ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಸೆಪ್ಟೆಂಬರ್ 9 ರಿಂದ 12ರವರೆಗೆ ಕೃಷಿ ಮೇಳ, ಕಾರ್ಯಕ್ರಮಗಳ ವಿರವ ತಿಳಿಯಿರಿ
ಧಾರವಾಡ, ಸೆಪ್ಟೆಂಬರ್, 06: ನಗರದ ಕೃಷಿ ವಿಶ್ವವಿದ್ಯಾಲಯವು 2023ರ ಕೃಷಿ ಮೇಳವನ್ನು ಸೆಪ್ಟೆಂಬರ್ 9ರಿಂದ 12ರವರೆಗೆ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ ಅವರು ತಿಳಿಸಿದರು.
ಡಾ.ಪಿ.ಎಲ್. ಪಾಟೀಲ ಅವರು ಇಂದು (ಸೆಪ್ಟೆಂಬರ್ 6) ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೃಷಿ ಮೇಳವನ್ನು ಸೆಪ್ಟೆಂಬರ್ 9ರಂದು ಬೆಳಗ್ಗೆ 11-30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಗೌರವ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಪ್ರಲ್ಹಾದ್ ಜೋಶಿ, ಕಾರ್ಮಿಕ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಸೇರಿದಂತೆ ಇನ್ನಿತರ ಸಚಿವರು, ಶಾಸಕರು ಆಗಮಿಸಲಿದ್ದಾರೆ ಎಂದರು.

ಕೃಷಿ ಸಚಿವರಾದ ಚಲುವರಾಯಸ್ವಾಮಿ ಕೃಷಿ ವಿಶ್ವವಿದ್ಯಾನಿಲಯದ ಪ್ರಕಟಣೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ವಿನಯ ಕುಲಕರ್ಣಿ ವಹಿಸಲಿದ್ದಾರೆ ಎಂದರು. ಹಾಹೆಯೇ ಈ ಕೃಷಿ ಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕೃಷಿಮೇಳ ಪ್ರಮುಖ ಆಕರ್ಷಣೆಗಳು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023, ಸಾವಯವ ಕೃಷಿ ಬೆಳಗಳು, ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ, ಇದರ ಜೊತೆಗೆ ಸಂಶೋಧನೆ ಮಾಡಿದ ವಿವಿಧ ತಳಿಗಳು ಹಾಗೂ ಆಧುನಿಕ ಕೃಷಿ ತಂತದಾನಗಳ ಮಾಹಿತಿ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಬರ ನಿರ್ವಹಣಾ, ಜಲಾನಯನ ಅಭಿವೃದ್ಧಿ, ಮಣ್ಣು ಆರೋಗ್ಯ, ಜಲಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತು ಅವಕಾಶಗಳನ್ನು ಬಿಂಬಿಸುವ ಪದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಕೃಷಿ ಮೇಳದ ಅಂಗವಾಗಿ ಫಲಪುಷ್ಪ ಮತ್ತು ತರಕಾರಿ ಬೆಳೆಗಳ ಪ್ರದರ್ಶನ, ಪರಿಸರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಯಶಸ್ವಿ ರೈತರೊಂದಿಗೆ ಸಂವಾದ, ಕೃಷಿ ಸಮಾಲೋಚನೆ, ವಿವಿಧ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ, ಅರಣ್ಯ ಜಾನುವಾರುಗಳ ಪ್ರದರ್ಶನ ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ಅನುಷ್ಠಾನಗೊಂಡಿರುವ ವಿವಿಧ ಪ್ರಾತ್ಯಕ್ಷಿಕೆಗಳ ವೀಕ್ಷಣೆ ಮತ್ತು ಪ್ರದರ್ಶನ, ವಸ್ತ್ರ ವಿನ್ಯಾಸ, ವಿವಿಧ ಸಂಘ-ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿ ಇತ್ಯಾದಿ ವಿಶಿಷ್ಟ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸಲಾಗುತ್ತಿದೆ ಎಂದರು.
ಆದಾಯ ದ್ವಿಗುಣಗೊಳಿಸುವ ಎಂಬ ರೈತರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯ ವಿಶೇಷ ಸಾಧನೆಗೈದ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು. ಇದರೊಂದಿಗೆ ವಿವಿಧ ಅಭಿವೃದ್ಧಿ ಇಲಾಖೆಗಳು, ಬೀಜ, ಗೊಬ್ಬರ, ಕೀಟನಾಶಕ ಉತ್ಪಾದಿಸುವ ಘಟಕಗಳು ಮತ್ತು ಅನೇಕ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು, 450ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗವಹಿಸುವುದರಿಂದ ರೈತರಿಗೆ ಸೂಕ್ತ ಮಾಹಿತಿ ಹಾಗೂ ಕೃಷಿ ಪರಿಕರ ಲಭ್ಯವಾಗಲಿವೆ.
ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಕೃಷಿಮೇಳದಲ್ಲಿ ಭಾಗವಹಿಸಲು ಸೂಕ್ತ ನಿರ್ದೆಶನ ನೀಡುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ವಿಸ್ತರಣಾ ಕಾರ್ಯಕರ್ತರು ಸಕೀಯವಾಗಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಮಳಿಗೆಗಳನ್ನು ಕಾಯ್ದಿರಿಸಲು (0836-2214468, 8277478507), ಅಧ್ಯಕ್ಷರು, ವಸ್ತು ಪ್ರದರ್ಶನ ಸಮಿತಿ, ಕೃಷಿ ಮೇಳ -2023 ಕೃವಿನಿ, ಧಾರವಾಡ ಇವರನ್ನು ಸಂಪರ್ಕಿಸಬಹುದಾಗಿದೆ.
ಈ ವೇಳೆ ಡಾ.ಎಸ್.ಎಸ್.ಅಂಗಡಿ, ಡಾ.ಬಿ.ಡಿ. ಬಿರಾದಾರ, ಡಾ.ಎಸ್.ಎನ್. ಜಾಧವ ಸೇರಿದಂತೆ ಕೃಷಿ ವಿಜ್ಞಾನಿಗಳು, ಪ್ರಾಧ್ಯಾಪಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications