Krishi mela: ರಾಯಚೂರಿನಲ್ಲಿ ಸಿರಿಧಾನ್ಯಕ್ಕೆ ಮನಸೋತ ರೈತರು
ರಾಯಚೂರು, ಜನವರಿ, 13: ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯ ಪ್ರೋತ್ಸಾಹಿಸುವ ಮತ್ತು ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಗೆ ಸಂಬಂಧಿಸಿದ ಮಾದರಿಯು ರೈತಾಪಿ ವರ್ಗದವರ ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೃಷಿ ಇಲಾಖೆಯಿಂದ ಆಯೋಜಿಸಿದ ಸಿರಿಧಾನ್ಯದ ಮಾದರಿಯನ್ನು ರೈತರು ಮುಗಿಬಿದ್ದು ವೀಕ್ಷಣೆ ಮಾಡಿದರು. ಅಲ್ಲದೇ ಈ ಬಗ್ಗೆ ಪರಸ್ಪರ ಅಧಿಕಾರಿಗಳ ಬಳಿ ಚರ್ಚಿಸಿ ಮಾಹಿತಿ ಪಡೆದರು.
ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಿರಿ, ಅವುಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ. ಅಧಿಕ ಲಾಭ ಮಾಡಿಕೊಳ್ಳಿ. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಸಿರಿ ಧಾನ್ಯಗಳನ್ನು ಬೆಳೆಯುವುದು, ಬಳಸುವುದಕ್ಕೆ ಜನರನ್ನು ಪ್ರೋತ್ಸಾಹಿಸುವ ಉದ್ದೇಶ ದಿಂದ ಈ ಮಾದರಿಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದರು.

ಪ್ರದೇಶವಾರು ಸಿರಿಧಾನ್ಯ ಬೆಳೆಯ ವಿವರ
ರಾಯಚೂರು ಜಿಲ್ಲೆಯಲ್ಲಿ ರೈತರು ಈ ವರ್ಷ 500 ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೆಳೆದಿದ್ದಾರೆ. ಮುಖ್ಯವಾಗಿ ಲಿಂಗಸುಗೂರು ಮತ್ತು ಸಿರವಾರ ತಾಲೂಕುಗಳಲ್ಲಿ ಸಿರಿಧಾನ್ಯವನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅದರಲ್ಲೂ ನವಣೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 6 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ. ಹಾಗಯೇ ಮಳೆ ನೀರನ್ನು ಸಂರಕ್ಷಣೆ ಮಾಡಿಕೊಂಡು ಸುಸ್ಥಿರ ಕೃಷಿ ಮಾಡುವ ವಿಧಾನವನ್ನು ಕಲಾಕೃತಿ ರೂಪದಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ. ಸಾರ್ವಜನಿಕರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಗುಡ್ಡಗಾಡುಗಳಿಂದ ಮಳೆ ನೀರು ಕೆಳಭಾಗಕ್ಕೆ ಹರಿಯುವಾಗ ಮಣ್ಣನ್ನು ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಅನ್ನುವ ಕುರಿತು ಮತ್ತು ಮಳೆ ನೀರು ಸಂಗ್ರಹಿಸುವ ವಿಧಾನಗಳನ್ನು ಈ ಮಾದರಿ ಮೂಲಕ ಮನವರಿಕೆ ಆಗುವಂತೆ ಮಾಡಲಾಗಿದೆ.

ನೀರನ್ನು ಸಂರಕ್ಷಿಸುವ ವಿಧಾನ
ಚೆಕ್‌ಡ್ಯಾಂ ನಿರ್ಮಾಣ ಮಾಡುವುದು, ನಾಲಾ ಬದುಗಳನ್ನು ನಿರ್ಮಿಸುವುದು, ಕೃಷಿ ಹೊಂಡ ಮಾಡುವುದರಿಂದ ನೀರನ್ನು ಸಂರಕ್ಷಿಸಬಹುದು ಎನ್ನುವುದನ್ನು ತೋರಿಸಲಾಗಿದೆ. ಮಳೆಯಾಶ್ರಿತ ಪ್ರದೇಶದ ರೈತರ ಆದಾಯವನ್ನು ಹೆಚ್ಚಿಸಲು, ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಂಪನ್ಮೂಲಗಳನ್ನು ನಿರ್ವಹಿಸುವ ವಿಧಾನದ ಬಗ್ಗೆ ಮನದಟ್ಟು ಮಾಡಲಾಗಿದೆ. ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದು ಮತ್ತು ಈ ಮೂಲಕ ಕೃಷಿ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು, ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವುದು, ಒಟ್ಟಾರೆ ಮಳೆ ನೀರನ್ನು ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದು ಮತ್ತು ಭೂಮಿ ದೀರ್ಘಕಾಲ ಕಾಪಾಡಿಕೊಳ್ಳುವ ಅಂಶವನ್ನು ಜಲಾನಯನ ಮಾದರಿಯಲ್ಲಿ ಬಿಂಬಿಸಲಾಗಿದೆ.












Click it and Unblock the Notifications