕ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆ ಬರುವ ಮುನ್ನವೇ ನನಗೆ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕಿದೆ. ನನಗೆ ಇದು ಮೊದಲೇನಲ್ಲ, ಹಾಗಾಗಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ನಮ್ಮ ಸರ್ಕಾರವೇ ಬರಬೇಕಿತ್ತು. ಇದನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮನಗಾಣಬೇಕಿದೆ. ಬಿಜೆಪಿ ಸರ್ಕಾರವು ಜಿಲ್ಲೆಯ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದೆ ಎಂದಿದ್ದರು.

ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಒಂದು ಖಾತೆಯನ್ನು ವಿಧಾನಸಭಾ ಚುನಾವಣೆಯಲ್ಲಿ ತೆರೆಯುವ ಮೂಲಕ ಶುಭಾರಂಭ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತಯಾಚನೆ ಮಾಡುತ್ತೇವೆ. ಜನರಿಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿದೆ. ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನಗಳಿಸುವ ಉದ್ದೇಶ ಇಟ್ಟುಕೊಂಡಿದ್ದು, ಇದಕ್ಕೆ ತಯಾರಿ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications