ಬೆಂಗಳೂರು ಕೃಷಿ ವಿವಿ ಕೃಷಿ ಮೇಳ 2023; ದಿನಾಂಕ, ವಿಶೇಷತೆಗಳು
ಬೆಂಗಳೂರು, ಅಕ್ಟೋಬರ್ 18: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ಮೇಳ 2023ರ ದಿನಾಂಕ ಘೋಷಣೆ ಮಾಡಿದೆ. ಕೃಷಿ ಮೇಳದಲ್ಲಿ ಮೊದಲ ಬಾರಿಗೆ 'ಬೀಜ ಸಂತೆ' ಆಯೋಜನೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಈ ಬಾರಿಯ ಕೃಷಿ ಮೇಳದ ಘೋಷವಾಕ್ಯ 'ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು' ಎಂಬುದಾಗಿದೆ.
ಬೆಂಗಳೂರು ನಗರದ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ಯಲ್ಲಿ ಕೃಷಿ ಮೇಳ 2023 ನವೆಂಬರ್ 17 ರಿಂದ 20ರ ತನಕ ನಡೆಯಲಿದೆ. ರಾಜ್ಯದಲ್ಲಿನ ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಬೀಜ ಸಂತೆ ಆಯೋಜನೆ ಮಾಡಲಾಗುತ್ತಿದೆ.

ಈ ಬಾರಿಯ ಕೃಷಿ ಮೇಳದ ವಿಶೇಷತೆಗಳಲ್ಲಿ ಬೀಜೋತ್ಪಾದನೆಯಿಂದ ಆದಾಯಗಳಿಸಲು ರೈತರಿಗೆ ಮಾರ್ಗದರ್ಶನ, ಸಿರಿಧಾನ್ಯ, ಎಣ್ಣೆಕಾಳು ಮತ್ತು ತರಕಾರಿ ಬೀಜಗಳ ಮಾರಾಟ, ಬರಗಾಲದಲ್ಲಿ ಕಡಿಮೆ ನೀರು ಬಳಕೆ ಮಾಡಿಕೊಂಡು ತಳಿಗಳನ್ನು ಬೆಳೆಯಲು ಉತ್ತೇಜನ ನೀಡುವುದು ಸೇರಿವೆ.
ಕೃಷಿ ಮೇಳದ ವಿವರಗಳು; ಕೃಷಿ ಮೇದಲ್ಲಿ ಇದೇ ಮೊದಲ ಬಾರಿಗೆ ಕುಲಪತಿಗಳು ಬೀಜ ಸಂತೆ ಆಯೋಜನೆ ಮಾಡಲು ಸೂಚನೆ ನೀಡಿದ್ದಾರೆ. ಈ ಮೇಳದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.
ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಸುಮಾರು ಸಾವಿರ ರೈತರು 1500 ಎಕರೆಗೂ ಅಧಿಕ ಪ್ರದೇಶದಲ್ಲಿ ಬೀಜೋತ್ಪಾದನೆ ಕೈಗೊಂಡಿದ್ದಾರೆ. ಇಂತಹ ಜಮೀನುಗಳಲ್ಲಿ ಬೆಳೆದ ಬೀಜಗಳನ್ನು ಸಂಸ್ಕರಣೆ ಮಾಡಿ, ಕೃಷಿ ಮೇಳದಲ್ಲಿ ಮಾಹಿತಿ ನೀಡಿ, ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕೃಷಿ ಮೇಳದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಎಣ್ಣೆಕಾಳು ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆ, 100ಕ್ಕೂ ಅಧಿಕ ಖಾಸಗಿ ಕಂಪನಿಗಳು ಬೀಜೋತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ, ಮಾರಾಟದ ಕುರಿತು ರೈತರ ಜೊತೆ ಮಾಹಿತಿ ಹಂಚಿಕೊಳ್ಳಲಿವೆ.
ಸಾಮೆ, ರಾಗಿ, ನವಣೆ, ಬರಗು, ಹಾರಕ ಸೇರಿದಂತೆ ಸಿರಿಧಾನ್ಯಗಳು. ದ್ವಿದಳ ಧಾನ್ಯ, ಎಣ್ಣೆಕಾಳು, ಮೇವಿನ ಬೆಳೆ, ಹಣ್ಣು ಮತ್ತು ತರಕಾರಿ ಬೀಜಗಳನ್ನು ಕೃಷಿ ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಬೀಜೋತ್ಪಾದನೆ ಬಗ್ಗೆ ರೈತರಿಗೆ ಸಮಗ್ರ ವಿವರ ನೀಡಲು ಕೃಷಿ ವಿವಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನೈಋತ್ಯ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ರಾಗಿ, ಭತ್ತ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತದೆ. ಅದರಲ್ಲೂ ಯುವ ರೈತರು ಕೃಷಿಯ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ಅವರಿಗೆ ಸಹಾಯಕವಾಗುವಂತೆ ಉತ್ತೇಜನ ನೀಡಲು ವಿವಿ ತೀರ್ಮಾನಿಸಿದೆ.
ಬೀಜೋತ್ಪಾದನೆ ಕೈಗೊಂಡಿರುವ ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಯಶಸ್ವಿ ರೈತರು ತಮ್ಮ ಅನುಭವ ಹಂಚಿಕೊಳ್ಳಲು ಕೃಷಿ ವಿವಿ, ಕೃಷಿ ಸಂಶೋಧನಾ ಕೇಂದ್ರ, ತಜ್ಞರು ಆಯೋಜಿಸುವ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಪ್ರದಾಯಿಕ ತಳಿಗಳ ಬೀಜ ಮಾರಾಟ ಮಾಡುವ ರೈತರಿಗೆ ಸಹ ಕೃಷಿ ಮೇಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಆಕರ್ಷಣೆಗಳು
* ಕೃಷಿಯ ನೂತನ ತಂತ್ರಜ್ಞಾನದ ಮಾಹಿತಿ, ಜಲಾನಯನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ಹಂಚಿಕೆ
* ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ
* ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಮಹತ್ವದ ಕುರಿತು ಮಾಹಿತಿ ಹಂಚಿಕೆ
* ಮಳೆ, ಮೇಲ್ಛಾವಣಿ ನೀರು ಕೊಯ್ಲು ಕುರಿತು ಮಾಹಿತಿ
* ಕೃಷಿಯಲ್ಲಿ ಡ್ರೋನ್ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ
* ಹನಿ, ತುಂತುರು ಮತ್ತು ಸಾವಯವ ಕೃಷಿಯ ಕುರಿತು ಅಗತ್ಯ ಮಾಹಿತಿ ಹಂಚಿಕೆ
* ಸುಧಾರಿತ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ
* ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆಗಳು












Click it and Unblock the Notifications